ಬೆಂಗಳೂರು: ಮುಡಾ ಸೈಟ್ ಹಂಚಿಕೆ ಹಗರಣ ಸಿಎಂ ಸಿದ್ದರಾಮಯ್ಯಗೆ ಆತಂಕ ತಂದೊಡ್ಡಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿಯನ್ನೂ ಕೊಟ್ಟಿದ್ದಾರೆ. ಇದರ ಮಧ್ಯೆ ಹೈಕೋರ್ಟ್ 10ದಿನಗಳ ಕಾಲ ಮಧ್ಯಂತರ ತಡೆ ನೀಡಿತ್ತು. ತಾತ್ಕಾಲಿಕ ರಿಲೀಫ್ಗೆ ಇವತ್ತೊಂದೇ ದಿನ ಬಾಕಿಯಿದೆ. ಗುರುವಾರ ಹೈಕೋರ್ಟ್ನಲ್ಲಿ ಮತ್ತೆ ವಿಚಾರಣೆ ನಡೆಯಲಿದೆ. ಪ್ರಾಸಿಕ್ಯೂಷನ್, ಖಾಸಗಿ ದೂರುಗಳಿಗೆ ಮಧ್ಯಂತರ ತಡೆ ನೀಡಿ ಆದೇಶಿಸಿದ್ದ ಕೋರ್ಟ್ ವಿಚಾರಣೆ ನಡೆಸಲಿದೆ. ಏನಾಗಲಿದೆ ಎಂಬುದರ ಬಗ್ಗೆಯೇ ಎಲ್ಲರ ಚಿತ್ತ ನೆಟ್ಟಿದೆ.
ಈ ಮಧ್ಯೆ, ರಾಜ್ಯಪಾಲರ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್, ಮತ್ತೊಂದು ಹೋರಾಟಕ್ಕೆ ಸಜ್ಜಾಗಿದೆ. ನಾಳೆ ಹೈಕೋರ್ಟ್ನಲ್ಲಿ ಹೈವೋಲ್ಟೇಜ್ ವಿಚಾರಣೆ ನಡೆಯಿದೆ. ಇತ್ತ ರಾಜಭವನ ಚಲೋಗೆ ಡಿಸಿಎಂ ಡಿಕೆ ಶಿವಕುಮಾರ್ ಕರೆ ಕೊಟ್ಟಿದ್ದಾರೆ. ಆಗಸ್ಟ್ 31ರಂದು ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ಶಾಸಕರು, ಸಚಿವರು, ಪರಿಷತ್ ಸದಸ್ಯರು, ಸಂಸದರು ಪ್ರತಿಭಟಿಸಲಿದ್ದಾರೆ. ವಿಧಾನಸೌಧ ಬಳಿಯಿರುವ ಮಹಾತ್ಮ ಗಾಂಧಿ ಪ್ರತಿಮೆಯಿಂದ ರಾಜಭವನ ಚಲೋ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಿರುದ್ಧದ ಪ್ರಾಸಿಕ್ಯೂಷನ್ ವಿಚಾರವನ್ನು ಪ್ರಸ್ತಾಸಿರುವ ಡಿಸಿಎಂ ಡಿಕೆ ಶಿವಕುಮಾರ್, ಹೆಚ್ಡಿಕೆ ವಿರುದ್ಧ ವ್ಯಂಗ್ಯವಾಡಿದ್ದಾರೆ. ನಮ್ಮ ಬಿಗ್ ಬ್ರದರ್ ಕುಮಾರಸ್ವಾಮಿ ಬಹಳ ಪ್ರಾಮಾಣಿಕರು. ಅವರು ಮಾಡುವುದೆಲ್ಲ ಸಾಚಾ ಕೆಲಸ ಎಂದು ತಿವಿದಿದ್ದಾರೆ. ಅಷ್ಟೇ ಅಲ್ಲ ತಮ್ಮ ಸಹಿ ಫೋರ್ಜರಿ ಆಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಅದಕ್ಕೂ ಡಿಸಿಎಂ ತಿರುಗೇಟು ನೀಡಿದ್ದಾರೆ.