ಮೈಸೂರು: ಕಳೆದ ಮೂರು ದಿನಗಳಿಂದ ಶ್ರೀ ರಾಜೇಂದ್ರ ಸ್ವಾಮೀಜಿಗಳ ಪ್ರತಿಮೆ ಇಟ್ಟಿರುವ ವಿಚಾರ ವಿವಾದಕ್ಕೀಡಾಗಿರುವಾಗಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೊಂದು ಪ್ರತಿಮೆ ಇಟ್ಟಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಹೌದು ನಾಲ್ಕು ದಿನಗಳ ಹಿಂದೆ ರಾತ್ರೋರಾತ್ರಿ ಸುತ್ತೂರು ಮಠದ ದಿ ಶ್ರೀ ರಾಜೇಂದ್ರ ಸ್ವಾಮೀಜಿಗಳ ಪ್ರತಿಮೆಯನ್ನು ತಂದು ಇಡಲಾಯಿತು. ಈ ಬಗ್ಗೆ ಅರಸು ಮಂಡಳಿ ವಿರೋಧ ವ್ಯಕ್ತಪಡಿಸಿ ಇದರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿಯೂ ತಿಳಿಸಿದ್ದಾರೆ. ಆದರೆ, ಹಗಲಲ್ಲೇ ಪ್ರತಿಮೆಯೊಂದನ್ನು ಪುರಪಿತೃವೊಬ್ಬರ ಸಮಕ್ಷಮದಲ್ಲೇ ಮೂರ್ತಿಯೊಂದನ್ನು ಇರಿಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ.
ಹೌದು ನಂಜುಮಳಿಗೆಯಿಂದ ಚಾಮುಂಡಿಪುರಂಗೆ ಹೋಗುವ ಹೊಸಬಂಡಿಕೇರಿಯ ಮುಖ್ತರಸ್ತೆಯ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಜಾಗದಲ್ಲೇ ಕನಕದಾಸರ ಪ್ರತಿಮೆಯನ್ನು ಹಗಲಿನಲ್ಲೇ ತಂದು ಸ್ಥಾಪಿಸಲಾಗಿದೆ.
ಮೂಲಗಳ ಮಾಹಿತಿ ಪ್ರಕಾರ ನ.30ರಂದು ಹಗಲಿನಲ್ಲೇ ಪ್ರತಿಮೆಯನ್ನು ಸರಳವಾಗಿ ಪ್ರತಿಷ್ಠಾಪಿಸಿ ಲೋಕಾರ್ಪಣೆಗೊಳಿಸಲಾಗಿದೆ. ಇದರ ಉದ್ಘಾಟನೆಯಂದು ಪುರಪಿತೃವಾದ ಮಾ.ವಿ.ರಾಮಪ್ರಸಾದ್ ಅವರೇ ಪುಷ್ಪಾರ್ಚನೆ ಮಾಡಿದ್ದಾರೆ. ಆದರೆ, ಈ ಪ್ರತಿಮೆ ಅಧಿಕೃತವೋ ಅಥವಾ ಅನಧಿಕೃತವೋ ಎಂಬ ಕುರಿತು ಸ್ಪಷ್ಟಪಡಿಸಬೇಕಾದ ಪಾಲಿಕೆ ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಸುಮ್ಮನಿದ್ದಾರೆ. ರಾಜೇಂದ್ರ ಶ್ರೀಗಳ ಪ್ರತಿಮೆ ವಿಚಾರವಾಗಿ ನಡೆಯುತ್ತಿರುವ ವಾದ ಹಾಗೂ ವಿವಾದಲ್ಲೇ ಇಲ್ಲೊಂದು ಪ್ರತಿಮೆ ಸದ್ದಿಲ್ಲದೆ ತಲೆ ಎತ್ತಿರುವುದು ಹಲವು ಪ್ರಶ್ನೆಗಳಿಗೂ ಕಾರಣವಾಗಿದೆ.