ಮಂಡ್ಯ:- ಪ್ರಸಕ್ತ ಸಾಲಿನಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವ ಕಾರ್ಯಾಚರಣೆಗೆ ಶುಕ್ರವಾರ (ಜೂ.16) ಸಾಂಕೇತಿಕ ಚಾಲನೆ ದೊರೆಯಲಿದೆ. ಆಷಾಢ ಮಾಸದ ಹಿನ್ನೆಲೆಯಲ್ಲಿ ಕಂಪನಿಯ ಬಾಯ್ಲರ್ಗೆ ಬೆಂಕಿ ಹಾಕಲಾಗುತ್ತಿದ್ದು, ಮುಂದಿನ ಒಂದು ವಾರ ಅಥವಾ ಹದಿನೈದು ದಿನಗಳೊಳಗೆ ಕಬ್ಬು ಅರೆಯುವಿಕೆ ಕಾರ್ಯಾಚರಣೆ ವಿದ್ಯುಕ್ತವಾಗಿ ಆರಂಭವಾಗಲಿದೆ.
ಗುರುವಾರದಂದೇ ಮೈಷುಗರ್ ಬಾಯ್ಲರ್ಗೆ ಬೆಂಕಿ ಹಾಕುವ ಕಾರ್ಯಕ್ರಮ ನಿಗದಿಯಾಗಿತ್ತು. ಸಚಿವ ಸಂಪುಟ ಸಭೆ ಕರೆದಿದ್ದರಿಂದ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದುಗೊಂಡಿತ್ತು. ಹಾಗಾಗಿ ಶುಕ್ರವಾರದಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ಬಾಯ್ಲರ್ಗೆ ಪೂಜೆ ಸಲ್ಲಿಸಿ ಬೆಂಕಿ ಹಾಕಲಿದ್ದಾರೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ , ಜಿಲ್ಲೆಯ ಎಲ್ಲಾ ಶಾಸಕರು, ಕಂಪನಿಯ ಆಡಳಿತ ಮಂಡಳಿ ಅಧಿಕಾರಿಗಳು, ರೈತ ಮುಖಂಡರು ಹಾಜರಿರಲಿದ್ದಾರೆ.
ಪ್ರತಿ ವರ್ಷ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಮೈಷುಗರ್ ಕಾರ್ಖಾನೆ ಕಬ್ಬು ನುರಿಸುವ ಕೆಲಸಕ್ಕೆ ಚಾಲನೆ ದೊರೆಯುತ್ತಿತ್ತು. ಈ ವರ್ಷ ಜೂನ್ ತಿಂಗಳಲ್ಲೇ ಕಬ್ಬು ಅರೆಯುವಿಕೆಗೆ ಚಾಲನೆ ಸಿಗುತ್ತಿರುವುದು ಹೊಸ ಬೆಳವಣಿಗೆಯಾಗಿದೆ. ಸರ್ಕಾರವು ಸಕಾಲದಲ್ಲಿ ಹಣ ಬಿಡುಗಡೆ ಮಾಡಿರುವುದರಿಂದ ಕಾರ್ಖಾನೆ ಅಬ್ಬು ಅರೆಯುವಿಕೆ ಹೇಗೆ ನಡೆಯಲಿದೆ ಎನ್ನುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಮೈಸೂರು ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿ 5.03 ಲಕ್ಷ ಟನ್ ಕಬ್ಬು ಒಪ್ಪಿಗೆ ಮಾಡಿಕೊಂಡಿದೆ. ಈ ಬಾರಿ ಕಬ್ಬಿಗೆ ಕೊರತೆ ಎದುರಾಗುವ ಸಾಧ್ಯತೆಗಳೂ ಇವೆ. ನೀರಿನ ಅಭಾವದಿಂದ ಕಬ್ಬು ಗದ್ದೆಯಲ್ಲೇ ಒಣಗುತ್ತಿತ್ತು. ರೈತರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಮಂಗಳವಾರ ಮಧ್ಯರಾತ್ರಿಯಿಂದ ನಾಲೆಗಳಿಗೆ ನೀರು ಹರಿಸುತ್ತಿದೆ. ಇನ್ನೂ ಕಬ್ಬು ಬೆಳೆಗೆ ಎರಡು-ಮೂರು ಕಟ್ಟು ನೀರಿನ ಅವಶ್ಯಕತೆ ಇದೆ.
ಕಬ್ಬಿಗೆ ಮುಗಿಬಿದ್ದಿರುವ ಖಾಸಗಿ ಕಾರ್ಖಾನೆಗಳು
ಮೈಷುಗರ್ ವ್ಯಾಪ್ತಿಯ ಕಬ್ಬಿನ ಮೇಲೆ ಹಿಂದಿನಿಂದಲೂ ಖಾಸಗಿ ಕಾರ್ಖಾನೆಗಳು ಹದ್ದಿನ ಕಣ್ಣಿಟ್ಟಿವೆ. ಜೂನ್ ಅಥವಾ ಜುಲೈ ತಿಂಗಳಲ್ಲೇ ಕಬ್ಬು ಅರೆಯುವಿಕೆ ಆರಂಭಿಸುವ ಖಾಸಗಿ ಕಾರ್ಖಾನೆಗಳು ಮೈಷುಗರ್ ವ್ಯಾಪ್ತಿಯ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಎಫ್ಆರ್ಪಿ ದರಕ್ಕೆ ಕಬ್ಬನ್ನು ಕೊಂಡೊಯ್ಯುತ್ತಿವೆ.
ಮೈಷುಗರ್ ವ್ಯಾಪ್ತಿಯ ಕಬ್ಬು ಕೈಬಿಟ್ಟು ಹೋದರೆ ಕಾರ್ಖಾನೆ ನಡೆಸುವುದು ಖಾಸಗಿಯವರಿಗೂ ಕಷ್ಟವಾಗಲಿದೆ. ಇದೇ ಕಾರಣದಿಂದ ಸುಮಾರು ಎರಡು ದಶಕಗಳಿಂದ ಮೈಷುಗರ್ ಕಾರ್ಖಾನೆ ಸಮರ್ಥವಾಗಿ ಕಬ್ಬು ನುರಿಸದಂತೆ ತಡೆಯುವಲ್ಲಿ ಖಾಸಗಿ ಕಾರ್ಖಾನೆಯವರ ಪಾತ್ರವೂ ಮಹತ್ವದ್ದಾಗಿದೆ ಎಂದು ರೈತ ಮುಖಂಡರು ಹೇಳುವ ಮಾತಾಗಿದೆ.
ಮೈಷುಗರ್ ವ್ಯಾಪ್ತಿಯ ರೈತರು ಖಾಸಗಿ ಕಾರ್ಖಾನೆಯವರಿಗೆ ಕಬ್ಬನ್ನು ಕೊಡುವುದೇ ಆದಲ್ಲಿ ಎಫ್ಆರ್ಪಿ ದರದ ಮೇಲೆ 300 ರೂಪಾಯಿ ಹೆಚ್ಚು ಹಣಕ್ಕೆ ಬೇಡಿಕೆ ಇಡಬೇಕು. ಏಕೆಂದರೆ, ಸಕ್ಕರೆ ಮತ್ತು ಮೊಲಾಸಸ್ ದರ ಈಗ ಹೆಚ್ಚಳವಾಗಿದೆ.
ಕೇಂದ್ರ ಸರ್ಕಾರ ಪ್ರತಿ ಕೆಜಿ ಸಕ್ಕರೆಗೆ 31 ರೂಪಾಯಿ ನಿಗದಿಪಡಿಸಿದ್ದರೆ ಖಾಸಗಿ ಕಾರ್ಖಾನೆಯವರು ಪ್ರತಿ ಕೆಜಿ ಸಕ್ಕರೆಯನ್ನು 34 ರಿಂದ 35 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಸಾಕಷ್ಟು ನಷ್ಟವಾಗುತ್ತಿದೆ. ಪ್ರತಿ ಕ್ವಿಂಟಾಲ್ ಸಕ್ಕರೆ ಬೆಲೆ 200 ರಿಂದ 250 ರೂಪಾಯಿ ಹೆಚ್ಚಳವಾಗಿರುವುದರಿಂದ ಎಫ್ಆರ್ಪಿ ದರದ ಮೇಲೆ 300 ರೂಪಾಯಿ ಹೆಚ್ಚು ಹಣ ನೀಡುವಂತಹ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿ.
ಮೈ ಶುಗರ್ಸ್ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ: 50 ಕೋಟಿ ಬಿಡುಗಡೆ: 37 ಸಾವಿರ ಕಬ್ಬು ಬೆಳೆಗಾರರಿಗೆ ಚೈತನ್ಯ!ಮೈ ಶುಗರ್ಸ್ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ: 50 ಕೋಟಿ ಬಿಡುಗಡೆ: 37 ಸಾವಿರ ಕಬ್ಬು ಬೆಳೆಗಾರರಿಗೆ ಚೈತನ್ಯ!
ಇಲ್ಲದಿದ್ದರೆ ಮೈಷುಗರ್ ಕಾರ್ಖಾನೆ ಆರಂಭವಾಗುವವರೆಗೆ ಕಾದುನೋಡಿ. ಈಗ ನಾಲೆಗಳಿಗೆ ನೀರು ಹರಿಸುತ್ತಿರುವುದರಿಂದ ಕಬ್ಬು ಬೆಳೆ ರಕ್ಷಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಖಾಸಗಿಯವರಿಗೆ ಕಬ್ಬು ಕೊಟ್ಟು ನಷ್ಟಕ್ಕೆ ಗುರಿಯಾಗದಂತೆ ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್.ಕೃಷ್ಣ ರೈತರಲ್ಲಿ ಮನವಿ ಮಾಡಿದ್ದಾರೆ.
ದಿನಕ್ಕೆ 2500 ರಿಂದ 3000 ಟನ್ ಕಬ್ಬು ಕಟಾವು ಮಾಡುವ ಜನರನ್ನು ಹೊಂದಿಸಿಕೊಳ್ಳುವುದು ಅಗತ್ಯವಾಗಿದೆ. ಹಾಗಾಗಿ ಕಳೆದ ವರ್ಷ ಕಬ್ಬು ಕಟಾವು ಮಾಡಲು ನೀಡಿದ್ದ ಗ್ಯಾಂಗ್ಮನ್ಗಳನ್ನು ಬದಲಾಯಿಸಲಾಗುತ್ತಿದೆ. ಸ್ಥಳೀಯವಾಗಿ 60 ರಿಂದ 70 ತಂಡ ಹಾಗೂ ಕರ್ನಾಟಕ-ಮಹಾರಾಷ್ಟ್ರ ಗಡಿಯಿಂದ 50 ತಂಡಗಳನ್ನು ಕರೆಸಲು ನಿರ್ಧರಿಸಲಾಗಿದೆ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಅಪ್ಪಾ ಸಾಹೇಬ ಪಾಟೀಲ್ ತಿಳಿಸಿದರು.
ಸ್ಥಳೀಯ ತಂಡಕ್ಕೆ ತಲಾ 1 ಲಕ್ಷ ರೂಪಾಯಿ ಹಾಗೂ ಕರ್ನಾಟಕ-ಮಹಾರಾಷ್ಟ್ರ ಗಡಿಯಿಂದ ಬರುವ ತಂಡಗಳಿಗೆ ತಲಾ 2.50 ಲಕ್ಷ ರೂಪಾಯಿ ಹಣವನ್ನು ನೀಡಲು ತೀರ್ಮಾನಿಸಲಾಗಿದೆ. ಕಳೆದ ಸಾಲಿನಲ್ಲಿ ಕಬ್ಬು ಕಟಾವು ಮಾಡಲು ನೀಡಿದ್ದ ಹಣದಲ್ಲಿ 72 ಲಕ್ಷ ರೂಪಾಯಿ ಬಾಕಿ ಇದೆ. ನಾಲ್ಕೈದು ವರ್ಷದ ಹಿಂದೆ ಕೊಟ್ಟಿದ್ದ ಹಣದಲ್ಲಿ 30 ಲಕ್ಷ ರೂಪಾಯಿ ಬಾಕಿ ವಸೂಲಿಯಾಗಬೇಕಿದೆ. ಕಂಪನಿಯವರು ಆ ಗ್ಯಾಂಗ್ಮನ್ ಸಂಪರ್ಕಿಸಿದ್ದು, ಅವರು ಹಣವನ್ನು ವಾಪಸ್ ತಂದುಕೊಡುವುದಾಗಿ ತಿಳಿಸಿದ್ದಾರೆಂದು ಮಾಹಿತಿ ನೀಡಿದರು.