ಮೈಸೂರು: ಲೋಕಸಭಾ ಚುನಾವಣೆ ಅವಧಿ ಹತ್ತಿರ ಬಂತೆಂದರೆ ಸಾಕು, ಒಂದಿಲ್ಲೊಂದು ರೀತಿಯ ಭದ್ರತಾ ವೈಫಲ್ಯಗಳು ಉಂಟಾಗಿರುವುದನ್ನು ಇತಿಹಾಸ ನಮಗೆ ತಿಳಿಸಿಕೊಡುತ್ತದೆ. ಇದಕ್ಕೆ ಕಾರಣವಾಗಿರುವ ಸಂಸದ ಪ್ರತಾಪಸಿಂಹ ವಿರುದ್ಧವೂ ತನಿಖೆ ಆಗಲಿ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಆಗ್ರಹಿಸಿದ್ದಾರೆ.
2001 ರಲ್ಲಿ ಎಲ್ ಕೆ ಅಡ್ವಾಣಿ ಅವರು ಗೃಹ ಸಚಿವರಾಗಿದ್ದಾಗ ಸಂಸತ್ ಮೇಲೆ ದಾಳಿ ನಡೆದಿತ್ತು, ಕಳೆದ ಬಾರಿಯ ಚುನಾವಣೆ ಸಂದರ್ಭದಲ್ಲಿ ಭದ್ರತಾ ವೈಫಲ್ಯದ ಪರಿಣಾಮ ಪುಲ್ವಾಮ ಗಡಿಯ ಒಳಗೆ ಬರೋಬ್ಬರಿ 300 ಕೆಜಿಯಷ್ಟು ಆರ್ ಡಿಎಕ್ಸ್ ಪ್ರವೇಶ ಪಡೆದು ಆದ ಸ್ಪೋಟದಿಂದ ನಮ್ಮ ಸೈನಿಕರ ಅಮೂಲ್ಯ ಜೀವವು ಹೋಗುವಂತಾಯಿತು. ಅಚ್ಚರಿ ಎಂದರೆ ಇಲ್ಲಿಯವರೆಗೂ ಕೂಡಾ ಪುಲ್ವಾಮ ಗಡಿಯಲ್ಲಿ ಆರ್ ಡಿಎಕ್ಸ್ ಹೇಗೆ ಬಂತು ಎಂಬುದರ ಬಗ್ಗೆ ಯಾವ ತನಿಖೆಯೂ ಆಗದೇ ಇರುವುದು. ಇದೀಗ ಮತ್ತೆ ಲೋಕಸಭೆಯೊಳಗೆ ಭದ್ರತಾ ವೈಫಲ್ಯದಿಂದಾಗಿ ಆತಂಕ ಸೃಷ್ಟಿ ಆಗಿದ್ದು ನಮ್ಮ ಮೈಸೂರಿನ ಸಂಸದರೇ ಆಗಂತುಕ ಆರೋಪಿಗೆ ಪಾಸ್ ನೀಡಿರುದು ಸ್ಪಷ್ಟವಾಗಿದೆ. ಒಂದು ವೇಳೆ ಅಲ್ಲಿ ಏನಾದರೂ ದೊಡ್ಡ ಅನಾಹುತ ಘಟಿಸಿದ್ದರೆ ಅದಕ್ಕೆ ಯಾರು ಜವಾಬ್ದಾರಿ? ಭದ್ರತಾ ದೃಷ್ಟಿಯಿಂದ ಸಂಸದ ಪ್ರತಾಪ್ ಅವರನ್ನು ತನಿಖೆಗೆ ಒಳಪಡಿಸಬೇಕು. ಇದರ ಹಿಂದಿನ ನೈಜ ಕಾರಣಗಳನ್ನು ಪತ್ತೆ ಹಚ್ಚಬೇಕೆಂದು ಈ ಮೂಲಕ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇನೆಂದಿದ್ದಾರೆ.