ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರನ್ನು ಮುಲಾಜಿಲ್ಲದೆ ತಡೆದು ಸ್ಥಳದಲ್ಲೇ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ.
ಸಂಚಾರ ಪೀಕ್ ಅವರ್ಗೂ ಮೊದಲೇ ಸಂಚಾರ ಪೊಲೀಸ್ ಸಿಬ್ಬಂದಿ ರಸ್ತೆ ಮೇಲಿದ್ದು ತಮ್ಮ ವ್ಯಾಪ್ತಿಯಲ್ಲಿಗಸ್ತು ನಡೆಸಬೇಕು. ಇದರಿಂದ ಸಂಚಾರ ಪೊಲೀಸರಿಗೆ ತಮ್ಮ ವ್ಯಾಪ್ತಿಯಲ್ಲಿಆ ಕ್ಷಣದ ಸಂಚಾರ ಸಮಸ್ಯೆಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಕಣ್ಣಿಗೆ ಗೋಚರಿಸುವ ಸಂಚಾರ ನಿಯಮ ಉಲ್ಲಂಘಿಘಿಸುವ ವಾಹನಗಳ ಹೊರತುಪಡಿಸಿ ಬೇರೆ ವಾಹನ ಸವಾರರನ್ನು ರಸ್ತೆಯಲ್ಲಿ ತಡೆಯಬಾರದು. ಸಂಚಾರ ಪೊಲೀಸರು ಸಾಧ್ಯವಾದಷ್ಟು ಎಲ್ಲ ವೇಳೆಯಲ್ಲೂ ಬಾಡಿ ವೋರ್ನ್ ಕ್ಯಾಮೆರಾ ಧರಿಸಿರಬೇಕು ಎಂದು ಸೂಚನೆ ನೀಡಲಾಗಿದೆ.
ನೋ ಪಾರ್ಕಿಂಗ್ ವಾಹನ ಶೀಘ್ರ ತೆರವು ಮಾಡಿ
ವಾಹನ ನಿಲುಗಡೆ ನಿರ್ಬಂಧಿತ ಸ್ಥಳದಲ್ಲಿ ನಿಲುಗಡೆ ಮಾಡಿದ ವಾಹನಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅಂತಹ ಸಂದರ್ಭದಲ್ಲಿ ವಾಹನಗಳನ್ನು ಕೂಡಲೇ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಎಎಸ್ಐ ಹಾಗೂ ಮೇಲ್ಪಟ್ಟ ಅಧಿಕಾರಿಗಳಿಗೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಅಧಿಕಾರ ನೀಡುವ ಕುರಿತು, ತಮ್ಮ ವ್ಯಾಪ್ತಿಯ ವಿವೇಚನೆಯನ್ವಯ ಬಳಸಬಹುದಾದ ಅಧಿಕಾರವಿದೆ ಎಂದು ತಿಳಿಸಲಾಗಿದೆ.
ಈ ಅಧಿಕಾರ ಅಂಕಿ-ಅಂಶಗಳನ್ನು ಸೃಷ್ಟಿಸುವ ಅಥವಾ ಜನಸಾಮಾನ್ಯರಿಗೆ ಉಲ್ಲಂಘಿಘಿಸಿರುವ ಎಲ್ಲಾ ಸಂಚಾರ ನಿಯಮ ಉಲ್ಲಂಘನೆಗಳನ್ನು ದಂಡ ಪಾವತಿಸಿ ಮುಕ್ತಾಯ ಮಾಡಿಕೊಳ್ಳಬೇಕೆಂದು ಒತ್ತಾಯಿಸುವ ಸಾಧನವನ್ನಾಗಿ ಬಳಸಿಕೊಳ್ಳಕೂಡದು. ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಗೆ ಇರುವ ಕಾನೂನು ಪ್ರಕ್ರಿಯೆ ಸಾಧ್ಯತೆಗಳನ್ನು ಅವರಿಗೆ ಆಯ್ಕೆ ಮಾಡಲು ಅವಕಾಶ ನೀಡಬೇಕೇ ಹೊರತು ದಂಡ ಪಾವತಿ ಮೂಲಕ ಮುಕ್ತಾಯಗೊಳಿಸುವಂತೆ ಒತ್ತಾಯ ಮಾಡಬಾರದು ಎಂದು ತಿಳಿಸಲಾಗಿದೆ.
ಪಾರದರ್ಶಕತೆ ಇರಲಿ
ಸಕ್ಷ್ಯಾಧಾರ ಸಹಿತ ಇರುವ ಸಂಚಾರ ನಿಯಮ ಜಾರಿ ಪ್ರಕ್ರಿಯೆ ಅತ್ಯಂತ ಹೆಚ್ಚು ಸಾಮರ್ಥ್ಯವುಳ್ಳದ್ದು ಹಾಗೂ ದೋಷರಹಿತವಾಗಿದೆ ಎಂಬುದನ್ನು ಎಲ್ಲಾ ಪೊಲೀಸ್ ಅಧಿಕಾರಿಗಳು ಮನಗಾಣಬೇಕು. ಅಲ್ಲದೆ, ಜನಸಾಮಾನ್ಯರು ಈ ಪಾರದರ್ಶಕ ವ್ಯವಸ್ಥೆಯ ಜಾರಿ ಪದ್ಧತಿಯನ್ನು ಒಪ್ಪಿಕೊಂಡಿದ್ದು, ಉಲ್ಲಂಘನೆ ಸ್ಪಷ್ಟವಾಗಿ ಗೋಚರವಾದಲ್ಲಿ ಮಾತ್ರ ಕಾನೂನು ಪ್ರಕ್ರಿಯೆ ಚಾಲನೆಗೊಳ್ಳುವ ದೋಷರಹಿತ ವ್ಯವಸ್ಥೆಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದ್ದಾರೆ.
ದಂಡಕ್ಕೆ ಸರಿಯಾದ ರಶೀದಿ ನೀಡಬೇಕು
ಸಂಚಾರ ಪೊಲೀಸ್ ಕರ್ತವ್ಯದ ಎಲ್ಲ ಸ್ತರಗಳಲ್ಲೂ ಹಾಗೂ ಸಂದರ್ಭಗಳಲ್ಲೂಅತ್ಯಂತ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಅತೀ ಅವಶ್ಯಕ. ಪ್ರತಿಯೊಂದು ವ್ಯವಹಾರವೂ ದೋಷರಹಿತವಾಗಿದ್ದು, ಉಲ್ಲಂಘನೆದಾರರಿಗೆ ಅವರು ಪಾವತಿಸಿದ ಮೊತ್ತಕ್ಕೆ ಸಮನಾದ ಅಧಿಕೃತ ಸ್ವೀಕೃತಿಯನ್ನು ತಕ್ಷಣವೇ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.
ಈ ಎಲ್ಲ ಸೂಚನೆಗಳನ್ನು ಎಲ್ಲಾ ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಅಧೀಕ್ಷಕರು ಕಟ್ಟುನಿಟ್ಟಾಗಿ ಜಾರಿ ಮಾಡುವ ಮೂಲಕ ರಾಜ್ಯದ ಎಲ್ಲಾ ನಗರಗಳಲ್ಲಿ ಹಾಗೂ ಪಟ್ಟಣಗಳಲ್ಲಿ ಸಂಚಾರ ಪರಿಸ್ಥಿತಿಯ ಸುಧಾರಣೆಗೆ ಸತತವಾಗಿ ಪರಿಶ್ರಮಿಸಿ, ಸಾರ್ವಜನಿಕ ವಲಯದಲ್ಲಿಇಲಾಖೆಯ ವರ್ಚಸ್ಸು ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ.