ತಿ.ನರಸೀಪುರ:ಪಟ್ಟಣದ ಕಪಿಲಾ ಮತ್ತು ಕಾವೇರಿ ನದಿಗೆ ನಿರ್ಮಿಸಿದ್ದ ಹಳೇ ಸೇತುವೆಗಳ ರಸ್ತೆಗಳಲ್ಲಿನ ಭಾರೀ ಹಳ್ಳಗಳು ಸಾವಿಗೆ ಅಹ್ವಾನ ನೀಡುತ್ತಿವೆ.ಮಳೆಗಾಲದಲ್ಲಿ ಸೇತುವೆ ಮೇಲಿನ ನೀರು ಸರಾಗವಾಗಿ ವಿಲೇವಾರಿ ಆಗದೆ ರಸ್ತೆ ಮೇಲಿನ ಹೊಂಡಗಳಲ್ಲಿ ನಿಂತುಕೊಳ್ಳುತ್ತಿದ್ದು,ವಾಹನ ಸಂಚಾರ ದುಸ್ತರವಾಗಿದೆ. ಮಳೆಗಾಲದಲ್ಲಿ ದ್ವಿಚಕ್ರ ವಾಹನ ಚಾಲಕರಿಗೆ ರಾಡಿಯ ಮಜ್ಜನ ಕೂಡ ನಡೆಯುತ್ತದೆ.ಒಮ್ಮೊಮ್ಮೆ ದ್ವಿಚಕ್ರ ವಾಹನ ಚಾಲಕರು ಹಳ್ಳಕ್ಕೆ ಬಿದ್ದು ಕೈಕಾಲು ಮುರಿದುಕೊಂಡಿದ್ದು, ಇನ್ನು ಕೆಲವರು ತಲೆ ಹೊಡೆದುಕೊಂಡಿದ್ದಾರೆ.
ಕಾವೇರಿ -ಕಪಿಲಾ ಹಳೆಯ ಸೇತುವೆಗಳ ಮೇಲೆ ದೊಡ್ಡ ಗಾತ್ರದ ಹೊಂಡಗಳಿದ್ದು,ವಾಹನ ಚಾಲಕರಿಗೆ ಸಂಚಾರ ಮಾಡಲು ಕಷ್ಟಕರವಾಗುತ್ತಿದೆ.ಈಗ ಸೇತುವೆಗಳ ತುಂಬಾ ಹಳ್ಳಕೊಳ್ಳಗಳು ಹೆಚ್ಚಾಗಿರುವ ಪರಿಣಾಮ ದಿನಾಲೂ ಅಪಘಾತಗಳು ನಡೆಯುತ್ತಲೇ ಇವೆ.
ಕಾವೇರಿ-ಕಪಿಲಾ ಹಳೇ ಸೇತುವೆಗಳು ನಿರ್ಮಾಣಗೊಂಡು ಶತಮಾನಗಳೇ ಕಳೆದಿದ್ದು, ಹಳೆಯ ಎರಡು ಸೇತುವೆಗಳು ಶಿಥಿಲಾವಸ್ಥೆ ತಲುಪಿವೆ.
ಹಾಗಾಗಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಕಾವೇರಿ -ಕಪಿಲಾ ಸೇತುವೆಗಳ ಮೇಲೆ ಭಾರೀ ವಾಹನಗಳ ಓಡಾಟವನ್ನು ನಿಷೇಧಿಸಿದೆ.ಆದರೆ,ಇಲ್ಲಿನ ರಸ್ತೆಗಳನ್ನು ರಿಪೇರಿ ಮಾಡುವ ಗೋಜಿಗೆ ಯಾರು ಹೋಗುತ್ತಿಲ್ಲ.
ಹೊಸ ಸೇತುವೆ ಮಾರ್ಗವಾಗಿ ಬನ್ನೂರು, ಮಳವಳ್ಳಿ,ಬೆಂಗಳೂರು ಮತ್ತು ಮಂಡ್ಯ ಕಡೆ ಹೋಗುವ ಹಳೇ ತಿರುಮಕೂಡಲು ತಿರುವಿನಲ್ಲಿ ದೊಡ್ಡ ಗಾತ್ರದ ದೊಡ್ಡ ಹಳ್ಳ ಇದ್ದು,ಮಳೆಗಾಲದಲ್ಲಿ ಹಳ್ಳದಲ್ಲಿ ನೀರು ತುಂಬಿಕೊಳ್ಳುವುದರಿಂದ ಭಾರೀ ಅನಾಹುತ ನಡೆಯಬಹುದು.ಅಲ್ಲದೆ ಬನ್ನೂರಿನಿಂದ ನರಸೀಪುರ ಕಡೆ ಬರುವ ಮಾರ್ಗದಲ್ಲಿ ಹಳೇ ತಿರುಮಕೂಡಲು ತಿರುವಿನಲ್ಲೂ ಮತ್ತೊಂದು ಭಾರೀ ಗಾತ್ರದ ಹಳ್ಳವಿದೆ. ಈ ಹಳ್ಳಗಳನ್ನು ಮುಚ್ಚಿಸಲು ಸಂಬಂಧಪಟ್ಟ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ.
ಜವಾಬ್ದಾರಿಯ ಗೊಂದಲ: ಹಳೇ ಸೇತುವೆಯ ರಸ್ತೆಗಳಲ್ಲಿ ಭಾರೀ ಗಾತ್ರದ ಹೊಂಡಗಳಿರುವ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಪ್ರಶ್ನಿಸಿದರೆ ಯಾರು ಕೂಡ ಹಳ್ಳಗಳನ್ನು ಮುಚ್ಚಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿಲ್ಲ.ಸೇತುವೆಗಳು ರಾಷ್ಟ್ರೀಯ ಹೆದ್ದಾರಿಯ ವ್ಯಾಪ್ತಿಗೆ ಒಳ ಪಡುವುದರಿಂದ ಸೇತುವೆಗಳ ಕೆಲಸವನ್ನು ಪ್ರಾಧಿಕಾರವೇ ಮಾಡಬೇಕು ಎಂಬುದು ಪುರಸಭಾ ಮುಖ್ಯಧಿಕಾರಿಗಳ ವಾದ.ಪುರಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆಂತರಿಕ ಗೊಂದಲದಿಂದ ಕಳೆದ ಐದಾರು ವರ್ಷಗಳಿಂದಲೂ ಸೇತುವೆ ರಸ್ತೆಗಳ ಹಳ್ಳಗಳು ಹಾಗೆಯೇ ಉಳಿದುಕೊಂಡಿವೆ.
ಸೇತುವೆ ಮೇಲಿನ ರಸ್ತೆಗಳಲ್ಲಿರುವ ಹಳ್ಳಗಳಿಂದ ಸಾರ್ವಜನಿಕ ಓಡಾಟಕ್ಕೆ ಬಹಳ ತೊಂದರೆಯಾಗುತ್ತಿದ್ದು,ಪುರಸಭೆ ಅಥವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲ್ಲಿ ನಡೆಯುವ ಅನಾಹುತಗಳನ್ನು ತಪ್ಪಿಸಲು ಶೀಘ್ರವೇ ಸೇತುವೆ ರಸ್ತೆಯಗಳಲ್ಲಿನ ಹಳ್ಳಗಳನ್ನು ಮುಚ್ಚಿಸಲು ತುರ್ತು ಕ್ರಮ ಕೈಗೊಳ್ಳಬೇಕು.