ಮಂಡಿನೋವು ವಿಶ್ವದ ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುವ ಅನಾರೋಗ್ಯವಾಗಿದೆ. ಮಂಡಿನೋವಿಗೆ ಕಾರಣ ಹುಡುಕಹೊರಟರೆ ಹಲವಾರು ವಿಭಿನ್ನವಾದ ಮಾಹಿತಿಗಳು ದೊರಕುತ್ತವೆ. ಅತಿ ಸಾಮಾನ್ಯವಾದ ಕಾರಣಗಳೆಂದರೆ ಮಂಡಿಯೂರಿ ಬಿದ್ದು ಆದ ಪೆಟ್ಟು, ಮೂಳೆಸಂಧಿಗಳ ಸವೆತ, ಸಂಥಿವಾತ, ಸೋಂಕು, ಮೊಣಕಾಲಿನ ಚಿಪ್ಪು ಸ್ಥಾನಪಲ್ಲಟಗೊಂಡಿರುವುದು, ಮೂಳೆಗಳು ಶಿಥಿಲವಾಗುವ , ಮೂಳೆಗಳ ಸಂಧುಗಳಲ್ಲಿ ಭಾರವನ್ನು ತಡೆದುಕೊಳ್ಳಲು ಇರುವ ಅಂಗವಾದ bursae ಸೋಂಕಿಗೆ ಒಳಗಾದರೆ ಎದುರಾಗುವ bursitis, ಮೂಳೆಗಳ ಅಂಚುಗಳಲ್ಲಿ ಚಿಕ್ಕದಾಗಿ ತುಂಡಾಗಿರುವುದು, ಮೂಳೆ ಮತ್ತು ಸ್ನಾಯುಗಳನ್ನು ಬಂಧಿಸುವ Tendon ಎಂಬ ಭಾಗ ಸೆಳೆತಕ್ಕೊಳಗಾಗಿ ಅಪಾರ ನೋವು ಎದುರಾಗುವ (ಟೆನ್ನಿಸ್ ಎಲ್ಬೋ ಕಾಯಿಲೆ) ಕಾರಣವಾಗುವ tendonitis ಮೊದಲಾದ ಸ್ಥಿತಿಗಳು ಪ್ರಮುಖವಾಗಿವೆ. ಮಂಡಿನೋವಿನ ತೀವ್ರತೆ ಆ ನೋವಿಗೆ ಕಾರಣವಾದ ಅಂಶ ಎಷ್ಟು ಮಟ್ಟಿಗೆ ಆವರಿಸಿದೆ ಎಂಬುದನ್ನು ಅನುಸರಿಸಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಮಂಡಿನೋವಿತ ಸಾಮಾನ್ಯ ಲಕ್ಷಣಗಳೆಂದರೆ ತಾಳಲಾರದ ನೋವು, ಮೂಳೆಗಳು ಒತ್ತಿದರೆ ಚಿಕ್ಕ ಗುಂಡಿ ಬೀಳುವಷ್ಟು ಮೃದುವಾಗುವುದು, ಮಡಚಲೂ ಆಗದಷ್ಟು ದೃಢವಾಗುವುದು, ಮಡಚಲು ಭಾರೀ ಕಷ್ಟವಾಗುವುದು ಹಾಗೂ ಕೆಲವೊಮ್ಮೆ ಮಂಡಿಯ ಒಳಭಾಗದಲ್ಲಿ ದ್ರವ ತುಂಬಿಕೊಂಡು ಊದಿಕೊಳ್ಳುವುದು .
ಕೆಲವೊಮ್ಮೆ ಸಾಮಾನ್ಯ ಉಳುಕು ಅಥವಾ ಮಂಡಿಗೆ ಆದ ಗಾಯದ ಕಾರಣ ಒಳಭಾಗದ ನರಗಳು ಸೀಳಿ ರಕ್ತಹೊರಚೆಲ್ಲುವ ಮೂಲಕವೂ ಮಂಡಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆದರೆ ಇದು ತಾತ್ಕಾಲಿಕವಾಗಿದ್ದು ಸಾಕಷ್ಟು ವಿಶ್ರಾಂತಿ ಹಾಗೂ ಸುಲಭವಾದ ಮತ್ತು ಸರಳವಾದ ಆಯುರ್ವೇದೀಯ ಮನೆಮದ್ದುಗಳನ್ನು ಅನುಸರಿಸುವ ಮೂಲಕ ಈ ನೋವು ಶೀಘ್ರವೇ ಕಡಿಮೆಯಾಗುತ್ತದೆ. ಮಂಡಿನೋವಿಗೆ ಸುಲಭ ಹಾಗೂ ನೈಸರ್ಗಿಕ ಆಯುರ್ವೇದೀಯ ಪರಿಹಾರಗಳು.
ಅರಿಶಿನ
ಇದು ಸಾಮಾನ್ಯ ಸಾಂಬಾರ ಪದಾರ್ಥವಾಗಿದ್ದರೂ ಅತಿ ಹೆಚ್ಚು ಸಂಶೋಧನೆಗೊಳಪಟ್ಟ ಸಾಮಾಗ್ರಿಯಾಗಿದೆ. ಇದರಲ್ಲಿರುವ ಅದ್ಭುತ ಗುಣಪಡಿಸುವ ಮತ್ತು ಪ್ರತಿಜೀವಕ ಗುಣಗಳು ಇದಕ್ಕೆ ‘ಹಳದಿ ಅದ್ಭುತ’ ಎಂಬ ವಿಶೇಷಣವನ್ನು ದಯಪಾಲಿಸಿವೆ. ಅರಿಶಿನ ಹಲವಾರು ತೊಂದರೆಗಳಿಗೆ ಚಿಕಿತ್ಸೆಯ ರೂಪದಲ್ಲಿ ಬಳಸಬಹುದಾಗಿದೆ, ವಿಶೇಷವಾಗಿ ಉರಿಯೂತದ ಕಾರಣದಿಂದಾಗಿ ಎದುರಾಗಿರುವ ಕಾಯಿಲೆಗಳಿಗೆ ಉತ್ತಮ ಉಪಶಮನ ಒದಗಿಸುತ್ತದೆ. ಸಂಧಿವಾತವೂ ಉರಿಯೂತದ ಕಾರಣದಿಂದ ಎದುರಾಗಿರುವುದರಿಂದ ಅರಿಶಿನ ಇಲ್ಲಿಯೂ ತನ್ನ ಪ್ರಾಬಲ್ಯವನ್ನು ಮೆರೆಯಲಿದೆ. ಕೊಂಚ ಅರಿಶಿನವನ್ನು ನೀರಿನೊಂದಿಗೆ ಬೆರೆಸಿ ಲೇಪನ ತಯಾರಿಸಿ ನೋವಿದ್ದ ಕಡೆ ದಿನಕ್ಕೆರಡು ಬಾರಿ ಕೊಂಚವೇ ಮಸಾಜ್ ನೊಂದಿಗೆ ಹಚ್ಚಿ ಒಣಗಲು ಬಿಡಿ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡರೆ ಶೀಘ್ರವೇ ನೋವು ಕಡಿಮೆಯಾಗುತ್ತದೆ.
ಹಸಿಶುಂಠಿ
ಆಯುರ್ವೇದ ಹಲವಾರು ಕಾಯಿಲೆಗಳನ್ನು ಗುಣಪಡಿಸಲು ಹಾಗೂ ಪುನಃಶ್ಚೇತನಗೊಳಿಸಲು ಹಸಿಶುಂಠಿಯನ್ನು ಬಳಸುತ್ತಾ ಬಂದಿದೆ. ಇದರ ಉರಿಯೂತ ನಿವಾರಕ ಗುಣದಿಂದಾಗಿ ಹಸಿಶುಂಠಿಯನ್ನು ಹೆಚ್ಚಿನ ಎಲ್ಲಾ ಆಹಾರಗಳಲ್ಲಿ ಬಳಸಬಹುದು. ಒಣಶುಂಠಿಯಿಂದ ಹಿಂಡಲ್ಪಟ್ಟ ಶುಂಠಿಯ ಎಣ್ಣೆಯನ್ನು ಹಚ್ಚಿಕೊಳ್ಳುವ ಹಾಗೂ ಹಸಿಶುಂಠಿಯನ್ನು ಬೆರೆಸಿ ತಯಾರಿಸಿದ ಟೀ ಕುಡಿಯುವ ಮೂಲಕ ಮಂಡಿನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಅಶ್ವಗಂಧ
ಸಂಸ್ಕೃತದ ಈ ಶಬ್ದವನ್ನು ಕನ್ನಡಕ್ಕೆ ಭಾಷಾಂತರಿಸಿದರೆ ಕುದುರೆಯ ಕಂಪು ಎಂಬ ಅರ್ಥ ಬರುತ್ತದೆ. ಇದಕ್ಕೊಂದು ಕಾರಣವೂ ಇದೆ. ಈ ಮೂಲಿಕೆಯನ್ನು ಸೇವಿಸಿದ ವ್ಯಕ್ತಿ ಕುದುರೆಯಷ್ಟು ಬಲವನ್ನು ಮತ್ತು ಕುದುರೆಯಂತಹ ಹುರುಪನ್ನೂ ಪಡೆಯುತ್ತಾನೆ ಎಂದು ನಂಬಲಾಗಿದೆ. ಈ ಮೂಲಿಕೆಯಿಂದ ನಿವಾರಿಸಿದ ಸಾರದಲ್ಲಿ ಪ್ರಬಲ ಉರಿಯೂತ ನಿವಾರಕ ಗುಣವಿದ್ದು ಮಂಡಿನೋವು ಶೀಘ್ರವೇ ಗುಣವಾಗಲು ನೆರವಾಗುತ್ತದೆ.
ಶತಾವರಿ
ಶತಾವರಿಯಲ್ಲಿರುವ ಗುಣಪಡಿಸುವ ಗುಣಗಳು ಹಲವಾರು ಕಾಯಿಲೆಗಳಿಗೆ ಔಷಧಿಯಾಗಿದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣವೂ ಮಂಡಿನೋವು, ಸೆಳೆತ, ಉಳುಕು ಮೊದಲಾದವುಗಳನ್ನು ಕಡಿಮೆಗೊಳಿಸಲು ಹಾಗೂ ವಿಶೇಷವಾಗಿ ಊದಿಕೊಂಡಿರುವ ಮಂಡಿಯನ್ನು ಗುಣಪಡಿಸಲು ನೆರವಾಗುತ್ತದೆ.
ತ್ರಿಫಲ
‘ಜೀವನದ ಮಕರಂದ’ ಎಂಬ ಅನ್ವರ್ಥನಾಮವನ್ನು ಪಡೆದಿರುವ ಈ ತ್ರಿಕೋಣಾಕಾರದ ಗಿಡಮೂಲಿಕೆಯೂ ಹಲವಾರು ಅದ್ಭುತ ಗುಣಪಡಿಸುವ ಗುಣಗಳನ್ನು ಹೊಂದಿದೆ. ಇದರಲ್ಲಿ ಉರಿಯೂತ ನಿವಾರಕ ಗುಣ ಪ್ರಮುಖವಾಗಿದ್ದು ಗಾಯಗಳನ್ನು ಮಾಗಿಸುವ ಗತಿಯನ್ನು ತೀವ್ರಗೊಳಿಸುತ್ತದೆ. ವಿಶೇಷವಾಗಿ ಮೂಳೆಗಳನ್ನು ದೃಢಗೊಳಿಸುವ ಹಲವಾರು ಪೋಷಕಾಂಶಗಳು ಹಾಗೂ ಖನಿಜಗಳು ಈ ಮೂಲಿಕೆಯಲ್ಲಿದೆ ಹಾಗೂ ದೇಹದಿಂದ ಹೆಚ್ಚುವರಿ ಯೂರಿಕ್ ಆಮ್ಲವನ್ನು ದೇಹದಿಂದ ಹೊರದಬ್ಬುವ ಮೂಲಕ ಇನ್ನಷ್ಟು ಉರಿಯೂತಕ್ಕೆ ಒಳಗಾಗುವುದರಿಂದ ತಪ್ಪಿಸಿ ಮಂಡಿನೋವು, ಸಂಧಿವಾತ, ಊದಿಕೊಂಡ ಗಂಟು ಮೊದಲಾದ ತೊಂದರೆಗಳಿಂದ ಪರಿಹಾರ ಒದಗಿಸುತ್ತದೆ.
ಮಸಾಜ್
ಮಂಡಿನೋವನ್ನು ಕಡಿಮೆ ಮಾಡಲು ಕೆಲವು ಬಗೆಯ ಮಸಾಜ್ ಗಳು ನೆರವಾಗಬಹುದು. ಮಂಡಿಗಳನ್ನು ಸುತ್ತುವರೆದಿರುವ ಸ್ನಾಯುಗಳನ್ನು ನಿರಾಳಗೊಳಿಸಿ ಒತ್ತಡ ನಿವಾರಿಸುವ ಮೂಲಕ ಮಂಡಿನೋವನ್ನು ಗುಣಪಡಿಸಲು ಸಾಧ್ಯವಾಗುತ್ತದೆ. ಮಸಾಜ್ ನಿಂದ ಉತ್ತಮ ರಕ್ತಪರಿಚಲನೆ ದೊರೆತು ಬಾವು ಕಡಿಮೆಯಾಗುತ್ತದೆ ಹಾಗೂ ಚಲನವಲನಗಳನ್ನು ಸುಲಭವಾಗಿಸುತ್ತದೆ.
ವ್ಯಾಯಾಮ
ಮಂಡಿನೋವನ್ನು ಕಡಿಮೆಗೊಳಿಸಲು ಕೆಲವಾರು ಯೋಗಾಸನಗಳು ನೆರವಾಗುತ್ತವೆ ಹಾಗೂ ಇವು ಸಾವಿರಾರು ವರ್ಷಗಳಿಂದ ಬಳಕೆಯಲ್ಲಿವೆ. ಕೆಲವಾರು ಸುಲಭವಾದ ಆಸನಗಳಿದ್ದು ಇವು ಮಂಡಿನೋವನ್ನು ಕಡಿಮೆಗೊಳಿಸುವ ಜೊತೆಗೇ ದೇಹವನ್ನೂ ದೃಢಗೊಳಿಸುತ್ತವೆ ಹಾಗೂ ಸಂಧಿವಾತವನ್ನು ಸುಲಭವಾಗಿ ನಿರ್ವಹಿಸಲು ನೆರವಾಗುತ್ತವೆ. ಒಂದು ವೇಳೆ ಮಂಡಿನೋವಿನೊಂದಿಗೆ ಬೆನ್ನುನೋವು, ಸ್ನಾಯುಗಳ ಸೆಡೆತ, ಕಾಲು ಮಡಚಲಿಕ್ಕಾಗದೇ ಇರುವುದು, ಉರಿಯೂತ ಮೊದಲಾದ ತೊಂದರೆಗಳಿದ್ದಾಗ ಈ ಸುಲಭ ಯೋಗಾಸನಗಳು ನೆರವಿಗೆ ಬರುತ್ತವೆ.
ಆಯುರ್ವೇದ
ವೈದ್ಯರನ್ನು ಭೇಟಿ ಮಾಡಿ ಮಂಡಿನೋವು, ರ್ಹೂಮ್ಯಾಟಿಕ್ ನೋವು, ಸಂಧಿವಾತ, ಊದಿಕೊಳ್ಳುವುದು, ಸ್ನಾಯುಗಳ ನೋವು, ಮೊದಲಾದವುಗಳನ್ನು ಪರಿಹರಿಸಿಕೊಳ್ಳಲು ಈ ಆಯುರ್ವೇದೀಯ ಮನೆಮದ್ದುಗಳು ಉತ್ತಮವಾಗಿವೆ. ಅಲ್ಲದೇ ಬೆನ್ನುಮೂಳೆ ಸರಿಯುವ spondylitis ಹಾಗೂ ಸಂಧಿವಾತವನ್ನೂ ಯಾವುದೇ ಅಡ್ಡಪರಿಣಾಮವಿಲ್ಲದೇ ಕಡಿಮೆಗೊಳಿಸಿತ್ತದೆ. ಒಂದು ವೇಳೆ ನೋವು ತೀವ್ರವಾಗಿದ್ದು ತಡೆಯಲಸಾಧ್ಯ ಎನ್ನುವಷ್ಟಿದ್ದರೆ ಯಾವುದೇ ವಿಧಾನವನ್ನು ತಾವಾಗಿ ಅನುಸರಿಸುವ ಮುನ್ನ ಆಯುರ್ವೇದ ವೈದ್ಯರನ್ನು ಕಂಡು ಅವರ ಸಲಹೆಯ ಮೇರೆಗೆ ಸೂಕ್ತವಾದ ಔಷಧಿಯನ್ನು ಹಾಗೂ ಮಸಾಜ್ ಗಳನ್ನು ಪಡೆದುಕೊಳ್ಳಬೇಕು.