ಚಾಮರಾಜನಗರ: ನಗರದಲ್ಲಿ ಮಂಗಳವಾರ ಸುರಿದ ಅರ್ಧ ಗಂಟೆ ಮಳೆ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಅವಾಂತರ ಸೃಷ್ಟಿಸಿದ್ದು, ವಾಹನ ಸವಾರರು ಪರದಾಡಿದರು.
ರಾಜ ಕಾಲುವೆ ಉಕ್ಕಿಹರಿದು ರಸ್ತೆಯಲ್ಲಿ ನೀರು ಕಟ್ಟಿನಿಂತಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಮೊಣಕಾಲುವರೆಗೆ ನಿಂತಿದ್ದ ನೀರಿನಲ್ಲಿ ಸಿಕ್ಕಿಹಾಕಿಕೊಂಡ ದ್ವಿಚಕ್ರ ವಾಹನ ಸವಾರರಲ್ಲಿ ಕೆಲವರು ಆಯತಪ್ಪಿ ಬಿದ್ದರು. ಇದರಲ್ಲಿ ಮಹಿಳೆಯರೂ ಒಬ್ಬರಿದ್ದರು.
ಹಲವು ದಿನಗಳ ನಂತರ ಮಂಗಳವಾರ ಮಧ್ಯಾಹ್ನ ನಗರದಲ್ಲಿ ಭರ್ಜರಿ ಮಳೆಯಾಯಿತು. ಮಧ್ಯಾಹ್ನ 2.55ಕ್ಕೆ ಶುರುವಾರ ವರ್ಷಧಾರೆ, ಗಾಳಿ, ಗುಡುಗು ಸಹಿತ 3.35ರವರೆಗೆ ಸುರಿಯಿತು.
ಚರಂಡಿ, ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯಿತು. ಹಲವು ದಿನಗಳಿಂದ ಬಿಸಿಲಿನ ಝಳಕ್ಕೆ ಬಸವಳಿದಿದ್ದ ಜನರು ಕೊಂಚ ನಿರಾಳರಾದರು.
ಭಾರಿ ಮಳೆಯಿಂದಾಗಿ ಬಿ.ರಾಚಯ್ಯ ಜೋಡಿ ರಸ್ತೆ, ಭುವನೇಶ್ವರಿ ವೃತ್ತದ ಬಳಿಯ ತ್ಯಾಗರಾಜ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ನೀರು ಕಟ್ಟಿ ನಿಂತು ಜನರು ಕಿರಿ ಕಿರಿ ಅನುಭವಿಸಿದರು.
ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಜಿಲ್ಲಾಡಳಿತ ಭವನದ ಗೇಟಿನ ಮುಂಭಾಗ ಎಂದಿನ ಸಮಸ್ಯೆ ಮಂಗಳವಾರವೂ ಮರುಕಳಿಸಿತು. ರಸ್ತೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಚರಂಡಿ ನಿರ್ಮಾಣವಾಗದಿರುವುದರಿಂದ ಭಾರಿ ಪ್ರಮಾಣದಲ್ಲಿ ಹರಿದ ನೀರು ರಸ್ತೆಗೆ ಉಕ್ಕಿತು. ಇದಲ್ಲದೇ ರಸ್ತೆಯ ಮೂಲಕ ಹಾದು ಹೋಗುವ ರಾಜ ಕಾಲುವೆಯ ಕೊಳಚೆ ನೀರು ಕೂಡ ರಸ್ತೆಗೆ ಉಕ್ಕಿ ಅವಾಂತರ ಸೃಷ್ಟಿಯಾಯಿತು.
ಬಸವೇಶ್ವರ ಚಿತ್ರಮಂದಿರ, ಇಂದಿರಾ ಕ್ಯಾಂಟೀನ್, ಜಿಲ್ಲಾಡಳಿತ ಭವನದ ಗೇಟ್, ಹೋಟೆಲ್ ಅಧ್ಯಕ್ಷ ಸೇರಿದಂತೆ ಇತರೆ ಮಳಿಗೆಗಳ ಮುಂಭಾಗ ಕೆರೆಯಂತೆ ನೀರು ನಿಂತಿತ್ತು. ಪಾದಚಾರಿಗಳು, ವಾಹನ ಸವಾರರು ಅದರಲ್ಲೂ ವಿಶೇಷವಾಗಿ ದ್ವಿಚಕ್ರವಾಹನಸವಾರರು ತೀವ್ರ ತೊಂದರೆ ಅನುಭವಿಸಿದರು. ಜಿಲ್ಲಾಡಳಿತ, ನಗರಸಭೆ ಸ್ಥಳೀಯ ಶಾಸಕರು ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಾಹನಗಳು ದೀರ್ಘ ಸಮಯ ನಿಂತಿದ್ದರಿಂದ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಯಿತು. ನೀರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ದ್ಚಿಚಕ್ರವಾಹನ ಸವಾರೊಬ್ಬರು, ಶಾಸಕ ಪುಟ್ಟರಂಗಶೆಟ್ಟಿಯವರಿಗೆ ಜೈಕಾರ ಹಾಕಿ ಆಕ್ರೋಶ ಹೊರಹಾಕಿದರು.
ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು: ನಗರದಾದ್ಯಂತ ಅರ್ಧ ಗಂಟೆ ಭಾರಿ ಮಳೆಯಾಗಿದ್ದರಿಂದ ತ್ಯಾಗರಾಜ ರಸ್ತೆ ಸೇರಿದಂತೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಿತು.
ತ್ಯಾಗರಾಜರಸ್ತೆಯಲ್ಲಿ ಸಂಗ್ರಹವಾದ ಮಳೆ ನೀರು ಚರಂಡಿಗೆ ಸರಾಗವಾಗಿ ಹೋಗದೆ ಇರುವುದರಿಂದ ಆ ರಸ್ತೆಯಲ್ಲಿರುವ ಹಳೆಯ ಅಂಗಡಿಗಳಿಗೆ ನೀರು ನುಗ್ಗಿತು. ಮಾಲೀಕರು ನೀರನ್ನು ಹಾಕಬೇಕಾಯಿತು.
ಜೋಡಿ ರಸ್ತೆ ಅಭಿವೃದ್ಧಿಯಾದಾಗಿನಿಂದ ಮಳೆಗಾಲದಲ್ಲಿ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ನೀರು ನಿಲ್ಲುವುದು ಜನರು ಪರದಾಡುವುದು ಮುಗಿಯದ ಕಥೆಯಂತಾಗಿದೆ.ಕಾರಿಗಳ ಹೇಳಿದೆ. ಪೈಪ್ ತೆರವುಗೊಳಿಸಲು ₹30 ಲಕ್ಷ ವೆಚ್ಚವಾಗುತ್ತದೆ ಎಂದು ಹೇಳುತ್ತಾರೆ ಅವರು.