ಹುಣಸೂರು: ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಅವರ 56 ನೇ ಹುಟ್ಟುಹಬ್ಬದ ಅಂಗವಾಗಿ ಆರೋಗ್ಯ ತಪಾಸಣೆ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ನಗರದ ಅಂಬೇಡ್ಕರ್ ಭವನದಲ್ಲಿ ಸ್ನೇಹಜೀವಿ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ, ಬೆಂಗಳೂರಿನ ಸಪ್ತಗಿರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮೈಸೂರಿನ ಜೀವಧಾರಾ, ಮೈಸೂರಿನ ಲಯನ್ಸ್ ಬ್ಲಡ್ ಸೆಂಟರ್, ಹೆಲ್ತ್ ಏಜ್ ಇಂಡಿಯಾ, ಶ್ರದ್ಧಾ ಐ ಕೇರ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ತಜ್ಞ ವೈದ್ಯರಿಂದ ಸಾಮಾನ್ಯ ವೈದ್ಯಕೀಯ ಮತ್ತು ಶಸ್ತ್ರ ಚಿಕಿತ್ಸಾ ತಪಾಸಣೆ, ಹೃದಯ ತಪಾಸಣೆ, ನರರೋಗ, ಕಣ್ಣು, ಕಿವಿ, ಮೂಗು, ಗಂಟಲು ತಪಾಸಣೆ, ಕ್ಯಾನ್ಸರ್ ತಪಾಸಣೆ, ಸ್ತ್ರೀರೋಗ ಮತ್ತು ಪ್ರಸೂತಿ ತಪಾಸಣೆ, ಕಣ್ಣಿನ ತಪಾಸಣೆ, ಕೀಲು ಮತ್ತು ಮೂಳೆ, ಮೂತ್ರಕೋಶ ಹಾಗೂ ಮೂತ್ರಪಿಂಡ ತಪಾಸಣೆಯನ್ನು ನಡೆಸಿದರು.
ಶಿಬಿರದಲ್ಲಿ 1535 ಮಂದಿ ಹೆಸರು ನೊಂದಾಯಿಸಿಕೊಂಡು ಆರೋಗ್ಯ ತಪಾಸಣೆಗೆ ಒಳಪಟ್ಟರು.
ಈ ಪೈಕಿ 87 ಮಂದಿ ಕಣ್ಣಿನ ಶಸ್ತ್ರಚಿಕಿತ್ಸೆ, ಹೃದಯ, ಮೂಳೆ ಸೇರಿದಂತೆ 146 ಮಂದಿ ವಿವಿಧ ಶಸ್ತ್ರ ಚಿಕಿತ್ಸೆ ಗೆ ಒಳಪಟ್ಟರು. 412 ಮಂದಿಗೆ ಕನ್ನಡಕ ವಿತರಿಸಲಾಯಿತು.
ತಮ್ಮ ಜನುಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರಕ್ಕೆ ಎಚ್.ಪಿ.ಮಂಜುನಾಥ್ ಚಾಲನೆ ನೀಡಿ ಮಾತನಾಡಿ ಹುಣಸೂರು ತಾಲೂಕಿನಲ್ಲಿ ಈ ಬಾರಿ ಚುನಾವಣೆಯಲ್ಲಿ ನಾನು ಸೋತರು ಪ್ರತಿವರ್ಷದಂತೆ ನನ್ನ ಹುಟ್ಟು ಹಬ್ಬವನ್ನು ವಿವಿಧ ಸಾಮಾಜಿಕ ಸೇವಾ ಕಾರ್ಯ ಮೂಲಕ ಮುಂದುವರಿಸಿಕೊಂಡು ಬರುತ್ತಿದ್ದೇನೆ. ನಾನು ಈ ಕ್ಷೇತ್ರದಲ್ಲಿ ಸೋತರೂ ಈ ತಾಲೂಕಿನ ಮನೆ ಮಗನಾಗಿ ನನ್ನ ರಕ್ತವನ್ನು ದಾನ ಮಾಡುವುದರ ಮೂಲಕ ಈ ಜನರ ಸೇವೆಗೆ ಬದ್ದನಾಗಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದರು.
ಶಿಬಿರದಲ್ಲಿ ಭಾಗವಹಿಸಿದ್ದ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿ ಗೌರವಿಸಲಾಯಿತ್ತು. ಈ ವೇಳೆ ತಾಲೂಕು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರುಗಳಾದ ಕಲ್ಕುಣಿಕೆ ರಮೇಶ್, ಟಿ.ವಿ.ನಾರಾಯಣ್ ಕಾರ್ಯಾಧ್ಯಕ್ಷರುಗಳಾದ ಪುಟ್ಟರಾಜು, ಬಸವರಾಜಪ್ಪ ವೀಣಾ, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಸ್ನೇಹ ಬಳಗದ ಸ್ನೇಹಿತರು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಮಂದಿ ಹಾಜರಿದ್ದು ಮಂಜುನಾಥ್ರಿಗೆ ಶುಭ ಕೋರಿದರು.