ಮಂಡ್ಯ:2023ರ ವಿಧಾನಸಭಾ ಚುನಾವಣೆಗೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.
ನಿರೀಕ್ಷೆಯಂತೆ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಅಶೋಕ್ ಜಯರಾಮ್, ಮದ್ದೂರು ಕ್ಷೇತ್ರದಿಂದ ಎಸ್.ಪಿ. ಸ್ವಾಮಿ, ಶ್ರೀರಂಗಪಟ್ಟಣ ಕ್ಷೇತ್ರದಿಂದ ಎಸ್.ಸಚ್ಚಿದಾನಂದ, ಮೇಲುಕೋಟೆ ಕ್ಷೇತ್ರದಿಂದ ಡಾ.ಎನ್.ಎಸ್.ಇಂದ್ರೇಶ್, ಕೆ.ಆರ್. ಪೇಟೆ ಕ್ಷೇತ್ರದಿಂದ ಕೆ.ಸಿ.ನಾರಾಯಣಗೌಡ, ಮಳವಳ್ಳಿ ಜಿ. ಮುನಿರಾಜು, ಹಾಗೂ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಸುಧಾ ಶಿವರಾಮೇಗೌಡ ಅವರನ್ನು ಹುರಿಯಾಳುಗಳನ್ನಾಗಿ ಮಾಡಿ ಕಣಕ್ಕಿಳಿಸಿದೆ.
ನಾಗಮಂಗಲ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ ಯಾವುದೇ ಕ್ಷೇತ್ರದಲ್ಲೂ ಬಿಜೆಪಿ ಟಿಕೆಟ್ ಗೆ ತೀವ್ರ ಪೈಪೋಟಿ ಕಂಡುಬಂದಿರಲಿಲ್ಲ. ನಾಗಮಂಗಲ ಕ್ಷೇತ್ರದಲ್ಲಿ ಫೈಟರ್ ರವಿ ಹಾಗೂ ಇತ್ತೀಚೆಗೆ ಪಕ್ಷ ಸೇರಿದ ಎಲ್.ಆರ್.ಶಿವರಾಮೇಗೌಡ ಅವರ ನಡುವೆ ಬಿರುಸಿನ ಪೈಪೋಟಿ ಏರ್ಪಟ್ಟಿತ್ತು. ಫೈಟರ್ ರವಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದರಿಂದ ಪಕ್ಷಕ್ಕೆ ಮುಜುಗರವಾಗುವುದನ್ನು ತಪ್ಪಿಸಲು ಅವರಿಗೆ ಟಿಕೆಟ್ ನೀಡಿಲ್ಲ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ.
ಇದರ ಜೊತೆಗೆ ಮತ್ತೊಬ್ಬ ಟಿಕೆಟ್ ಆಕಾಂಕ್ಷಿಯಾಗಿದ್ದ ಎಲ್.ಆರ್. ಶಿವರಾಮೇಗೌಡ ಅವರು ವಿವಾದಾತ್ಮಕ ಹೇಳಿಕೆಗಳಿಂದ ಅಪಖ್ಯಾತಿಗೆ ಗುರಿಯಾಗಿದ್ದರು.
ಆ ಹಿನ್ನೆಲೆಯಲ್ಲಿ ಶಿವರಾಮೇಗೌಡರ ಪತ್ನಿ ಸುಧಾ ಶಿವರಾಮೇಗೌಡ ಅವರಿಗೆ ಬಿಜೆಪಿ ಟಿಕೆಟ್ ನೀಡಿ ಹೊಸ ತಂತ್ರಗಾರಿಕೆಯನ್ನು ರೂಪಿಸಿದೆ.
ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ದಿವಂಗತ ಎಸ್.ಡಿ. ಜಯರಾಮ್ ಪುತ್ರ ಅಶೋಕ್ ಜಯರಾಮ್ ಅವರಿಗೆ ಟಿಕೆಟ್ ನೀಡುವುದರೊಂದಿಗೆ ಯುವಕರಿಗೆ ಮನ್ನಣೆ ನೀಡಿದೆ.ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಿದ್ದ ಅಶೋಕ್ ಜಯರಾಮ್ ಹಲವು ಚುನಾವಣೆಗಳಿಂದ ಜೆಡಿಎಸ್ ಟಿಕೆಟ್ ವಂಚಿತರಾಗಿದ್ದರು.ಈ ಕಾರಣದಿಂದ ಕಳೆದೊಂದು ವರ್ಷದ ಹಿಂದೆ ಬಿಜೆಪಿ ಸೇರಿ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರಿಂದ ಅವರಿಗೆ ಪಕ್ಷ ಟಿಕೆಟ್ ನೀಡಿದೆ.
ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಸಂಸದ ಸುಮಲತಾ ಬೆಂಬಲಿಗರಾಗಿರುವ ಎಸ್.ಸಚ್ಚಿದಾನಂದ ಅವರಿಗೆ ಟಿಕೆಟ್ ನೀಡಿದೆ.ಕಾಂಗ್ರೆಸ್ ಪಕ್ಷದಲ್ಲಿದ್ದು ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸಿದರೆಂಬ ಕಾರಣಕ್ಕೆ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಎಸ್.ಸಚ್ಚಿದಾನಂದ ಆನಂತರದಲ್ಲಿ ಸುಮಲತಾ ನಿರ್ದೇಶನದಂತೆ ಬಿಜೆಪಿ ಸೇರಿದ್ದರು.ಸಚ್ಚಿದಾನಂದಗೆ ಟಿಕೆಟ್ ನೀಡಿರುವುದರ ಹಿಂದೆ ಸುಮಲತಾ ಪ್ರಭಾವವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಪ್ರಬಲ ರೈತ ಮುಖಂಡರಾಗಿದ್ದ ಕೆ.ಎಸ್.. ನಂಜುಂಡೇಗೌಡ ಅವರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹಲವು ಚುನಾವಣೆಗಳನ್ನು ಎದುರಿಸಿ ಸೋತಿದ್ದ ನಂಜುಂಡೇಗೌಡರು ಬಿಜೆಪಿ ಸೇರಿ ಅಭ್ಯರ್ಥಿಯಾಗಲು ಬಯಸಿದ್ದರು.ಆದರೆ, ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಬೆಂಬಲಿಗ ಎಸ್.ಸಚ್ಚಿದಾನಂದ ಅವರಿಗೆ ಟಿಕೆಟ್ ದೊರಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಳವಳ್ಳಿ ವಿಧಾನಸಭಾ ಕ್ಷೇತ್ರದಿಂದ ಮುನಿರಾಜು ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.2013ರ ಚುನಾವಣೆಯಲ್ಲಿ ಮಳವಳ್ಳಿ ಕ್ಷೇತ್ರದಿಂದ ಕೆಜೆಪಿಯಿಂದ ಸ್ಪರ್ಧಿಸಿದ್ದ ಮುನಿರಾಜು ಅವರು 25,000ಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿ ಮಾಜಿ ಸಚಿವ ಬಿ.ಸೋಮಶೇಖರ್ ಅವರಿಗೆ ಟಿಕೆಟ್ ನೀಡಿತ್ತು.ಆದರೆ ಅವರು ಕೇವಲ ಎರಡು ಸಾವಿರ ಮತಗಳನ್ನು ಗಳಿಸುವುದರೊಂದಿಗೆ ಠೇವಣಿ ಕಳೆದುಕೊಂಡಿದ್ದರು.ಈ ಬಾರಿಯೂ ಬಿ.ಸೋಮಶೇಖರ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಮುನಿರಾಜು ಅವರಿಗೆ ಟಿಕೆಟ್ ನೀಡಿ ಹುರಿಯಾಳನ್ನಾಗಿ ಮಾಡಿದೆ.
ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಡಾ.ಎನ್. ಎಸ್.ಇಂದ್ರೇಶ್ ಅವರಿಗೆ ಟಿಕೆಟ್ ನೀಡಿದೆ.
ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಮನ್ ಮುಲ್ ನಿರ್ದೇಶಕ ಎಸ್. ಪಿ.ಸ್ವಾಮಿ ಅವರಿಗೆ ಟಿಕೆಟ್ ದೊರಕಿದೆ. ಜೆಡಿಎಸ್ ಪಕ್ಷದಿಂದ ಮನ್ ಮುಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಎಸ್.ಪಿ.ಸ್ವಾಮಿ ಅವರು ಮನ್ ಮಲ್ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನಿಸಿ ಅಧಿಕಾರ ಹಿಡಿಯುವಲ್ಲಿ ವಿಫಲರಾಗಿದ್ದರು. ಆನಂತರದಲ್ಲಿ ಪಕ್ಷದಲ್ಲಿ ಉಳಿದು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.
ಇನ್ನು ಕೆ ಆರ್ ಪೇಟೆ ಕ್ಷೇತ್ರದಿಂದ ಸಚಿವ ಕೆ.ಸಿ.ನಾರಾಯಣಗೌಡ ಅವರಿಗೆ ಬಿಜೆಪಿ ಮತ್ತೆ ಟಿಕೆಟ್ ಘೋಷಿಸಿದೆ.
2019 ರಲ್ಲಿ ನಡೆದ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯೊಳಗೆ ಕಮಲ ಅರಳಿಸಿದ ಖ್ಯಾತಿಗೆ ಪಾತ್ರರಾಗಿದ್ದರು. ಜೆಡಿಎಸ್ ನಿಂದ ಎರಡು ಬಾರಿ ಮತ್ತು ಬಿಜೆಪಿಯಿಂದ ಒಂದು ಬಾರಿ ಸತತ ಜಯದೊಂದಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ನಾರಾಯಣಗೌಡರು ಇದೀಗ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಮಂಡ್ಯದಲ್ಲಿ ಐದು ಮಂದಿ ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್
