ರಾಯಚೂರು: ಸಾರಿಗೆ ಬಸ್ ಮತ್ತು ಶಾಲಾ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 32 ವಿದ್ಯಾರ್ಥಿಗಳು ಗಾಯಗೊಂಡಿರುವಂತಹ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದಲ್ಲಿ ನಡೆದಿದೆ. ಸಮರ್ಥ್(7), ಶ್ರೀಕಾಂತ್(12) ಮೃತ ವಿದ್ಯಾರ್ಥಿಗಳು. 32 ಜನರ ಪೈಕಿ 18 ಗಾಯಾಳುಗಳಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಮತ್ತು 14 ವಿದ್ಯಾರ್ಥಿಗಳಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಖಾಸಗಿ ಶಾಲೆಯ ಬಸ್ವೊಂದು ಮಕ್ಕಳನ್ನು ಕರೆದುಕೊಂಡು ಕಪಗಲ್ನಿಂದ ಮಾನ್ವಿ ಕಡೆ ಹೊರಟಿತ್ತು. ಸಾರಿಗೆ ಬಸ್ ಸಿಂಧನೂರು ಕಡೆಯಿಂದ ರಾಯಚೂರು ಕಡೆಗೆ ಹೊರಟ್ಟಿದ್ದಾಗ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಮಕ್ಕಳಿಬ್ಬರ ಕಾಲು ತುಂಡಾಗಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕುಡಿ ಗ್ರಾಮದ ಓರ್ವ ಬಾಲಕ ಮತ್ತು ಬಾಲಕಿ ಮೃತಪಟ್ಟಿದ್ದಾರೆ. ರಿಮ್ಸ್ ಆಸ್ಪತ್ರೆಗೆ ಎಸ್ಪಿ ಮತ್ತು ಡಿಸಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ರಿಮ್ಸ್ ಆಸ್ಪತ್ರೆ ಮುಂಭಾಗ ಮುಟ್ಟಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಕ್ಕಳ ಕಾಲು ತುಂಡಾಗಿರುವ ಸ್ಥಿತಿ ಕಂಡು ಕಣ್ಣೀರು ಹಾಕುತ್ತಿದ್ದಾರೆ.
ಎರಡು ಬಸ್ಗಳ ನಡುವೆ ಅಪಘಾತದಿಂದಾಗಿ ಸಿಂಧನೂರು- ರಾಯಚೂರು ಮಾರ್ಗದ ರಸ್ತೆ ಬಂದ್ ಆಗಿದೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಶಾಲಾ ಬಸ್ನಲ್ಲಿ ಒಟ್ಟು 32 ಮಕ್ಕಳ ಪೈಕಿ 18 ಜನರಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದ 14 ಮಕ್ಕಳಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಪೈಕಿ ಮೂವರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ.
ಭೀಕರ ಅಪಘಾತ: ಇಬ್ಬರು ವಿದ್ಯಾರ್ಥಿಗಳು ಸಾವು: ತುಂಡಾಯ್ತು ಮಕ್ಕಳ ಕಾಲುಗಳು
