ಮೈಸೂರು: ನವರಾತ್ರಿಯ ಮಹಾನವಮಿ ದಿನ ಕೇಂದ್ರ ಕೃಷಿ ಇಲಾಖೆ ರಾಜ್ಯ ಸಚಿವೆ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರು ಮೈಸೂರು ಅರಮನೆ ಆವರಣದಲ್ಲಿ ಇಂದು ಆಯುಧಪೂಜೆ ದಿನ ಕಾವಾಡಿಗರಿಗೆ ಮತ್ತು ಮಾವುತರಿಗೆ ವಿಶೇಷ ಉಪಹಾರ ಬಡಿಸಿ ವಿಭಿನ್ನ ರೀತಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ವಿಶ್ವ ವಿಖ್ಯಾತ ಮೈಸೂರಿನಲ್ಲಿ ನಾಳೆ ವಿಜಯದಶಮಿ ಜಂಬೂಸವಾರಿ ನಡೆಯಲಿದ್ದು, ಇಂದು ಆಯುಧಪೂಜೆಯಿದೆ. ಈ ಹಿನ್ನೆಲೆಯಲ್ಲಿ ತಮ್ಮ ಹುಟ್ಟುಹಬ್ಬ ಅಂಗವಾಗಿ ಇಲ್ಲಿನ ಮಾವುತರು ಮತ್ತು ಕಾವಾಡಿಗಳಿಗೆ ಸ್ವತಃ ಶೋಭಾ ಕರಂದ್ಲಾಜೆ ಉಪಾಹಾರ ಬಡಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅರಮನೆ ಆವರಣದಲ್ಲಿ ಉಪಾಹಾರಕ್ಕೆ ವ್ಯವಸ್ಥೆ ಮಾಡಿದ್ದು, ಮಾವುತರು ಮತ್ತು ಕಾವಾಡಿಗಳಿಗಾಗಿ ವಿಶೇಷ ಉಪಾಹಾರ ಸಿದ್ಧಪಡಿಸಲಾಗಿದೆ. ಇಷ್ಟು ಮಾತ್ರವಲ್ಲದೇ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಶೋಭಾ ಆಚರಿಸಿಕೊಂಡಿದ್ದು, ಸಚಿವೆಗೆ ಸಂಸದ ಪ್ರತಾಪ್ ಸಿಂಹ ಹಾಗೂ ಸ್ಥಳಿಯ ಬಿಜೆಪಿ ಮುಖಂಡರು ಶುಭಾಶಯ ತಿಳಿಸಿದ್ದಾರೆ.
ನಾನು ಕೇಂದ್ರದಲ್ಲಿ ಕೃಷಿ ಸಚಿವೆಯಾಗಿಯೇ ಸಂತೋಷವಾಗಿದ್ದೇನೆ: ಬಿಜೆಪಿ ರಾಜಾಧ್ಯಕ್ಷರ ಬದಲಾವಣೆ ಸುದ್ದಿಯ ನಡುವೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರು ಮುನ್ನಲೆಗೆ ಬಂದಿದ್ದು ಈ ಬಗ್ಗೆ ಶೋಭಾ ಕರಂದ್ಲಾಜೆ ಅವರು ಮೈಸೂರಿನಲ್ಲಿಂದು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷೆ ಸ್ಥಾನ ನೀಡುವ ಬಗ್ಗೆ ನನಗೆ ಮಾಹಿತಿ ಇಲ್ಲ, ಆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ನಾನು ಕೇಂದ್ರದಲ್ಲಿ ಕೃಷಿ ಸಚಿವೆಯಾಗಿ ಸಂತೋಷವಾಗಿದ್ದೇನೆ, ನನಗೆ ಒಳ್ಳೆ ಖಾತೆ ಸಿಕ್ಕಿದೆ, ಅಲ್ಲಿಯೇ ಉತ್ತಮ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.
ವರಿಷ್ಠರಿಂದ ನನಗೆ ಯಾವುದೇ ಸೂಚನೆ ಬಂದಿಲ್ಲ. ಇಂತಹ ಸುದ್ದಿಗಳು ಹೇಗೆ ಹರಡುತ್ತವೆ ಎಂದು ನನಗೆ ಗೊತ್ತಿಲ್ಲ, ಮೋದಿ ಅವರು ಮತ್ತೆ 2024ರಲ್ಲಿ ಪ್ರಧಾನಿಯಾಗಲು ನಾವು ಬಯಸುತ್ತಿದ್ದು, ಆ ನಿಟ್ಟಿನಲ್ಲಿ ಶ್ರಮಿಸುತ್ತೇವೆ, ಅದನ್ನೇ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.