ಬೆಂಗಳೂರು:- ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಗೆ ಕೆಆರ್.ಇ.ಸಿ ನಲ್ಲಿ ಮೊದಲೇ ತೀರ್ಮಾನಿಸಿತ್ತು,ಆದು ಈಗ ಜಾರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಗೃಹ ಜ್ಯೋತಿ ಜಾರಿ ಮಾಡಲು ಮುಂದಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ದರ ಏರಿಕೆ ಮಾಡಿಲ್ಲ ವಿರೋಧ ಪಕ್ಷಗಳು ಸುಖಾಸುಮ್ಮನೆ ಮಾಡುವ ಆರೋಪದಲ್ಲಿ ಹುರುಳಿಲ್ಲ ಎಂದಿದ್ಧಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು ವಿದ್ಯುತ್ದರ ಏರಿಕೆ ಸಂಬಂಧ ಈ ಹಿಂದೆಯೇ ಆಗಿದ್ದ ತೀರ್ಮಾನವನ್ನು ಈಗ ಜಾರಿ ಮಾಡಲಾಗಿದೆ ಎಂದರು.
ಇಂದಿರಾ ಕ್ಯಾಂಟೀನ್ಗಳನ್ನು ಪುನರಾರಂಭಿಸಲು ಸಿದ್ಧತೆ ಮಾಡಲು ಸೂಚಿಸಲಾಗಿದೆ. ಕ್ಯಾಂಟೀನುಗಳ ನೌಕರರಿಗೆ ವೇತನ ದೊರೆತಿಲ್ಲವಾದರೆ ಅಥವಾ ಬಾಕಿ ಇದ್ದರೆ ಅದನ್ನು ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಗೋ ಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಮಾತನಾಡಿ, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. 1964 ಕಾಯ್ದೆಯಲ್ಲಿ 12 ವರ್ಷ ತುಂಬಿರುವ ಬರಡು ಹಾಗೂ ವ್ಯವಸಾಯಕ್ಕೆ ಉಪಯೋಗವಿಲ್ಲದ ರಾಸುಗಳ ಬಗ್ಗೆ ಹೇಳಲಾಗಿದೆ. ಆಮೇಲೆ ತಿದ್ದುಪಡಿಯಾಗಿದೆ ಎಂದರು.
ರೈತರಿಗೆ ತೊಂದರೆಯಾಗದಂತೆ ಬೀಜ ಗೊಬ್ಬರಗಳ ಸರಬರಾಜು ಆಗಬೇಕೆಂದು ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳಿಗೆ ವೀಡಿಯೋ ಸಂವಾದದ ಮುಖಾಂತರ ತಿಳಿಸಲಾಗಿದೆ. ಪ್ರವಾಹ ಉಂಟಾದರೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಿದೆ ಎಂದರು.
ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಆಚರಣೆಯನ್ನು ಮಾಡಲಾಗಿತ್ತು. ಕಾಕತಾಳೀಯವೆಂಬಂತೆ ಮುಖ್ಯಮಂತ್ರಿಯಾಗಿ ಮೊದಲನೇ ಪ್ರವಾಸ ದಾವಣಗೆರೆ ಜಿಲ್ಲೆಗೆ ಹಮ್ಮಿಕೊಳ್ಳಲಾಗಿದೆ ಎಂದರು.