ಬೆಂಗಳೂರು: ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ‘ಸ್ಮಾರ್ಟ್ ಕಾರ್ಡ್’ ಕಡ್ಡಾಯವಾಗಲಿದ್ದು, ಶೀಘ್ರ ಕಾರ್ಡ್ ವಿತರಣೆಗೆ ಹೊಸ ಪೋರ್ಟಲ್ ಕಾರ್ಯಾರಂಭ ಮಾಡಲಿದೆ ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಂಗಳವಾರ ಹೇಳಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿಗಳಲ್ಲಿ ಒಂದಾದ, ಸರ್ಕಾರಿ ಬಸ್??ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ `ಶಕ್ತಿ’ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆಂದೇ ಹೊಸದೊಂದು ಪೋರ್ಟಲ್ ಕಾರ್ಯಾರಂಭ ಮಾಡಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಂಗಳವಾರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, `ಶಕ್ತಿ ಸ್ಮಾರ್ಟ್ ಕಾರ್ಡ್’ಗಳಿಗೆ ಅರ್ಜಿ ಸಲ್ಲಿಸುವ ಪೋರ್ಟಲ್ ಶೀಘ್ರದಲ್ಲೇ ಆರಂಭವಾಗಲಿದೆ.
ಕರ್ನಾಟಕದಲ್ಲಿ ಪ್ರೀಮಿಯಂ ಅಲ್ಲದ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಯ ಲಾಭ ಪಡೆಯಲು ಸ್ಮಾರ್ಟ್ ಕಾರ್ಡ್ಗಳ ಅಗತ್ಯವಿದೆ. ಸೇವಾ ಸಿಂಧು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸ್ಮಾರ್ಟ್ ಕಾರ್ಡ್ಗಳನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.
ಶೀಘ್ರ ಹೊಸ ಪೋರ್ಟಲ್
ಹೊಸ ಪೋರ್ಟಲ್ ಶೀಘ್ರದಲ್ಲೇ ಆರಂಭವಾಗಲಿದೆ. ಯಾವುದೇ ಗುರುತಿನ ಚೀಟಿಯನ್ನು ಅಪ್ಲೋಡ್ ಮಾಡುವ ಮೂಲಕ ಮಹಿಳೆಯರು ಸ್ಮಾರ್ಟ್ ಕಾರ್ಡ್ ಪಡೆಯಬಹುದು. ಸದ್ಯಕ್ಕೆ, ಸರ್ಕಾರ ನೀಡಿದ ಯಾವುದೇ ಗುರುತಿನ ಚೀಟಿಯನ್ನು ತೋರಿಸಿ ಮಹಿಳೆಯರು ಮೂರು ತಿಂಗಳವರೆಗೆ ಉಚಿತವಾಗಿ ಪ್ರಯಾಣಿಸಬಹುದು. ಸರ್ಕಾರದ ಈ ಶಕ್ತಿ ಯೋಜನೆಯು ರಸ್ತೆ ಸಾರಿಗೆ ನಿಗಮಗಳಿಗೆ (ಆರ್ಟಿಸಿ) ಹೆಚ್ಚಿನ ಅಧಿಕಾರ ನೀಡಿದೆ. ಯೋಜನೆಯಿಂದ ನಿಗಮಗಳ ಆದಾಯ ಹೆಚ್ಚಿದೆ ಎಂದರು.
ಬಿಜೆಪಿ ಬಲ ಕುಗ್ಗಿಸಿದ ‘ಶಕ್ತಿ’
ಇದೇ ವೇಳೆ ಬಿಜೆಪಿ ವಿರುದ್ಧ ಟೀಕೆ ಮಾಡಿದ ಸಚಿವರು, ಶಕ್ತಿ ಯೋಜನೆಯಿಂದ ಸರ್ಕಾರ, ಪಾಲಿಕೆ ಹಾಗೂ ನಮ್ಮ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ. ಇದು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಶಕ್ತಿಹೀನಗೊಳಿಸಿದೆ. ಯಾಕೆಂದರೆ ಅವರು (ಬಿಜೆಪಿಯವರು) ಮಹಿಳೆಯರನ್ನು ಬೆಂಬಲಿಸುವುದಿಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.