ನವದೆಹಲಿ: ರಾಜಧಾನಿ ದೆಹಲಿಯಿಂದ ಮತ್ತೊಂದು ಭೀಕರ ಹತ್ಯೆ ಪ್ರಕರಣ ವರದಿಯಾಗಿದೆ. ವಾಯುವ್ಯ ದೆಹಲಿಯ ಶಹಬಾದ್ ಡೈರಿ ಪ್ರದೇಶದಲ್ಲಿ 16 ವರ್ಷದ ಯುವತಿಯನ್ನು ಆಕೆಯ ಪ್ರಿಯಕರ ಚಾಕುವಿನಿಂದ ಚುಚ್ಚಿ, ಕಲ್ಲಿನಿಂದ ಹೊಡೆದು ಕೊಂದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹರಿದಾಡುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೀಡಾದ ಶಹಬಾದ್ ಡೈರಿ ಪ್ರದೇಶದ ಜೆ.ಜೆ. ಕಾಲೊನಿಯ ಯುವತಿಯ ಮೃತದೇಹ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆ ಬದಿ ನಡೆದುಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿದ ದುಷ್ಕರ್ಮಿ, ಹಲವು ಬಾರಿ ಚುಚ್ಚಿ ಹತ್ಯೆ ಮಾಡಿದ್ದಾನೆ. ಹತ್ಯೆಗೀಡಾದ ಯುವತಿ ಜೊತೆ ಆರೋಪಿಯು ಸಹ ಜೀವನ ನಡೆಸುತ್ತಿದ್ದನು. ಸ್ನೇಹಿತೆಯ ಮಗನ ಬರ್ತ್ಡೇ ಪಾರ್ಟಿ ವಿಚಾರವಾಗಿ ಶನಿವಾರ ಮತ್ತು ಭಾನುವಾರ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಅದೇ ವಿಚಾರವಾಗಿ ಯುವಕ, ಯುವತಿಗೆ ಚುಚ್ಚಿದ್ದಾನೆ. ಬಳಿಕ, ಕಲ್ಲಿನಿಂದ ಹಲ್ಲೆ ಮಾಡಿ ಕೊಂದಿದ್ದಾನೆ.
20ಕ್ಕೂ ಅಧಿಕ ಬಾರಿ ಯುವತಿಗೆ ಇರಿಯಲಾಗಿದೆ ಎಂದು ದೆಹಲಿ ಉತ್ತರ ಹೊರವಲಯದ ಹೆಚ್ಚುವರಿ ಡಿಸಿಪಿ ರಾಜಾ ಬಂತಿಯಾ ತಿಳಿಸಿದ್ದಾರೆ.
ಆರೋಪಿಯು ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೃತ ಯುವತಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 302ರಡಿ ಶಹಬಾದ್ ಡೈರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.