ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ಕರೆ ನೀಡಿರುವ ಮಂಡ್ಯ ಬಂದ್ಗೆ ಅಭೂತ್ಪೂರ್ವ ಬೆಂಬಲ ವ್ಯಕ್ತವಾಗಿದೆ. ಕೇವಲ ಮಂಡ್ಯ ಮಾತ್ರವಲ್ಲದೇ ಮದ್ದೂರು ನಗರವನ್ನು ಕೂಡ ಬಂದ್ ಮಾಡಲಾಗಿದೆ. ಎರಡು ನಗರಗಳಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು, ವಾಹನ ಸಂಚಾರ ಕೂಡ ಸ್ಥಗಿತವಾಗಿದೆ. ಖಾಸಗಿ ಶಾಲಾ – ಕಾಲೇಜುಗಳು ಬಹುತೇಕ ಬಂದ್ ಆಗಿವೆ. ಬಂದ್ಗೆ ವರ್ತಕರು ಸೇರಿ ಅನೇಕ ಸಂಘ ಸಂಸ್ಥೆಗಳು ಬೆಂಬಲ ನೀಡಿವೆ.
ಮಂಡ್ಯದಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಹೋರಾಟ ಆರಂಭವಾಗಿದ್ದು, ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ವಿವಿಧ ಸಂಘಟನೆಗಳಿಂದ ಉರುಳು ಸೇವೆ ನಡೆಯಿತು. ನಗರದ ಮುಖ್ಯ ರಸ್ತೆಗಳಲ್ಲಿ ಬೈಕ್ ರ್ಯಾಲಿ ಕೂಡ ನಡೆಸಲಾಯಿತು. ಕಾವೇರಿ ಹೋರಾಟಕ್ಕೆ ಬಿಜೆಪಿ, ಜೆಡಿಎಸ್ ನಾಯಕರು ಕೂಡ ಸಾಥ್ ನೀಡಿದ್ದು, ಬಂದ್ ಹಿನ್ನೆಲೆಯಲ್ಲಿ ಪೊಲೀಸರು ಜಿಲ್ಲಾದ್ಯಂತ ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಮಂಡ್ಯದ ಸಂಜಯ್ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನೆಯಲ್ಲಿ ಬಿಜೆಪಿ ಮಾಜಿ ಶಾಸಕ ಸಿಟಿ ರವಿ ಭಾಗವಹಿಸಿದ್ದಾರೆ. ಅವರ ಜೊತೆ ಮಂಡ್ಯದ ಜೆಡಿಎಸ್ ಮಾಜಿ ಶಾಸಕರು, ಕಾಂಗ್ರೆಸ್ನ ಕೆಲ ನಾಯಕರು ಹೋರಾಟದಲ್ಲಿ ಪಾಲ್ಗೊಂಡಿದ್ದು, ಮಧ್ಯಾಹ್ನ 12 ಗಂಟೆಗೆ ದಿಲ್ಲಿಯಿಂದ ನೇರವಾಗಿ ಆಗಮಿಸುವ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಮಂಡ್ಯ ರಕ್ಷಣಾ ವೇದಿಕೆಯಿಂದ ವಿನೂತನ ಪ್ರತಿಭಟನೆ ನಡೆಯಿತು. ಸಂಜಯ್ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಸುಟ್ಟು ರಸ್ತೆಯಲ್ಲಿ ಟೀ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಬೆಂಗಳೂರು – ಮೈಸೂರು ಹಳೇ ಹೆದ್ದಾರಿ ತಡೆದು ಪ್ರತಿಭಟನೆಯನ್ನು ನಡೆಸಿದ ಪ್ರತಿಭಟನಾಕಾರರು, ರಸ್ತೆಯಲ್ಲೇ ಮಲಗಿ, ಉರುಳು ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ರೈತರಿಗೆ ಮೋಸ ಮಾಡಿ ನೀರು ಬಿಟ್ಟಿದ್ದಾರೆಂದು ಬಾಯಿ ಬಾಯಿ ಬಡಿದುಕೊಂಡು ಅಸಮಾಧಾನ ಹೊರಹಾಕಿದ ರೈತರು ಪ್ರಾಧಿಕಾರ, ಸುಪ್ರೀಂ ಕೋರ್ಟ್ ವಿರುದ್ಧ ಧಿಕ್ಕಾರ ಕೂಗಿದರು.