ಮೈಸೂರು: ವಾಲ್ಮೀಕಿ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಸಿಎಂ ಕುರ್ಚಿ ಅಲ್ಲಾಡುತ್ತೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ವಾಲ್ಮೀಕಿ ಹಗರಣದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೆ.17ಕ್ಕೆ ವಾಲ್ಮೀಕಿ ಹಗರಣ ವಿಚಾರದಲ್ಲಿ ಪಾದಯಾತ್ರೆ ಮಾಡಲು ನಿರ್ಧಾರವಾಗಿದೆ. ಬೆಳಗಾವಿಯಲ್ಲಿ ನಡೆದದ್ದು ಬಿಜೆಪಿ ಅತೃಪ್ತರ ಬಂಡಾಯಗಾರರ ಸಭೆಯಲ್ಲ. ಬಿಜೆಪಿಯ ಜನಪ್ರಿಯ ನೇತಾರ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಡೆದ ಸಭೆ ಎಂದರು.
ಈ ಪಾದಯಾತ್ರೆ ಯಾರ ಮೇಲಾಟದ ಕಾರ್ಯಕ್ರಮವಲ್ಲ. ಯಾರ ನಾಯಕತ್ವ ಪ್ರದರ್ಶನವೂ ಅಲ್ಲ. ಪಾದಯಾತ್ರೆಗೆ ಹೈಕಮಾಂಡ್ ಅನುಮತಿ ಕೊಡುತ್ತದೆ. ಅನುಮತಿಯೊಂದಿಗೆ ಪಾದಯಾತ್ರೆ ಮಾಡುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷರ ಹಾದಿಯಾಗಿ ಎಲ್ಲರನ್ನು ಪಾದಯಾತ್ರೆಗೆ ಕರೆಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿಕೆ ನೀಡಿದ್ದಾರೆ.
ಗೌರಿ ಲಂಕೇಶ್ ಆರೋಪಿಯ ಭೇಟಿಯಾದ ವಿಚಾರದ ಕುರಿತು ದಿನೇಶ್ ಗುಂಡೂರಾವ್ ಟ್ವೀಟ್ಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ರಾಜಕಾರಣಿಗಳ ಮಕ್ಕಳಿಗೆ ಅಪ್ಪಂದಿರ ಪ್ರತಿಭೆ ವರ್ಗಾವಣೆ ಆಗುವುದಿಲ್ಲ. ದಿನೇಶ್ ಗುಂಡೂರಾವ್ ವಿಚಾರದಲ್ಲೂ ಅದೇ ಆಗಿದೆ. ಪ್ರಕರಣದ ಆರೋಪಿಯನ್ನು ಮಾತಾಡಿಸುವುದೇ ತಪ್ಪಾ ಎಂದು ಪ್ರಶ್ನಿಸಿದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣದ ವಿಚಾರದಲ್ಲಿ ಸೋನಿಯಾ ಗಾಂದಿ, ರಾಹುಲ್ ಗಾಂಧಿಇಬ್ಬರು ಆರೋಪಿಗಳು. ಕಾಂಗ್ರೆಸ್ ನಾಯಕರು ಯಾಕೆ ಹೋಗಿ ಅವರ ಕಾಲಿಗೆ ಬೀಳುತ್ತಾರೆ ಅಧಿನಾಯಕ, ಅಧಿನಾಯಕಿ ಅಂತಾ ಕರೆಯುವ ಸೋನಿಯಾ, ರಾಹುಲ್ ಆರೋಪಿ ಸ್ಥಾನದಲ್ಲಿ ಇಲ್ವಾ ದಿನೇಶ್ ಗುಂಡೂರಾವ್ ತಿಳಿಗೇಡಿ ತನದಲ್ಲಿ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ ಎಂದು ಕಿಡಿಕಾರಿದರು.
ವಾಲ್ಮೀಕಿ ಹಗರಣದಲ್ಲಿ ಸಿಎಂ ಕುರ್ಚಿ ಅಲ್ಲಾಡುತ್ತೆ: ಪ್ರತಾಪ್ ಸಿಂಹ
