ಇಂಡಿಯನ್ ಪ್ರೀಮಿಯರ್ ಲೀಗ್ನ ಎಲ್ ಕ್ಲಾಸಿಕೊ ಎಂದೇ ಕರೆಸಿಕೊಳ್ಳುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ನಡುವೆ ಪಂದ್ಯ ಶನಿವಾರ ನಡೆಯಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ನ ಎರಡು ಯಶಸ್ವಿ ತಂಡಗಳು ಮುಖಾಮುಖಿಯಾಗಲಿವೆ.
ಮೊದಲನೇ ಪಂದ್ಯದಲ್ಲೇ ಸೋಲನುಭವಿಸಿರುವ ಮುಂಬೈ ಇಂಡಿಯನ್ಸ್ ತವರಿನಲ್ಲಿ ನಡೆಯಲಿರುವ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಮೊದಲನೇ ಪಂದ್ಯದಲ್ಲಿ ಸೋಲು ಕಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತವರಿನಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲುವು ಕಂಡಿದ್ದು, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಅತ್ಯುತ್ತಮ ಫಾರ್ಮ್ನಲ್ಲಿದ್ದು, ಸ್ಫೋಟಕ ಆರಂಭ ಒದಗಿಸುತ್ತಿದ್ದಾರೆ. ಡಿವೋನ್ ಕಾನ್ವೆ, ಮೊಯೀನ್ ಅಲಿ, ಅಂಬಾಟಿ ರಾಯುಡು, ಬೆನ್ಸ್ಟೋಕ್ಸ್ ಉತ್ತಮ ಪ್ರದರ್ಶನ ನೀಡಿದರೆ ಸಿಎಸ್ಕೆ ಗೆಲುವು ಸುಲಭವಾಗಲಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲನುಭವಿಸಿತ್ತು. ತಿಲಕ್ ವರ್ಮಾ ಹೊರತುಪಡಿಸಿ ಉಳಿದ ಎಲ್ಲಾ ಬ್ಯಾಟರ್ ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶಾನ್, ಕ್ಯಾಮೆರಾನ್ ಗ್ರೀನ್ ವಿಫಲವಾಗಿದ್ದು ಮೊದಲ ಸೋಲಿಗೆ ಕಾರಣವಾಗಿದೆ. ಜೋಫ್ರಾ ಆರ್ಚರ್ ಕೂಡ ಉತ್ತಮ ಬೌಲಿಂಗ್ ಪ್ರದರ್ಶಿಸುವಲ್ಲಿ ವಿಫಲವಾಗಿದ್ದರು. ಇಂದಿನ ಪಂದ್ಯದಲ್ಲಿ ಗೆಲ್ಲಬೇಕಾದರೆ ಇವರು ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ.
ವಾಂಖೆಡೆ ಸ್ಟೇಡಿಯಂ ಸಾಮಾನ್ಯವಾಗಿ ಬ್ಯಾಟಿಂಗ್ಗೆ ಹೆಚ್ಚು ಸಹಕಾರ ನೀಡುವ ಪಿಚ್ ಆಗಿದೆ. ಈ ಅಂಗಳದಲ್ಲಿ ಐಪಿಎಲ್ ಸರಾಸರಿ ಮೊತ್ತ 180 ಆಗಿದ್ದರೆ, ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 194 ಆಗಿದೆ. ಚಿಕ್ಕ ಬೌಂಡರಿ, ವೇಗವಾದ ಔಟ್ಫೀಲ್ಡ್ ಇರುವ ಕಾರಣ ಬೌಂಡರಿಗಳು ಸುಲಭವಾಗಿ ಸಿಗಲಿವೆ. ಆದರೆ, ಇಲ್ಲಿ ನಡೆದ ಭಾರತ ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ವೇಗಿಗಳು ಮಿಂಚಿದ್ದರು. ಆರಂಭದಲ್ಲಿ ಚೆಂಡ್ ಸೀಮ್ ಮತ್ತು ಸ್ವಿಂಗ್ ಆಗುವುದರಿಂದ ಬ್ಯಾಟರ್ ಗಳು ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಬೇಕು.
ಇಲ್ಲಿ ಇದುವರೆಗೆ 102 ಐಪಿಎಲ್ ಪಂದ್ಯಗಳು ನಡೆದಿದ್ದರು, ಮೊದಲು ಬ್ಯಾಟಿಂಗ್ ಮಾಡಿದ ತಂಡ 48 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಚೇಸಿಂಗ್ ಮಾಡಿದ ತಂಡ 54 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಟಾಸ್ ಗೆದ್ದ ತಂಡ ಸಾಮಾನ್ಯವಾಗಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತದೆ. ಎರಡೂ ತಂಡಗಳಿಗೆ ಗೆಲ್ಲುವ ಸಾಧ್ಯತೆ ಸಮನಾಗಿರುವುದರಿಂದ ಟಾಸ್ಗೆ ಇಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇಲ್ಲ.
ಐಪಿಎಲ್ನಲ್ಲಿ ಎರಡೂ ತಂಡಗಳು ಇದುವರೆಗೆ 34 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಚೆನ್ನೈ ಸೂಪರ್ ಕಿಂಗ್ಸ್ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಮುಂಬೈ ಇಂಡಿಯನ್ಸ್ 20 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ ಪಡೆ ಸ್ಪಷ್ಟವಾಗಿ ಮೇಲುಗೈ ಸಾಧಿಸಿದ್ದರೂ, ತಂಡದಲ್ಲಿ ಭಾರಿ ಬದಲಾವಣೆ ಆಗಿರುವುದರಿಂದ ರೋಚಕ ಹಣಾಹಣಿಯನ್ನು ನಿರೀಕ್ಷೆ ಮಾಡಲಾಗಿದೆ. ಏಪ್ರಿಲ್ 8ರಂದು ಶನಿವಾರ, ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.
ಸಂಭಾವ್ಯ ಆಡುವ ಬಳಗ ಸಿಎಸ್ಕೆ:
ರುತುರಾಜ್ ಗಾಯಕ್ವಾಡ್, ಡಿವೋನ್ ಕಾನ್ವೆ, ಶಿವಂ ದುಬೆ, ಬೆನ್ಸ್ಟೋಕ್ಸ್, ಮೊಯೀನ್ ಅಲಿ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ), ದೀಪಕ್ ಚಾಹರ್, ರಾಜವರ್ಧನ್ ಹಂಗರ್ಗೇಕರ್, ಮಿಚೆಲ್ ಸ್ಯಾಂಟ್ನರ್.
ಮುಂಬೈ ಇಂಡಿಯನ್ಸ್ : ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಕ್ಯಾಮರೂನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೋಫ್ರಾ ಆರ್ಚರ್, ಅರ್ಷದ್ ಖಾನ್.
ಮಾಜಿ ಚಾಂಪಿಯನ್ಸ್ಗಳ ಕಾದಾಟ
