ತಿ.ನರಸೀಪುರ:- ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರ ವ್ಯಾಪ್ತಿಯ ನರಸೀಪುರ ಪಟ್ಟಣದಲ್ಲಿ ಸಾರ್ವಜನಿಕ ಕ್ರೀಡಾಂಗಣ ಇಲ್ಲ.ಕ್ರೀಡಾಸಕ್ತರು,ಯುವಕರು ಮತ್ತು ವಯೋವೃದ್ದರು ಕ್ರೀಡಾಂಗಣ ಇಲ್ಲದ ಕಾರಣ ತಮ್ಮ ಆಟೋಟ ಕ್ರಿಯೆ, ವ್ಯಾಯಾಮ ಮಾಡಲು ಖಾಸಗಿ ವಿದ್ಯೋದಯ ಕಾಲೇಜಿನ ಆಟದ ಮೈದಾನವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ.ತಾಲೂಕು ಕೇಂದ್ರವಾದ ತಿ.ನರಸೀಪುರ ಪಟ್ಟಣದಲ್ಲಿ ಸರ್ಕಾರಿ ಕ್ರೀಡಾಂಗಣ ಇಲ್ಲದಿರುವುದು ಅತ್ಯಂತ ಬೇಸರದ ಸಂಗತಿ.
ತಿ. ನರಸೀಪುರ ಪಟ್ಟಣವನ್ನು ಮುಖ್ಯಮಂತ್ರಿಗಳು ಮತ್ತು ಪ್ರಭಾವಿ ಸಚಿವರು ಹಲವು ಬಾರಿ ಪ್ರತಿನಿಧಿಸಿದ್ದರೂ ಇಲ್ಲಿ ಸಾರ್ವಜನಿಕ ಕ್ರೀಡಾಂಗಣ ನಿರ್ಮಾಣ ಮಾಡುವ ಬಗ್ಗೆ ಅವರು ಗಮನಹರಿಸದೆ ಇರುವುದು ಕ್ಷೇತ್ರದ ಜನತೆಯ ದುರದೃಷ್ಟ.ಪ್ರಸ್ತುತ ದಿನಗಳಲ್ಲೂ ಕನ್ನಡ ರಾಜ್ಯೋತ್ಸವ,ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನ, ಸ್ವಾತಂತ್ರ್ಯ ದಿನಾಚರಣೆ, ದೊಡ್ಡಮಟ್ಟದ ಸರ್ಕಾರಿ ಕಾರ್ಯಕ್ರಮಗಳು ಮತ್ತು ಇನ್ನಿತರ ತೆರೆದ ವೇದಿಕೆ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರಿ
ಕ್ರೀಡಾಂಗಣದ ವ್ಯವಸ್ಥೆಯಿಲ್ಲ.ಸರ್ಕಾರಿ ಕಾರ್ಯಕ್ರಮಗಳಿಗೂ ಖಾಸಗಿ ವಿದ್ಯೋದಯ ಕಾಲೇಜಿನ ಮೈದಾನವನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ.
ವರುಣಾ ಮತ್ತು ತಿ.ನರಸೀಪುರ ಕ್ಷೇತ್ರಗಳನ್ನು ಒಳಗೊಂಡ ತಿ.ನರಸೀಪುರ ಪಟ್ಟಣದಲ್ಲಿ 30ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದ್ದು,ಉದ್ಯೋಗಸ್ಥರು ತಮ್ಮ ಮಕ್ಕಳ ವಿದ್ಯಾಭ್ಯಾಸ ಮತ್ತು ಕಚೇರಿಗಳಿಗೆ ಓಡಾಡುವ ಹಿತದೃಷ್ಟಿಯಿಂದ ಪಟ್ಟಣದಲ್ಲಿ ವಾಸಿಸುತ್ತಿರುವ ಕಾರಣ ತಿ.ನರಸೀಪುರ ಪಟ್ಟಣ ಶರವೇಗದಲ್ಲಿ ಬೆಳೆಯುತ್ತಿದೆ.ಆದರೆ,ತಿ.ನರಸೀಪುರ ಪಟ್ಟಣದಲ್ಲಿ
ಬಹುಪಯೋಗಿ ಕ್ರೀಡಾಂಗಣವೇ ಇಲ್ಲ.ಪಟ್ಟಣದ ಯುವ ಜನತೆ ಮತ್ತು ಕ್ರೀಡಾಪಟುಗಳು ಬೆಳಗಿನ ವಾಯುವಿಹಾರ, ಸಂಜೆ ವಾಯುವಿಹಾರ, ವ್ಯಾಯಾಮಕ್ಕಾಗಿ ವಿದ್ಯೋದಯ ಕಾಲೇಜಿನ ಆಟದ ಮೈದಾನ ಇಲ್ಲವೇ ನಂಜನಗೂಡು, ಮೈಸೂರು,ಕೊಳ್ಳೇಗಾಲ ಮತ್ತು ತಲಕಾಡು ಮುಖ್ಯರಸ್ತೆಗಳ ಇಕ್ಕೆಲಗಳನ್ನು ಅವಲಂಬಿಸಿದ್ದಾರೆ. ತಿ.ನರಸೀಪುರ ಪಟ್ಟಣದಲ್ಲಿ ಹಲವು ಕ್ರೀಡಾಪಟುಗಳು ವಾಸವಿದ್ದು,ಅವರು ತಮ್ಮ ಅಭ್ಯಾಸ ಮತ್ತು ತರಬೇತಿಗಾಗಿ ಸ್ಥಳವಿಲ್ಲದೆ ಇರುವುದರಿಂದ ವಿದ್ಯೋದಯ ಕಾಲೇಜಿನ ಆಟದ ಮೈದಾನವನ್ನು ಅವಲಂಬಿಸಿದ್ದಾರೆ.ಇಲ್ಲವೇ ರಸ್ತೆಬದಿಯೇ ಅವರ ಕ್ರೀಡಾಂಗಣವಾಗಿದೆ.
ಜಾಗದ ಕೊರತೆಯ ಕುಂಟು ನೆಪ:
ತಿ.ನರಸೀಪುರ ಪಟ್ಟಣದ ವ್ಯಾಪ್ತಿಯಲ್ಲಿ ಕ್ರೀಡಾಂಗಣ
ನಿರ್ಮಾಣ ಮಾಡುವ ಬಗ್ಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಜನ ಪ್ರತಿನಿಧಿಗಳು ಆಸಕ್ತಿ ತೋರಿಲ್ಲ.ತಿ. ನರಸೀಪುರ ಪಟ್ಟಣದ ವ್ಯಾಪ್ತಿಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಸರ್ಕಾರಿ ಜಾಗವಿಲ್ಲ ಎಂದು ಸಬೂಬು ನೀಡಲಾಗುತ್ತಿದೆ.ಪಟ್ಟಣ ವ್ಯಾಪ್ತಿಯ ಸರ್ಕಾರಿ ಜಾಗ ಅಥವ ಖಾಸಗಿ ಜಾಗವನ್ನು ಗುರುತಿಸಿ ಕ್ರೀಡಾಂಗಣ ನಿರ್ಮಾಣ ಮಾಡಬಹುದಿತ್ತು.ಆದರೆ,ಇದುವೆರೆವಿಗೂ ಕ್ರೀಡಾಂಗಣ ನಿರ್ಮಾಣ ಮಾಡುವ ಬಗ್ಗೆ ರಾಜಕೀಯ ನಾಯಕರು ಚಿತ್ತಹರಿಸಿಲ್ಲ.ಶೀಘ್ರವೇ ಕ್ರೀಡಾಂಗಣ ನಿರ್ಮಾಣವಾಗಲಿ ಎಂಬುದು ಸಾರ್ವಜನಿಕ ಬೇಡಿಕೆಯಾಗಿದ್ದು,ತಿ.ನರಸೀಪುರ ಪಟ್ಟಣದ ಜನತೆಯ ಅಭಿಲಾಷೆ ಈಡೇರುವುದೇ ಎಂದು ಕಾದು ನೋಡಬೇಕಿದೆ.
ತಿ.ನರಸೀಪುರ ಪುರಸಭೆಯ 23 ವಾರ್ಡ್ ಗಳ ಪೈಕಿ
16 ವಾರ್ಡ್ ಗಳು ಮುಖ್ಯಮಂತ್ರಿಳಾದ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದರೆ,ಉಳಿದ 7 ವಾರ್ಡ್ ಗಳು ಸಚಿವ ಎಚ್.ಸಿ.ಮಹದೇವಪ್ಪ ಪ್ರತಿನಿಧಿಸುವ ತಿ.ನರಸೀಪುರ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿವೆ.ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದಲೇ 3 ಬಾರಿ ಗೆದ್ದು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೆ,ಸಚಿವ ಎಚ್.ಸಿ.ಮಹದೇವಪ್ಪ ತಿ.ನರಸೀಪುರ ಕ್ಷೇತ್ರವನ್ನು 6 ಬಾರಿ ಪ್ರತಿನಿಧಿಸಿ 4ಬಾರಿ ಮಂತ್ರಿಯಾಗಿದ್ದಾರೆ.ಆದರೆ, ತಿ.ನರಸೀಪುರ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಿಸುವ ಬಗ್ಗೆ ಆಲೋಚನೆ ಮಾಡದಿರುವುದು ತಿ.ನರಸೀಪುರ ಪಟ್ಟಣದ ಜನತೆಯ ದುರದೃಷ್ಟ.