ಮಂಡ್ಯ:- ಮಾಜಿ ಸಂಸದ ಹಾಗೂ ಜೆಡಿಎಸ್ನಿಂದ ಉಚ್ಚಾಟನೆಗೊಂಡಿದ್ದ ಎಲ್.ಆರ್.ಶಿವರಾಮೇ ಗೌಡ ಅವರು ಬುಧವಾರ ಬಿಜೆಪಿಗೆ ಸೇರ್ಪಡೆಯಾದರು.
ಮಲ್ಲೇಶ್ವರಂನಲ್ಲಿರುವ ಜಗನಾಥ ಭವನದಲ್ಲಿ ಶಿವರಾಮೇಗೌಡ ಹಾಗೂ ಅವರ ಪುತ್ರ ಚೇತನ್ ಗೌಡ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್, ಸಚಿವರಾದ ಡಾ.ಕೆ.ಸುಧಾಕರ್, ಕೆ.ಗೋಪಾಲಯ್ಯ ಸೇರಿದಂತೆ ಮತ್ತಿತರರು ಪಕ್ಷದ ಬಾವುಟ ನೀಡಿ ಆತ್ಮೀಯವಾಗಿ ಬರಮಾಡಿ
ಕೊಂಡರು.
ನಂತರ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡರು. ಈ ಹಿಂದೆ ಶಿವರಾಮೇಗೌಡ ಅವರು ಬಿಜೆಪಿಗೆ ಸೇರ್ಪಡೆಯಾಗಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಮುಂದೂಡಿಕೆಯಾಗಿತ್ತು.
ಈ ಹಿಂದೆ ಕಾಂಗ್ರೆಸ್,ಬಿಜೆಪಿ ಹಾಗೂ ಜೆಡಿಎಸ್ನಲ್ಲಿದ್ದ ಅವರು ಶಾಸಕರಾಗಿ ಹಾಗೂ ಒಂದು ಬಾರಿ ಮಂಡ್ಯ ಲೋಕಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.ಮಂಡ್ಯದ ಮಾಜಿ ಸಂಸದ ದಿವಂಗತ ಜಿ. ಮಾದೇಗೌಡರ ವಿರುದ್ಧ ಲಘುವಾಗಿ ಮಾತನಾಡಿದರೆಂಬ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶಿವರಾಮೇಗೌಡ ಅವರನ್ನು ಪಕ್ಷದಿಂದ ಉಚ್ಚಾಟನೆಗೊಳಿಸಿದ್ದರು.
ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.ಶಿವರಾಮೇಗೌಡರ ಜೊತೆಗೆ ಈ ಸಂದರ್ಭದಲ್ಲಿ ಅವರ ಪುತ್ರ ಚೇತನ್ ಗೌಡ ಮತ್ತುb ಬೆಂಬಲಿಗರು ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಸೇರ್ಪಡೆಯಾದ ಬಳಿಕ ಎಲ್.ಆರ್.ಶಿವರಾಮೇಗೌಡ ಮಾತನಾಡಿ, ಇನ್ನು 10 ದಿನಗಳಲ್ಲಿ ಹಲವು ಮಂದಿ ಬಿಜೆಪಿ ಸೇರಲಿದ್ದಾರೆ. ಕರ್ನಾಟಕದ ಜನರು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವನ್ನು ಬಯಸುತ್ತಾರೆ, ಕರ್ನಾಟಕದಲ್ಲಿ ಬಿಜೆಪಿ ಬಹುಮತದ ಸರ್ಕಾರ ರಚಿಸಲಿದೆ ಎಂದು ಹೇಳಿದ್ದಾರೆ.
ಇನ್ನೂ ಬಿಜೆಪಿ ಶಿಸ್ತಿನ ಪಕ್ಷ ನಾನು ಬೇರೆ ಪಕ್ಷಗಳ ಬಗ್ಗೆ ನಾನು ಮಾತಾಡಲ್ಲ, ನಾನು ಇದುವರೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಪ್ರಬಲ ಹೋರಾಟ ಮಾಡಿ ಬೆಳೆದವನು. ಇವೆರಡೂ ಪಕ್ಷಗಳಲ್ಲಿ ಮಂಡ್ಯ ಭಾಗದಲ್ಲಿ ಉಸಿರುಗಟ್ಡುವ ವಾತಾವರಣ ಇದೆ, ಮೋದಿಯವರು ಎಲ್ಲೆಡೆ ಅಭಿವೃದ್ಧಿ ಮಾಡ್ತಿದಾರೆ. ಮಂಡ್ಯದ ನೆಲದಲ್ಲಿ ಮೋದಿ ಬಂದು ಬೃಹತ್ ಸಮಾವೇಶದಲ್ಲಿ ಪಕ್ಷ ಕಟ್ಟುವ ಕರೆ ಕೊಟ್ಟಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಲು ನಾನು ಸಿದ್ಧ ಎಂದು ತಿಳಿಸಿದರು.
ಕಾಂಗ್ರೆಸ್-ಜೆಡಿಎಸ್ ನವರು ದೊಂಬರಾಟ ಆಡುತ್ತಿದಾರೆ. ಮಂಡ್ಯದಲ್ಲಿ ಕಮಲ ಅರಳಿಸ್ತೇವೆ, ಇದುವರೆಗೆ ಮೂರನೇ ಶಕ್ತಿಯಾಗಿದ್ದ ಬಿಜೆಪಿ ಈ ಬಾರಿ ಪ್ರಥಮ ಶಕ್ತಿ ಆಗಿ ಹೊರಹೊಮ್ಮುತ್ತದೆ.ಬಿಜೆಪಿಯ ಕಟ್ಟುಪಾಡುಗಳು ನನಗೆ ಗೊತ್ತಿದೆ, ಅದನ್ನೆಲ್ಲ ಒಪ್ಪಿಯೇ ಪಕ್ಷಕ್ಕೆ ಬಂದಿದ್ದೇನೆ ಎಂದು ಹೇಳಿದರು.