ಮೈಸೂರು: ಯಾವುದೇ ರೀತಿಯ ತಾರತಮ್ಯವಿಲ್ಲದೇ ಮಕ್ಕಳನ್ನು ರಕ್ಷಿಸುವ ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಜವಾಬ್ದಾರಿಯಾಗಿದ್ದು, ಈ ಕುರಿತಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಕಾಯಿದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಎಸ್.ಮಂಜು ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಕಛೇರಿಯ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಮತ್ತು ಅವುಗಳ ರೂಪುರೇಷೆಗಳನ್ನು ತಯಾರಿಸುವ ಬಗ್ಗೆ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು. ಆಯೋಗವು ಮಕ್ಕಳ ರಕ್ಷಣೆಗೆ ಬದ್ದವಾಗಿದ್ದು, ಅವುಗಳ ಉಲ್ಲಂಘನೆಯಾಗಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ತಮಗೆ ನಿಗದಿಪಡಿಸಿರುವ ಕರ್ತವ್ಯ ಹಾಗೂ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಮಕ್ಕಳ ಹಕ್ಕುಗಳನ್ನು ರಕ್ಷಿಸಿ ಎಂದರು.
ಎಲ್ಲಾ ಶಾಲೆಗಳಲ್ಲಿ ದೂರು ಪೆಟ್ಟಿಗೆ ಅಳವಡಿಸಿ, 1098 ಶಾಲೆಗಳಲ್ಲಿ ಚೈಲ್ಡ್ಲೈನ್ ಸಂಖ್ಯೆಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪೋಕ್ಸೋ ಕಾಯಿದೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಶಾಲಾ ವಾಹನಗಳಲ್ಲಿ ಮಕ್ಕಳ ನಿಗದಿಗಿಂತ ಹೆಚ್ಚು ಕರೆದುಕೊಂಡು ಹೋಗುತ್ತಿರುವುದು ಕಂಡು ಬರುತ್ತಿದ್ದು ಈ ಬಗ್ಗೆ ಆರ್.ಟಿ.ಓ. ಅಧಿಕಾರಿಗಳು ಪರಿಶೀಲಿಸಿ ಅಗತ್ಯ ಕೈಗೊಳ್ಳಬೇಕು. ಅಲ್ಲಿ ಹೆಚ್ಚು ಬಸ್ ಗಳನ್ನು ನಿಯೋಜಿಸಬೇಕು. ಯಾವುದೇ ರೀತಿಯ ತಾರತಮ್ಯವಿಲ್ಲದೇ ಮಕ್ಕಳನ್ನು ರಕ್ಷಿಸುವ ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಜವಾಬ್ದಾರಿಯಾಗಿದ್ದು, ಈ ಕುರಿತಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಕಾಯಿದೆಯನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಕ್ಕಳ ರಕ್ಷಣೆಗೆ ಮತ್ತು ಮಕ್ಕಳ ಸಮಗ್ರ ಬೆಳವಣಿಗೆಗೆ ಎಲ್ಲಾ ಇಲಾಖೆಗಳು ಪೂರಕ ವಾತಾವರಣ ನಿರ್ಮಾಣ ಮಾಡುವುದರ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು, ಮಕ್ಕಳ ರಕ್ಷಣೆಗಾಗಿ ರೂಪಿಸಿರುವ ಕಾಯ್ದೆಯ ಆಶಯ ಮತ್ತು ಉದ್ದೇಶಗಳನ್ನು ಯಶಸ್ವಿಯಾಗಿ ಜಾರಿಗೊಳಿಸಬೇಕು. ಮಕ್ಕಳ ರಕ್ಷಣೆಗಾಗಿ ಕಾರ್ಯನಿರ್ವಹಿಸುವ ಎಲ್ಲಾ ಅನುಷ್ಠಾನ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಮಕ್ಕಳ ಹಕ್ಕುಗಳ ರಕ್ಷಣೆಗೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯಿತ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜು, ಜಿಲ್ಲಾ ರಕ್ಷಣಾ ಘಟಕದ ಅಧಿಕಾರಿ ಯೊಗೇಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲಾ ಇಲಾಖೆಗಳ ಜವಾಬ್ದಾರಿ
