ಪದ್ಮಾಸನೇ ಪದ್ಮಾಕರೇ ಸರ್ವ ಲೌಕೈಕ ಪೂಜಿತೇ |
ನಾರಾಯಣಾಪ್ರಿಯೇ ದೇಯಿ ಸುಪ್ರಿತಾ ಭವ ಸರ್ವದಾ |
ಈ ಮಂತ್ರವನ್ನು ಪಠಿಸುವ ಮೂಲಕ ಶ್ರೀ ದೇವಿ ವರಮಹಾಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರವಾಗಬಹುದು. ಬದುಕಿನ ಸಮೃದ್ಧಿ, ಏಳ್ಗೆ, ವಿದ್ಯೆ, ಬುದ್ಧಿ ಎಲ್ಲವನ್ನೂ ಕೊಡುವ ಲಕ್ಷ್ಮೀ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರವಾಗಲು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ.
ಪುಣ್ಯ ಭೂಮಿ ಎನಿಸಿದ ನಮ್ಮ ಭಾರತ ಹಲವು ವಿಶೇಷತೆಗಳ ನಾಡು. ಪ್ರತಿಯೊಂದು ವಿಚಾರದಲ್ಲೂ ವೈವಿಧ್ಯತೆ, ವೈಶಿಷ್ಠ್ಯತೆ ಮತ್ತು ವಿಭಿನ್ನತೆಗಳು ಕಂಡು ಬರುತ್ತವೆ. ಸಾಂಸ್ಕೃತಿಕ ನೆಲೆಗಟ್ಟಿನ ಹಿನ್ನಲೆಯಲ್ಲಿ ಭಾರತದಲ್ಲಿ ಹಬ್ಬಗಳೆಂದರೆ ವಿಶೇಷ. ಹಬ್ಬದಲ್ಲಿ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಹಬ್ಬದ ದಿನ ಹಬ್ಬವನ್ನು ಆಚರಿಸುವ ಎಲ್ಲರ ಮನಸ್ಸಿನಲ್ಲೂ ಮನೋಲ್ಲಾಸ ತುಂಬಿರುತ್ತದೆ. ಏನೋ ಒಂದು ತರಹದ ಹುರುಪು. ಹಬ್ಬದ ನಂತರದ ದಿನಗಳು ಶುಭದಿನಗಳಾಗಲಿವೆ ಎಂಬ ನವ ಚೈತನ್ಯದ ನಂಬಿಕೆ. ಮನೆಗೆ ಸುಣ್ಣ ಬಣ್ಣಗಳನ್ನು ಪೂಸಿ, ತಳಿರು ತೋರಣಗಳಿಂದ ಶೃಂಗಾರ ಮಾಡಲಾಗುತ್ತದೆ. ಎಲ್ಲರೂ ಸ್ನಾನ್ಹಾನ್ನಿಕೆಗಳನ್ನು ಮಾಡಿ, ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ದೇವರ ಫೋಟೋ, ವಿಗ್ರಹಗಳಿಗೆ ವಿಶೇಷವಾಗಿ ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಲಾಗುತ್ತದೆ. ಒಳಿತಾಗಲೆಂದು ಪೂಜೆ ಸಲ್ಲಿಸಲಾಗುತ್ತದೆ. ಧೂಪ, ದೀಪಗಳ ನೈವೇದ್ಯದ ಆರತಿ ಬೆಳಗಲಾಗುತ್ತದೆ. ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳು ಎಷ್ಟೇ ಬೆಲೆಯಾದರೂ ಕೊಂಡುಕೊಳ್ಳಲು ಜನ ನೂಕುನುಗ್ಗಲಾಗುತ್ತದೆ. ಮನೆಗಳಲ್ಲಿ ಸಿಹಿ ಅಡುಗೆ ಮಾಡಿ ಸಂತೋಷದಿಂದ ಎಲ್ಲರೂ ಒಂದುಗೂಡಿ ಊಟ ಮಾಡಲಾಗುತ್ತದೆ. ದೇವಾಲಯಗಳಲ್ಲಿ ವಿಶೇಷವಾಗಿ ಪೂಜೆ ಮಾಡಲಾಗುತ್ತದೆ. ದೇವಾಲಯಗಳಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಿರುತ್ತದೆ. ಈ ರೀತಿಯಾಗಿ ಹಬ್ಬಗಳನ್ನು ಆಚರಿಸಲು ಹಿಂದೂಗಳ ಪವಿತ್ರ ಧರ್ಮಗ್ರಂಥಗಳಾದ ವೇದಗಳು , ಉಪನಿಷತ್ತುಗಳು, ಪುರಾಣಗಳು, ರಾಮಾಯಣ, ಮಹಾಭಾರತ ಮತ್ತು ಭಾಗವತಗಳು ಶ್ರೀ ಲಕ್ಷ್ಮೀದೇವಿಗೆ ವಿಶೇಷವಾದ ಸ್ಥಾನವನ್ನು ನೀಡಿವೆ. ರಾಕ್ಷಸರಿಂದ ರಕ್ಷಣೆ ಪಡೆಯಲು, ಸಕಲ ಸಂಪತ್ತು ಪ್ರಾಪ್ತವಾಗಲು ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಶಕ್ತಿದೇವಿಯ ಉಪಾಸನೆಯನ್ನು ಮಾಡುವುದು ಅವಶ್ಯಕವಾಗಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅದರಲ್ಲಿ ವರಮಹಾಲಕ್ಷ್ಮೀ ವ್ರತವೂ ಒಂದಾಗಿದೆ. ಶ್ರೀವರಮಹಾಲಕ್ಷ್ಮಿ ವ್ರತ ಆಚರಣೆಯನ್ನು ಮಹಿಳೆಯರು ತಮ್ಮ ಹಾಗೂ ತಮ್ಮ ಕುಟುಂಬದ ಎಲ್ಲಾ ಸದಸ್ಯರ ಯೋಗಕ್ಷೇಮಕ್ಕಾಗಿ ಉಪವಾಸವನ್ನು ಮಾಡುವ ಮೂಲಕ ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಮೊದಲ ಶುಕ್ರವಾರದಂದು ಆಚರಿಸಲಾಗುತ್ತದೆ. ಸಿರಿಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಶ್ರೀವರಮಹಾಲಕ್ಷ್ಮಿದೇವಿಯನ್ನು ಪೂಜಿಸುವ ವರಮಹಾಲಕ್ಷ್ಮಿ ವ್ರತವು ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಭಗವಾನ್ ಮಹಾವಿಷ್ಣುವಿನ ಪತ್ನಿಯಾದ ವರಮಹಾಲಕ್ಷ್ಮಿಯು ಮಹಾಲಕ್ಷ್ಮಿ ದೇವಿಯ ರೂಪಗಳಲ್ಲಿ ಒಂದಾಗಿದೆ. ಕ್ಷೀರ ಸಾಗರದಿಂದ ವರಲಕ್ಷ್ಮಿಯು ಅವತರಿಸಿದಳು. ಅವಳು ಕ್ಷೀರ ಸಾಗರದ ಮೈಬಣ್ಣವನ್ನೇ ಹೊಂದಿದ್ದಾಳೆ ಮತ್ತು ಅದೇ ಬಣ್ಣದ ಬಟ್ಟೆಗಳನ್ನು ಧರಿಸಿ ಅಲಂಕರಿಸಿಕೊಳ್ಳುತ್ತಾಳೆ ಎಂಬ ನಂಬಿಕೆಯಿದೆ. ವರಮಹಾಲಕ್ಷ್ಮೀ ವ್ರತ ಆಚರಿಸುವ ಶುಭ ಶುಕ್ರವಾರದಂದು ಬೆಳ್ಳಿ ಅಥವಾ ಕಂಚಿನ ಕಳಸವನ್ನು ಸ್ವಚ್ಛಗೊಳಿಸಿ ಅದಕ್ಕೆ ಶ್ರೀಗಂಧ ಲೇಪಿಸಿ ಕಲಶದ ಮೇಲೆ ಸ್ವಸ್ತಿಕ ಚಿಹ್ನೆಯನ್ನು ಬರೆದು ನಂತರ ಕಲಶವನ್ನು ನೀರು ಅಥವಾ ಹಸಿ ಅಕ್ಕಿ, ನಾಣ್ಯಗಳು ಮತ್ತು ಐದು ವಿಧದ ಎಲೆಗಳಿಂದ ತುಂಬಿಸುತ್ತಾರೆ. ನಂತರ ಕಲಶದ ಕುತ್ತಿಗೆಯನ್ನು ಶುದ್ಧವಾದ ಬಟ್ಟೆಯಿಂದ ಮುಚ್ಚಲಾಗುತ್ತದೆ ಮತ್ತು ಬಾಯಿಯನ್ನು ಮಾವಿನ ಎಲೆಗಳಿಂದ ಮುಚ್ಚಲಾಗುತ್ತದೆ. ಕೊನೆಯಲ್ಲಿ, ಕಲಶದ ಬಾಯಿಯನ್ನು ಮುಚ್ಚಲು ಅರಿಶಿನ ಲೇಪಿಸಿದ ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ತೆಂಗಿನಕಾಯಿಯ ಮೇಲೆ, ಲಕ್ಷ್ಮಿ ದೇವಿಯನ್ನು ಆಹ್ವಾನಿಸಲಾಗುತ್ತದೆ. ಕಲಶವು ಈಗ ವರಮಹಾಲಕ್ಷ್ಮಿ ದೇವಿಯ ಸಂಕೇತವಾಗಿದೆ. ಈ ಕಲಶವನ್ನು ಅಕ್ಕಿಯ ರಾಶಿ ಇರುವ ತಟ್ಟೆಯ ಮೇಲೆ ಇರಿಸಲಾಗುತ್ತದೆ. ಮೊದಲು ಗಣೇಶ ಪೂಜೆಯಿಂದ ಶುರು ಮಾಡಿ, ನಂತರ ಲಕ್ಷ್ಮಿ ದೇವಿಯ ಸ್ತುತಿಯಲ್ಲಿ ‘ಲಕ್ಷ್ಮೀ ಸಹಸ್ರನಾಮ’ ಮತ್ತಿತರೆ ಶ್ಲೋಕಗಳನ್ನು ಹೇಳುವರು. ಮನೆಯಲ್ಲಿ ವಿಶೇಷ ಸಿಹಿತಿಂಡಿಗಳನ್ನು ನೈವೇದ್ಯವಾಗಿ ಮಾಡಲಾಗುತ್ತದೆ. ಪೂಜೆಯ ಸಮಯದಲ್ಲಿ, ಮಹಿಳೆಯರು ತಮ್ಮ ಕೈಗಳಿಗೆ ಹಳದಿ ದಾರವನ್ನು ಕಟ್ಟಿಕೊಳ್ಳುವರು. ಅಂತಿಮವಾಗಿ ಕಲಶಕ್ಕೆ ಆರತಿ ಮಾಡಿ ಸಂಪೂರ್ಣ ಭಕ್ತಿಯಿಂದ ಪೂಜಿಸಲಾಗುತ್ತದೆ. ಶ್ರೀ ವರಮಹಾಲಕ್ಷ್ಮಿ ಪೂಜೆಯ ಮಾರನೇ ದಿನ ಸ್ನಾನ ಮಾಡಿ ನಂತರ ಪೂಜೆಗೆ ಬಳಸಿದ ಕಲಶವನ್ನು ವಿಸರ್ಜನೆ ಮಾಡುತ್ತಾರೆ. ಕಲಶದ ಒಳಗಿನ ನೀರನ್ನು ಮನೆಯೆಲ್ಲ ಚಿಮುಕಿಸಲಾಗುತ್ತದೆ ಮತ್ತು ಅಕ್ಕಿಯನ್ನು ಮನೆಯಲ್ಲಿ ಅಡುಗೆಗೆ ಬಳಸುವ ಅಕ್ಕಿಯೊಂದಿಗೆ ಬೆರೆಸಲಾಗುತ್ತದೆ.
ಶ್ರೀ ಲಕ್ಷ್ಮಿಯು ವೈಕುಂಠದ ಅಧಿಪತಿ ಶ್ರೀವಿಷ್ಣುವಿನ (ನಾರಾಯಣ) ಪತ್ನಿ, ಲಕ್ಷ್ಮಿಯನ್ನು ಹಣ, ಐಶ್ವರ್ಯ, ಸಿರಿ, ಸಂಪತ್ತುಗಳ ಅಧಿದೇವತೆಯೆಂದು ಪೂಜಿಸಲಾಗುತ್ತದೆ. ಲಕ್ಷ್ಮಿಯನ್ನು ಮಹಾಲಕ್ಷ್ಮಿ ಎಂದೂ ಕರೆಯಲಾಗುತ್ತದೆ. ದೇವನೊಬ್ಬ ನಾಮಹಲವು ಎಂಬಂತೆ ಶ್ರೀಲಕ್ಷ್ಮಿಯು ಆದಿಲಕ್ಷ್ಮಿಯಾಗಿ ಬ್ರಹ್ಮಾಂಡದ ರಕ್ಷಣೆ ಮಾಡುತ್ತಾಳೆ, ವಿಜಯಲಕ್ಷ್ಮಿಯಾಗಿ ಬಾಳಿನಲ್ಲಿ ವಿಜಯವನ್ನು ನೀಡುತ್ತಾಳೆ, ವಿದ್ಯಾಲಕ್ಷ್ಮಿಯಾಗಿ ಸರ್ವರ ಬಾಳಿಗೆ ವಿದ್ಯೆ ಮತ್ತು ಜ್ಞಾನವನ್ನು ನೀಡುತ್ತಾಳೆ, ಗಜಲಕ್ಷ್ಮಿಯಾಗಿ ಶಕ್ತಿ ಮತ್ತು ಸಹನೆಯನ್ನು ನೀಡುತ್ತಾಳೆ, ಸಂತಾನ ಲಕ್ಷ್ಮಿಯಾಗಿ ಸಂತಾನಭಾಗ್ಯವನ್ನು ಕರುಣಿಸುತ್ತಾಳೆ, ಧಾನ್ಯ ಲಕ್ಷ್ಮಿಯಾಗಿ ಧಾನ್ಯವನ್ನು ನೀಡಿ ಹಸಿವನ್ನು ನೀಗಿಸುತ್ತಾಳೆ, ಧೈರ್ಯಲಕ್ಷ್ಮಿ ಧೈರ್ಯವನ್ನು ನೀಡುತ್ತಾಳೆ, ಧನಲಕ್ಷ್ಮಿಯಾಗಿ ಧನ, ಕನಕ, ಸಂಪತ್ತನ್ನು ಹೆಚ್ಚಿಸುತ್ತಾಳೆ ಎಂಬ ನಂಬಿಕೆ ಹಿರಿಯ ಅನುಭವಿಗಳಿಂದ ಹರಿದು ಬಂದಿದ್ದು ಇವು ಶ್ರೀ ಲಕ್ಷ್ಮಿಯ ವಿವಿಧ ರೂಪಗಳಾಗಿವೆ. ಪದ್ಮಾವತಿ, ಪದ್ಮಪ್ರಿಯೆ, ಪದ್ಮಮಾಲಾಧರಾ ದೇವಿ, ಪದ್ಮನಿ, ಪದ್ಮಹಸ್ತೆ, ಪದ್ಮಭೂಷಣೆ, ಪದ್ಮಮುಖಿ, ಪದ್ಮ ರಾಣಿ, ಭಾರ್ಗವಿ ಮುಂತಾದ ಹೆಸರುಗಳಿಂದ ಶ್ರೀ ಮಹಾಲಕ್ಷ್ಮಿಯನ್ನು ಕರೆಯುತ್ತಾರೆ. ಲಕ್ಷ್ಮೀದೇವಿಯು ಹೆಚ್ಚು ಹೆಚ್ಚು ವರಗಳನ್ನು ದಯಪಾಲಿಸುವುದರಿಂದ ವರಮಹಾಲಕ್ಷ್ಮಿ ಎಂದೂ ಕರೆಯಲಾಗುತ್ತದೆ. ಶ್ರಾವಣದಲ್ಲಿ ಬರುವಂತಹ ಶ್ರೀ ವರಮಹಾಲಕ್ಷ್ಮೀ ವ್ರತವು ಸುಮಂಗಲೆಯರಿಗೆ ಒಂದು ಮಹತ್ವದ ವ್ರತವಾಗಿದೆ. ಶ್ರೀವರಮಹಾಲಕ್ಷ್ಮಿ ಹಬ್ಬವನ್ನು ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಶ್ರೀವರಮಹಾಲಕ್ಷ್ಮಿ ದೇವಿಯನ್ನು ಶ್ರದ್ಧೆ, ನಿಷ್ಠೆ ಮತ್ತು ಭಕ್ತಿಯಿಂ
ದ ಪೂಜಿಸಿ ಧನ್ಯರಾಗೋಣ, ವಿಶ್ವದಲ್ಲಿ ಎದುರಾಗಿರುವ ಎಲ್ಲಾ ಸಂಕಷ್ಟ ಗಳನ್ನು ದೂರ ಮಾಡಿ, ಸುಖ ಶಾಂತಿ, ಸಂವೃದ್ಧಿಯು ಸಮುದಾಯದ, ರಾಷ್ಟ್ರದ ಪ್ರಗತಿಗಾಗಿ ಆಗಲೆಂದು ಪ್ರಾರ್ಥಿಸೋಣ. ಸಹಕಾರ, ಸಹಬಾಳ್ವೆಯನ್ನು ಹೊಂದೋಣ ಮತ್ತು ನಗುನಗುತಾ ಬಾಳೋಣ. ಸರ್ವೆ ಜನಾಃ ಸುಖಿನೋ ಭವಂತು.
ಕೆ.ಎನ್.ಚಿದಾನಂದ. ಸಾಹಿತಿ. ಹಾಸನ