ಮೈಸೂರು: ವಾಲ್ಮೀಕಿಯವರ ಪ್ರತಿಮೆ ವಿಚಾರವಾಗಿ ವಾಲ್ಮೀಕಿ ಜಯಂತಿಯಂದೇ ನಾಯಕ ಸಮುದಾಯ ನಾಯಕರು ಜಿಲ್ಲಾಧಿಕಾರಿಗಳೊಂದಿಗೆ ಜಟಾಪಟಿ ಪೈಪೋಟಿ ಪ್ರತಿಭಟನೆ ನಡೆಸಿದ ಘಟನೆ ಮೈಸೂರಲ್ಲಿ ನಡೆದಿದೆ.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಎದುರು ಆಗಮಿಸಿದ ನಾಯಕ ಸಮುದಾಯದ ಮುಖಂಡರು ಏಕಾಎಕಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು ಮಿನಿ ವಿಧಾನಸೌದದ ಎದುರು ವಾಲ್ಮೀಕಿ ಪ್ರತಿಮೆ ಸ್ಥಾಪನೆಗೆ ಹಲವು ವರ್ಷದಿಂದ ಒತ್ತಾಯಿಸಲಾಗುತ್ತಿದೆ. ಹೀಗಿದ್ದರೂ ಸರ್ಕಾರ ನಮ್ಮ ಭಾವನೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಈ ಹಿನ್ನೆಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಸಮುದಾಯದ ಪ್ರಮುಖರು ಮಿನಿ ವಿಧಾನಸೌಧದ ಮುಂಭಾಗ ಪ್ರತಿಮೆ ಸ್ಥಾಪನೆ ತಯಾರಿ ಮಾಡಿದ್ದರು. ರಾತ್ರಿ ಪ್ರತಿಮೆ ಸ್ಥಾಪನೆಗೆ ಮುಂದಾದ ವೇಳೆ ನಗರಪಾಲಿಕೆ ಹಾಗೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ತಡೆವೊಡ್ಡಿ ಪ್ರತಿಮೆ ವಶಕ್ಕೆ ಪಡೆದಿರುವುದು ಖಂಡನೀಯ ಈ ಕೂಡಲೇ ಪ್ರತಿಮೆ ಸ್ಥಾಪಿಸಬೇಕೆಂದು ಆಗ್ರಹಿಸಿದರು.
ಈ ಹಿನ್ನೆಲೆಯಲ್ಲಿ ಪ್ರತಿಮೆ ಸ್ಥಾಪನೆಗೆ ಆಗ್ರಹಿಸಿ ಜಯಂತಿ ಮೆರವಣಿಗೆ ಸ್ತಬ್ಧಚಿತ್ರದ ಮುಂಭಾಗವೇ ಮುಖಂಡರು ಧರಣಿ ಕುಳಿತರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪ್ರತಿಭಟನಾಕಾರರಿಂದ ಮಾಹಿತಿ ಪಡೆದರು. ಕಾನೂನು ಚೌಕಟ್ಟಿನಲ್ಲಿ ಪ್ರತಿಮೆ ರಕ್ಷಣೆಯ ಜವಾಬ್ದಾರಿ ಹೊತ್ತು ಸಂಘಟನೆ ಮೂಲಕ ಕೌನ್ಸಿಲ್ ಅನುಮತಿ ಪಡೆದು ಪ್ರತಿಮೆ ಸ್ಥಾಪನೆ ಸಂಬಂಧ ಮನವಿ ಮಾಡಿ. ಅನಂತರ ಮುಂದಿನ ಜಯಂತಿ ಒಳಗೆ ಪ್ರತಿಮೆ ಸ್ಥಾಪನೆ ಕುರಿತು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಆದರೆ, ಪ್ರತಿಭಟನಾಕಾರರು ಇಂದೇ ಪ್ರತಿಮೆ ಸ್ಥಾಪನೆ ಆಗಬೇಕು. ಅದಕ್ಕೆ ನೀವೇ ಪೂಜೆ ಸಲ್ಲಿಸಿ, ಪ್ರತಿಮೆ ಸಂಪೂರ್ಣ ಜವಾಬ್ದಾರಿ ಸಮುದಾಯಕ್ಕೆ ಬಿಡಿ. ವರ್ಷದಲ್ಲಿ ಎರಡು ಮೂರು ಪ್ರತಿಮೆಗಳು ಹೀಗೆ ನಗರದಲ್ಲಿ ತಲೆ ಎತ್ತುತ್ತಿದ್ದು, ಸಮುದಾಯದ ವಾಲ್ಮೀಕಿ ಪ್ರತಿಮೆಗೆ ಮಾತ್ರ ಏಕೆ ಈ ನ್ಯಾಯಾಲಯದ ನಿಯಮವೆಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಗಳು ಹಿಂದಿನ ಅವಧಿಯ ಪ್ರತಿಮೆಗಳ ಮಾಹಿತಿ ನನಗಿಲ್ಲ. ನನ್ನ ಅವಧಿಯಲ್ಲಿ ಅಂತಹ ಕಾನೂನು ಬಾಹಿರ ಪ್ರತಿಮೆ ತಲೆ ಎತ್ತದೆ ಕ್ರಮವಹಿಸುತ್ತೇವೆ. ಸದ್ಯ ಜಯಂತಿ ಯಶಸ್ವಿಗೊಳಿಸಿ ಈ ಬಗ್ಗೆ ಸಭೆ ನಡೆಸಿ ಕ್ರಮವಹಿಸುವ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಹೋರಾಟ ಕೈ ಬಿಟ್ಟು ಜಯಂತಿಯ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯ ಲೋಕೇಶ್ ಪಿಯಾ, ನಾಯಕರ ಯುವಸೇನೆ ಅಧ್ಯಕ್ಷ ದ್ಯಾವಪ್ಪನಾಯಕ, ದೇವರಾಜ ಟಿ.ಕಾಟೂರು ಸೇರಿ ಇನ್ನಿತರ ಸಮುದಾಯದ ನಾಯಕರು ಪ್ರತಿಭಟನೆಯಲ್ಲಿದ್ದರು.