ಕನ್ನಡಿಗರಿಗೆ ಬಸವಣ್ಣ, ಕುವೆಂಪು ಆಶೀರ್ವಾದ ಸಾಕು: ಎಐಸಿಸಿ ಪ್ರಧಾನ ಕಾರ್ಯದರ್ಶಿ
ಮೈಸೂರು: ಜಿಲ್ಲೆಗೆ ಇದೇ ಮೊದಲ ಬಾರಿ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಚುನಾವಣಾ ರಣಕಹಳೆ ಮೊಳಗಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆಗೆ ತಿರುಗೇಟು ನೀಡಿದರು.
ತಿ.ನರಸೀಪುರ ತಾಲ್ಲೂಕಿನ ಹೆಳವರಹುಂಡಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಕೈ ಬೀಸುತ್ತ ಬಂದ ಅವರಿಗೆ ಜಯಘೋಷಗಳು ಮೊಳಗಿದವು.
ನಂತರ ಮಾತನಾಡಿ, ‘ಮತ ಹಾಕದಿದ್ದರೆ ನರೇಂದ್ರ ಮೋದಿ ಅವರ ಆಶೀರ್ವಾದ ಸಿಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಅಹಂಕಾರದ ಮಾತುಗಳನ್ನು ಆಡಿದ್ದಾರೆ. ಬಸವಣ್ಣ, ಕುವೆಂಪು ಅವರ ನಾಡಿದು. ಅವರ ಆಶೀರ್ವಾದವಿರುವಾಗ ಮೋದಿ ಅವರ ಆಶೀರ್ವಾದ ಬೇಕಿಲ್ಲ’ ಎಂದು ಗುಡುಗಿದರು.
‘ಹೆಲಿಕಾಪ್ಟರ್ ಬರುವಾಗ ಎಷ್ಟು ಸುಂದರ ಜಾಗಕ್ಕೆ ಬಂದಿದ್ದೇನೆ. ಕಪಿಲಾ, ಕಾವೇರಿ ನದಿಗಳ ಸಂಗಮ ಸ್ಥಳ. ದೇಗುಲಗಳ ಪವಿತ್ರವಾದ ಭೂಮಿಯಿದು. ಹಸಿರುಕ್ಕುವ ಸಮೃದ್ಧ ಕೃಷಿಭೂಮಿ ನಿರ್ಮಾಣ ಮಾಡಿದವರ ಮುಂದೆ ಮಾತನಾಡುವುದು ಹೆಮ್ಮೆ ಎನಿಸುತ್ತದೆ’ ಎಂದು ಹೇಳಿ ಎಲ್ಲರ ಚಪ್ಪಾಳೆ ಗಿಟ್ಟಿಸಿದರು.
‘ಜನರ ಸಂಕಷ್ಟಗಳಿಗೆ ಸ್ಪಂದಿಸುವ, ಜನರ ದನಿಯಾಗುವ ಸರ್ಕಾರವಿರಬೇಕು. ದೇಶದ ವಿಕಾಸ ಮಾಡುವುದು ಹಾಗೂ ಜನ ಸಂಸ್ಕೃತಿ ಕಾಪಾಡುವುದು ಸರ್ಕಾರದ ಧರ್ಮ. ಆದರೆ, ಅಪ್ರಾಮಾಣಿಕವಾದ ಸರ್ಕಾರ ಆಳುತ್ತಿದೆ. ಅದಕ್ಕೆ ಜನರ ಕಷ್ಟಗಳು ಬೇಕಿಲ್ಲ. ಲೂಟಿ ಹೊಡೆಯುವುದೇ ಅದರ ಗುರಿಯಾಗಿದೆ’ ಎಂದರು.
‘ಬಿಜೆಪಿ ಸರ್ಕಾರ ರಚನೆಯಾಗಿದ್ದೇ ಜನಾದೇಶದ ವಿರುದ್ಧವಾಗಿ. ಜನರನ್ನು ವಂಚಿಸಿ, ಶಾಸಕರಿಗೆ ಆಮಿಷವೊಡ್ಡಿ ಹಣ ಬಲದಿಂದ ರಚಿಸಿತು. ಪರಿಣಾಮ ಯಾವುದೇ ಕೆಲಸ ಮಾಡಲಿಲ್ಲ. ಕೇಂದ್ರ ಸರ್ಕಾರದಿಂದ ಬರುವ ಅನುದಾನವೂ ಕಡಿಮೆಯಾಯಿತು. ರಾಜ್ಯ ಸರ್ಕಾರವು ನಿರ್ಲಜ್ಜೆಯಿಂದ ಜನರ ಲೂಟಿ ಮಾಡಿತು. ಗುತ್ತಿಗೆದಾರರು, ಶಾಲಾ ಆಡಳಿತ ಮಂಡಳಿಯವರು ಮೋದಿ ಅವರಿಗೆ ಪತ್ರ ಬರೆದರೂ, ಭ್ರಷ್ಟಾಚಾರದ ವಿರುದ್ಧ ಪ್ರಧಾನಿ ಕ್ರಮವಹಿಸಲಿಲ್ಲ’ ಎಂದು ಕಿಡಿಕಾರಿದರು.
‘ಪಿಎಸ್ ಐ ನೇಮಕಾತಿಯಲ್ಲಿ ಹಗರಣ ನಡೆಯಿತು. ಬಿಜೆಪಿ ಶಾಸಕನ ಬಳಿ ರೂ.5 ಕೋಟಿ ಹಣ ಸಿಕ್ಕಿತ್ತು. ಅವರು ತಲೆ ಮರೆಸಿಕೊಂಡರು. ಈ ಸರ್ಕಾರ ಕೋವಿಡ್ ಹೆಸರಿನಲ್ಲೂ ಲೂಟಿ ಮಾಡಿತು. ಶಾಲಾ ಮಕ್ಕಳ ಮೊಟ್ಟೆಯನ್ನೂ ಬಿಡಲಿಲ್ಲ’ ಎಂದು ಟೀಕಿಸಿದರು.
‘ಬಿಜೆಪಿ ಸರ್ಕಾರವು ರೂ.1.5 ಕೋಟಿ ಹಣ ಲೂಟಿ ಮಾಡಿದೆ. ಆ ಹಣದಲ್ಲಿ ಎರಡೂವರೆ ಸಾವಿರ ಕಿ.ಮೀ ರಸ್ತೆ ನಿರ್ಮಿಸಬಹುದಿತ್ತು. 750 ಕಿ.ಮೀ ಮೆಟ್ರೊ ಮಾರ್ಗ ನಿರ್ಮಿಸಬಹುದಿತ್ತು. ಬಡವರಿಗೆ 30 ಲಕ್ಷ ಮನೆಗಳನ್ನು ಕಟ್ಟಬಹುದಿತ್ತು’ ಎಂದರು.
2.5 ಲಕ್ಷ ಉದ್ಯೋಗ: ‘ನಿಮ್ಮಲ್ಲಿ ಎಷ್ಟು ಮಂದಿಗೆ ಸರ್ಕಾರಿ ಉದ್ಯೋಗ ಸಿಕ್ಕಿದೆ’ ಎಂದು ಪ್ರಶ್ನಿಸಿದ ಅವರು, ‘ರಾಜ್ಯದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಷ್ಟೂ ಹುದ್ದೆ ಭರ್ತಿ ಮಾಡಲಾಗುವುದು. ಇದು ನಮ್ಮ ವಚನ’ ಎಂದು ಪ್ರಿಯಾಂಕಾ ಭರವಸೆ ನೀಡಿದರು.
‘ಮೀಸಲಾತಿ ಹೆಸರಿನಲ್ಲೂ ವಂಚನೆ ಮಾಡಿದ್ದಾರೆ. ಮೀಸಲಾತಿ ಹೆಚ್ಚಿಸಿದ್ದಷ್ಟೇ, ಸಂವಿಧಾನದ 9 ನೇ ಪರಿಚ್ಛೇದಕ್ಕೆ ಸೇರಿಸುವ ಧೈರ್ಯ ಮಾಡಲಿಲ್ಲ. ಬಿಜೆಪಿಗರು ಮೀಸಲಾತಿ ವಿರೋಧಿಗಳು. ಅಮೂಲ್ ಉತ್ಪನ್ನಗಳ ಮಾರಾಟಕ್ಕಾಗಿ ಹಾಲಿನ ಕೃತಕ ಅಭಾವ ಸೃಷ್ಟಿಸಿದ್ದಾರೆ. 90 ಲಕ್ಷ ಲೀ. ಹಾಲು ಉತ್ಪಾದನೆಯು 70 ಲಕ್ಷ ಲೀ. ಗೆ ಇಳಿಕೆಯಾಗಿದೆ. ಇದು ಸಂಚಲ್ಲವೇ?’ ಎಂದು ಪ್ರಶ್ನಿಸಿದರು.
‘ಕಾಂಗ್ರೆಸ್ ಸರ್ಕಾರದ ವೇಳೆ ಹಾಲು ಹೆಚ್ಚು ಉತ್ಪಾದನೆಯಾದಾಗ ಕ್ಷೀರ ಭಾಗ್ಯ ಯೋಜನೆಗೊಳಿಸಿ ಶಾಲಾ ಮಕ್ಕಳಿಗೆ ಉಚಿತ ಹಾಲು ನೀಡಿದೆವು. ಹಾಲು ಉತ್ಪಾದಕರಿಗೆ ರೂ.5 ಸಬ್ಸಿಡಿ ನೀಡಿದ್ದೆವು’ ಎಂದು ನೆನಪಿಸಿದರು.
‘ಅದಾನಿ ಅವರ ಉದ್ಯಮಗಳಿಗೆ ರೂ.16 ಲಕ್ಷ ಕೋಟಿ ಲಾಭ ಮಾಡಿಕೊಡಲು ಮೋದಿ ಸರ್ಕಾರಕ್ಕೆ ಆಗುತ್ತದೆ. ಆದರೆ, ರೈತರು ಬೆಳೆದ ಕಬ್ಬಿಗೆ ಬೆಂಬಲ ಬೆಲೆ ನೀಡಲು ಆಗುವುದಿಲ್ಲ’ ಎಂದು ಕಿಡಿಕಾರಿದರು.
‘ಮಧ್ಯಪ್ರದೇಶ, ಛತ್ತೀಸಗಢ, ರಾಜಸ್ಥಾನ ಕಾಂಗ್ರೆಸ್ ಸರ್ಕಾರಗಳು ರೈತರ ಸಾಲಮನ್ನಾ ಮಾಡಿವೆ. ಹಿಮಾಚಲ ಪ್ರದೇಶದಲ್ಲಿ ಒಪಿಎಸ್ ಜಾರಿಗೊಳಿಸಿದ್ದೇವೆ. ನಾವು ಗ್ಯಾರಂಟಿ ಕೊಡುತ್ತೇವೆ. 2.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿ ತೋರಿಸುತ್ತೇವೆ. ನಂದಿನಿ ಸಂಸ್ಥೆಯನ್ನು ಗಟ್ಟಿಗೊಳಿಸುತ್ತೇವೆ’ ಎಂದರು.
‘ಈ ಚುನಾವಣೆಯು ಮೋದಿ ಅವರ ಬಗ್ಗೆ ಅಲ್ಲ. ಇದು ಯಾವ ನಾಯಕರ ಬಗ್ಗೆಯೂ ಅಲ್ಲ. ಈ ಚುನಾವಣೆ ಕರ್ನಾಟಕದ ಬಗ್ಗೆ. ನಿಮ್ಮ ಅನುಭವದ ಮೇಲೆ ಯೋಚನೆ ಮಾಡಿ ಮತ ಚಲಾಯಿಸಿ, ಲೂಟಿಮಾಡುವ ಸರ್ಕಾರ ತೆಗೆದು ಹಾಕಿ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ’ ಎಂದು ಮನವಿ ಮಾಡಿದರು.
ತಿ.ನರಸೀಪುರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಎಚ್.ಸಿ.ಮಹದೇವಪ್ಪ, ‘ಪ್ರಜಾಪ್ರಭುತ್ವ, ಸಂವಿಧಾನದ ಅಳಿವು-ಉಳಿವಿನ ಚುನಾವಣೆ. ಭಾರತದ ಬಹುತ್ವವನ್ನು ಕಾಪಾಡುವ ತುರ್ತಿದೆ. ಬೆಲೆ ಏರಿಕೆಯಿಂದ ಬಡವರು ತತ್ತರಿಸಿದ್ದಾರೆ. ಬಿಜೆಪಿಗರು ಸುಳ್ಳುಗಳ ಮೂಲಕ ಮಂಕುಬೂದಿ ಎರಚಿದ್ದಾರೆ. 20 ವರ್ಷ ರಾಜ್ಯವನ್ನು ಹಿಂದಕ್ಕೆ ನೂಕಿದ್ದಾರೆ. ಎಲ್ಲೆಡೆ ಬಿಜೆಪಿ ವಿರುದ್ಧ ಆಕ್ರೋಶದ ಗಾಳಿ ಬೀಸಿದೆ’ ಎಂದರು.
‘ಅವೈಜ್ಞಾನಿಕ ಮೀಸಲಾತಿ ಜಾರಿಗೆ ಕೋರ್ಟ್ ಛೀಮಾರಿ ಹಾಕಿದೆ. ಶ್ರೀರಾಮನ ಹೆಸರಿನಲ್ಲಿ ಮಜ್ಜಿಗೆ ಕೊಡುವುದಕ್ಕೂ ಶೇ 5 ಜಿಎಸ್ ಟಿ ಹಾಕಿದ್ದಾರೆ. ಅನಿಲ ಅಡುಗೆ ಸಿಲಿಂಡರ್ ದರ ಸಾವಿರ ದಾಟಿದೆ. ಮೋದಿ ಅವರು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆಂದರು, 2 ಕೋಟಿ ಉದ್ಯೋಗ ಕೊಡುತ್ತೇವೆಂದರು. 10 ಲಕ್ಷ ಉದ್ಯೋಗವನ್ನು ಸೃಷ್ಟಿಸಲಿಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ಭಾಕ್ರಾನಂಗಲ್, ಹಿರಾಕುಡ್ ಅಣೆಕಟ್ಟು ಗಳನ್ನು ಕಟ್ಟಿ ಆಹಾರ ಸ್ವಾವಲಂಬನೆ ಸಾಧಿಸಿದವರು ನೆಹರೂ. ದನ- ಎಮ್ಮೆ ಮೇಯಿಸದ ಬಿಜೆಪಿಗರಿಗೆ ರೈತರ ಕಷ್ಟವೇನು ಗೊತ್ತಿದೆ. ರೈತ ವಿರೋಧಿ ಕಾನೂನುಗಳ ಮೂಲಕ ಕೃಷಿ ಬದುಕು ನಾಶ ಮಾಡುತ್ತಿದ್ದಾರೆ’ ಎಂದರು.
‘ವ್ಯಾಪಾರಸ್ಥರ ಪಕ್ಷದಿಂದ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಮಾತಿಗೆ ಇಲ್ಲಿ ಬೆಲೆ ಇಲ್ಲ. ಜಗದೀಶ್ ಶೆಟ್ಟರ್, ಲಕ್ಷ÷್ಮಣ್ ಸವದಿ ಅವರನ್ನೂ ವಂಚಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಸಂವಿಧಾನ, ಸಾಮಾಜಿಕ ನ್ಯಾಯ, ದೇಶದ ಬಹುತ್ವದ ಪರವಾಗಿದೆ’ ಎಂದು ಹೇಳಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ‘ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬಲು ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಬೇಕು. ಬಿಜೆಪಿಗೆ ಜನಾದೇಶ ಇಲ್ಲದಿದ್ದರೂ, ಅಧಿಕಾರವನ್ನು ಹಣದಿಂದ ಖರೀದಿ ಮಾಡಿದರು. ಜನರಿಗೆ ಇವರು ನೀಡಿದ ಕಾರ್ಯಕ್ರಮಗಳೇನಾದರೂ ಏನು? ಸಿದ್ದರಾಮಯ್ಯ ಅವರು ಬಡವರಿಗೆ ಅನ್ನಭಾಗ್ಯ ಘೋಷಣೆ ಮಾಡಿದರು. ಎಲ್ಲ ಸಮುದಾಯಗಳ ಅಭಿವೃದ್ಧಿ ಮಾಡಿದರು’ ಎಂದರು.
‘ಜಾತಿಗಳ ನಡುವೆ ಎತ್ತಿಕಟ್ಟಲಾಗುತ್ತಿದೆ. ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗಬೇಕಾಗಿದೆ. ಆದರೆ, ಸಮಾನತೆ ನೀಡಿರುವ ಸಂವಿಧಾನ ಬದಲಿಸಲು ಬಿಜೆಪಿ ಹೊರಟಿದೆ. ಕೋಮುಸೌಹಾರ್ದ ಎತ್ತಿಹಿಡಿಯುವ ಕಾಂಗ್ರೆಸ್ ಅನ್ನೇ ಬೆಂಬಲಿಸಬೇಕು’ ಎಂದು ಕೋರಿದರು.
ದರ್ಶನ್ ಧ್ರುವನಾರಾಯಣ ಜೊತೆ ಮಾತು: ವೇದಿಕೆಗೆ ಆಗಮಿಸಿದ ಪ್ರಿಯಾಂಕ ಗಾಂಧಿ ಅವರಿಗೆ ಶಾಸಕ ತನ್ವೀರ್ ಸೇಠ್ ಹಾಗೂ ಡಾ.ಎಚ್.ಸಿ.ಮಹದೇವಪ್ಪ ಅವರು ದರ್ಶನ್ ಧ್ರುವನಾರಾಯಣ ಅವರನ್ನು ಪರಿಚಯಿಸಿದರು. ಪ್ರಿಯಾಂಕಾ ಅವರು ದರ್ಶನ್ ಜೊತೆ ಕೆಲವು ಕ್ಷಣ ಮಾತನಾಡಿದರು.
ವರುಣ, ತಿ.ನರಸೀಪುರ, ಚಾಮುಂಡೇಶ್ವರಿ, ನಂಜನಗೂಡು, ಮಂಡ್ಯದ ಮಳವಳ್ಳಿ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಗಳ ಸಾರ್ವಜನಿಕರು, ಬೆಂಬಲಿಗರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ, ಚಾಮರಾಜ ಕ್ಷೇತ್ರದ ಕೆ.ಹರೀಶ್ ಗೌಡ, ನಂಜನಗೂಡು ಕ್ಷೇತ್ರದ ದರ್ಶನ್ ಧ್ರುವನಾರಾಯಣ, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಕಾಗಲವಾಡಿ ಶಿವಣ್ಣ, ಸುನಿಲ್ ಬೋಸ್, ಸುನಿತಾ ವೀರಪ್ಪಗೌಡ ಇದ್ದರು