ಮೈಸೂರು: ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನು ಸರ್ವೋಚ್ಛ ನ್ಯಾಯಾಲಯದ ಆದೇಶದ ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲು ನಿರಾಕರಿಸಿದಂತೆಯೇ ವಿವೇಕಾನಂದ ವೃತ್ತದಲ್ಲಿ ವಿವೇಕಾನಂದರ ಪ್ರತಿಮೆಯನ್ನು ತೆರವುಗೊಳಿಸಿ ನೆಲಸಮ ಮಾಡಬೇಕೆಂದು ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಮನವಿ ಮಾಡಲಾಯಿತು.
ನಗರಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದ ತಂಡ ಮಹಾನಗರ ಪಾಲಿಕೆ ಆಯುಕ್ತರಿಗೆ ವಿವೇಕಾನಂದರ ಪ್ರತಿಮೆ ತೆರವಿಗೆ ಕೋರಿತು. ಮೈಸೂರಿನಲ್ಲಿ ಸುಮಾರು 4 ರಿಂದ 5 ಲಕ್ಷ ಜನರು ವಾಲ್ಮೀಕಿ ಮುದಾಯದವರಿದ್ದು, ಸಮುದಾಯದ ಮುಖಂಡರಿಂದ ಮೈಸೂರಿನ ಪ್ರತಿಷ್ಟಿತ ವಾಲ್ಮೀಕಿ ಉದ್ಯಾನವನದಲ್ಲಿ ಅ.28 ರ ಮಹರ್ಷಿ ವಾಲ್ಮೀಕಿ ಜಯಂತಿಯಂದು ಮಹರ್ಷಿ ವಾಲ್ಮೀಕಿಯವರ ಪ್ರತಿಮೆಯನ್ನು ಉದ್ಯಾನವನದಲ್ಲಿ ಸ್ಥಾಪಿಸಲಾಯಿತು.
ಇದರ ಸಂಬಂಧ ತಾವು ಮತ್ತು ಮಹಾಪೌರರು ಪ್ರತಿಮೆಯನ್ನು ಪ್ರತಿಷ್ಟಾಪಿಸಲು ಸುಪ್ರೀಂ ಕೋರ್ಟ್ ಆದೇಶದಂತೆ ಕಾನೂನಿನಲ್ಲಿ ಅವಕಾಶವಿಲ್ಲವೆಂಬ ಮಾಹಿತಿ ನೀಡಿ ರಾತ್ರೋ ರಾತ್ರಿ ಪ್ರತಿಮೆಯನ್ನು ತೆರವುಗೊಳಿಸಿ, ಸಮುದಾಯಕ್ಕೆ ನೀವು ಅವಮಾನಿಸದ್ದಿರಿ ಎಂದರು.
ವಾಲ್ಮೀಕಿ ಪ್ರತಿಮೆಗೆ ಇರುವ ಕಾನೂನು ತೊಡಕುಗಳು ಬೇರೆ ಪ್ರತಿಮೆಗಳಿಗೆ ಯಾಕಿಲ್ಲವೆಂಬುದು ನಮ್ಮ ಪ್ರಶ್ನೆಯಾಗಿರುತ್ತದೆ. ನಗರ ಪಾಲಿಕೆ ಆಯುಕ್ತ ತಾವು ಮತ್ತು ಮಹಾಪೌರರ ನೇತೃತ್ವದಲ್ಲಿ ವಿವೇಕಾನಂದ ವೃತ್ತದಲ್ಲಿ ಸುಸಜ್ಜಿತವಾಗಿದ್ದ ಪ್ರತಿಮೆಯನ್ನು ಕೆಡವಿ ಅದೇ ಸ್ಥಳದಲ್ಲಿ ಸುಮಾರು 4 ರಿಂದ 5 ಕೋಟಿ ವೆಚ್ಚದಲ್ಲಿ ನೂತನವಾಗಿ ವಿವೇಕಾನಂದರ ಪ್ರತಿಮೆಯ ಕಾಮಗಾರಿಯು ನಡೆಸುತ್ತಿದ್ದಿರಿ. ಈ ಕಾಮಗಾರಿಗೆ ಸುಪ್ರೀಂ ಕೋರ್ಟ್ನ ಕಾನೂನು ಅನ್ವಯಿಸುವುದಿಲ್ಲವೇ ? ಎಂದು ಮನವಿ ಮೂಲಕ ಪ್ರಶ್ನಿಸಿದ್ದಾರೆ. ಅಲ್ಲಿ ವಿವೇಕ ಪ್ರತಿಮೆ ನಿರ್ಮಿಸಿದರೆ ವಾಲ್ಮೀಕಿ ಪ್ರತಿಮೆಗೂ ಅನುಮತಿ ನೀಡಬೇಕು. ಇಲ್ಲದಿದ್ದರೆ ಸಮುದಾಯ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.