ಮೈಸೂರು: ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ-2023 ಅನ್ನು ಅಂಗೀಕರಿಸಿದ ಸರ್ಕಾರವನ್ನು ಸ್ವಾಗತಿಸುತ್ತಾ, ಮುಂದಿನ ಅಧಿವೇಶನದಲ್ಲಿ ಕೆಲವೊಂದು ತಿದ್ದುಪಡಿಗಳನ್ನು ಸಹ ಮಾಡುವಂತೆ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾನೂನು ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ವಿಭಾಗದ ಅಧ್ಯಕ್ಷ ತಿಮ್ಮಯ್ಯ ಮನವಿ ಮಾಡಿದ್ದಾರೆ.
ಈ ಸಂಬಂಧ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ವಕೀಲರ ವಿಧೇಯಕ ಅಂಗೀಕರಿಸಿರುವುದಕ್ಕೆ ಸರ್ಕಾರವನ್ನು ಅಭಿನಂದಿಸುತ್ತೇವೆ. ಆದರೆ, ಕಲಂ 4ರ ನ್ಯಾಯವಾದಿಗಳಿಗೆ ಸಂಬಂಧಿಸಿದ ಅಪರಾಧಗಳಿಗೆ ಶಿಕ್ಷೆಯ ಪ್ರಮಾಣವನ್ನು 3 ವರ್ಷದಿಂದ 7 ವರ್ಷದವರೆಗೆ ವಿಸ್ತರಿಸಬೇಕು. ಕಲಂ 5ರ ಅಪರಾಧ ಸಂಜೇಯುತ ದಂಡನೀಯವಾದ ಪ್ರತಿಯೊಂದು ಅಪರಾಧವು ಅಸಂಜೇಯವಾಗಿರತಕ್ಕದ್ದಾಗಿದೆ. ಕಲಂ 6ರಲ್ಲಿರುವಂತೆ ಈಗಾಗಲೇ ವಕೀಲರ ಬಂಧನದ ಬಳಿಕ ಸಂಬಂಧಿಸಿದ ವಕೀಲರ ಸಂಘಕ್ಕೆ ಪೊಲೀಸರು ಮಾಹಿತಿ ನೀಡುತ್ತಿದ್ದಾರೆ. ಆದರೆ, ಬಂಧನಕ್ಕೂ ಮುನ್ನವೇ ಸಂಬಂಧ ಪಟ್ಟ ವಕೀಲರ ಸಂಘಕ್ಕೆ ಮಾಹಿತಿ ನೀಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶವನ್ನು ಕಾಯಿದೆಯಲ್ಲಿ ತಿದ್ದುಪಡಿ ಮಾಡಿ ಜಾರಿಗೆ ತರಬೇಕೆಂದು ಹೇಳಿದರು.
ಇಂತಹದೊಂದು ಕಾನೂನು ಜಾರಿಗೆ ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ.ಪಾಟೀಲ್ ಮೊದಲಾದವರೆಲ್ಲರನ್ನೂ ಶೀಘ್ರದಲ್ಲೇ ಅಭಿನಂದಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ರಾಜ್ಯ ಕಾನೂನು ಘಟಕದ ಉಪಾಧ್ಯಕ್ಷ ಪಾಳ್ಯ ಸುರೇಶ್, ಪ್ರಧಾನ ಕಾರ್ಯದರ್ಶಿ ಎ.ಆರ್.ಕಾಂತರಾಜು, ಕಾರ್ಯದರ್ಶಿ ಪುಟ್ಟರಸ, ಜಿಲ್ಲಾ ಉಪಾಧ್ಯಕ್ಷ ಪಿ.ಬಿ.ಅಭಿಷೇಕ್ ಇದ್ದರು.