ಕೆ.ಆರ್.ಪೇಟೆ:- ತಾಲೂಕಿನ ಉದ್ದಗಲಕ್ಕೂ ಅಲ್ಲಲ್ಲಿ ಚಿರತೆ ಹಾವಳಿ ಕಾಣಿಸಿಕೊಂಡಿದ್ದು ರೈತರು ತಮ್ಮ ಸಾಕು ಪ್ರಾಣಿಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸೋಮುವಾರ ರಾತ್ರಿ ಪಟ್ಟಣದ ಬಸ್ ಡಿಪೋ ಪಕ್ಕದಲ್ಲಿರುವ ಶಿಕ್ಷಕಿ ರತ್ನ ಎನ್ನುವವರ ಮನೆಯ ಬಳಿ ಚಿರತೆ ಅಡ್ಡಾಡಿರುವುದು ಮನೆಯ ಸಿ.ಸಿ.ಟಿ.ವಿ ಯಲ್ಲಿ ಕಂಡುಬಂದಿದ್ದು ಪಟ್ಟಣದ ಜನರಲ್ಲಿ ಭೀತಿ ಆವರಿಸಿದೆ. ರಾತ್ರಿ ವೇಳೆ ಮನೆಯಿಂದ ಹೊರಬರುವಾಗ ಮತ್ತು ಸಂಚರಿಸುವಾಗ ಪಟ್ಟಣದ ಜನ ಜಾಗರೂಕತೆ ವಹಿಸುವಂತೆ ತಾಲೂಕು ಆಡಳಿತ ಎಚ್ಚರಿಸಿದೆ. ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಸೋಮುವಾರ ಸಂಜೆ 6.30 ರ ಸಮಯದಲ್ಲಿಯೇ ನಿಂಗೇಗೌಡರ ಮಗ ಬಸವರಾಜು ಎನ್ನುವವರ ಸಾಕುನಾಯಿ ಚಿರತೆಗೆ ಬಲಿಯಾಗಿದ್ದರೆ ಅದೇ ಗ್ರಾಮದ ಚನ್ನೇಗೌಡರ ಮಗ ರವೀಗೌಡ ಎನ್ನುವವರ ಹಸುವಿನ ಕರುವನ್ನು ಚಿರತೆ ತಿಂದು ಹಾಕಿದೆ. ಸೋಮುವಾರ ರಾತ್ರಿ ತೆರ್ನೇನಹಳ್ಳಿ ಗ್ರಾಮದ ನಂದೀಶ್ ಎನ್ನುವ ರೈತರ ಎರಡು ಮೇಕೆಗಳು ಚಿರತೆಗೆ ಬಲಿಯಾಗಿವೆ.
ತಾಲೂಕಿನ ಉದ್ದಗಲಕ್ಕೂ ಅಲ್ಲಲಲಿ ಪ್ರತಿನಿತ್ಯ ಚಿರತೆ ಹಾವಳಿಯ ಸುದ್ದಿಗಳು ಕೇಳಿಬರುತ್ತಿದ್ದು ರೈತ ಸಮುದಾಯ ತಮ್ಮ ಸಾಕು ಪ್ರಾಣಿಗಳನ್ನು ಚಿರತೆ ಬಾಯಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆ ರೈತರು ಹೊಲಗದ್ದೆಗಳಿಗೆ ನೀರು ಹಾಯಿಸಲು ಭಯಪಡುತ್ತಿದ್ದಾರೆ.
ಚಿರತೆ ಹಾವಳಿಯ ಬಗ್ಗೆ ಪ್ರತಿಕ್ರಿಯಿಸಿರುವ ತಾಲೂಕು ಅರಣ್ಯಾಧಿಕಾರಿ ಗಂಗಾಧರ್ ತಾಲೂಕಿನ ಕಸಬಾ, ಕಿಕ್ಕೇರಿ, ಬೂಕನಕೆರೆ ಮತ್ತು ಸಂತೇಬಾಚಹಳ್ಳಿ ವ್ಯಾಪ್ತಿಯ ಅರಣ್ಯ ಇಲಾಖೆಯ ನಾಲ್ಕು ಸೆಕ್ಟರ್ ಗಳಲ್ಲಿ ತಲಾ ಒಂದೊಂದು ಬೋನು ಇದೆ. ತಾಲೂಕಿನ ಉದ್ದಗಲ್ಲಕ್ಕೂ ಚಿರತೆ ಹಾವಳಿ ಕಂಡುಬಂದಿದ್ದು ಚಿರತೆಗಳನ್ನು ಸೆರೆ ಹಿಡಿಯಲು ನಮಗೆ ಬೋನುಗಳ ಸಮಸ್ಯೆಯಿದೆ. ಪ್ರತಿನಿತ್ಯ ಚಿರತೆ ಹಾವಳಿ ಸದ್ದು ಮಾಡುತ್ತಿದೆ. ನಾವು ಬೋನು ಇಟ್ಟರೆ ಮತ್ತೊಂದು ಸ್ಥಳದಲ್ಲಿ ಚಿರತೆ ದಾಳಿಯ ಸುದ್ದಿ ಬರುತ್ತದೆ.
ಒಂದೆಡೆಯಿಂದ ಮತ್ತೊಂದು ಕಡೆಗೆ ಬೋನು ಸಾಗಿಸಲು ಸಾಗಾಣಿಕೆ ವೆಚ್ಚದ ಸಮಸ್ಯೆ ತಲೆದೋರುತ್ತಿದೆ. ಜೊತೆಗೆ ಒಂದೆಡೆಯಿಟ್ಟಿರುವ ಬೋನನ್ನು ಚಿರತೆ ಸಿಗುವವರೆಗೂ ಮತ್ತೊಂದು ಕಡೆ ತೆಗೆದುಕೊಂಡು ಹೋಗಲು ರೈತರು ಪ್ರತಿರೋಧಿಸುತ್ತಿದ್ದಾರೆ.
ನಮಗೆ ಕನಿಷ್ಠ ನಾಲ್ಕು ಹೊಸ ಬೋನುಗಳ ಅಗತ್ಯವಿದೆ ಎನ್ನುತ್ತಾರೆ. ಕಳೆದ ನಾಲ್ಕು ವರ್ಷಗಳಿಂದಲೂ ನಾವು ಬೋನುಗಳಿಗೆ ಬೇಡಿಕೆಯಿಟ್ಟಿದ್ದರೂ ಅದರ ಪೂರೈಕೆಯಾಗಿಲ್ಲ. ಇರುವ ಇತಿಮಿತಿಯಲ್ಲಿಯೇ ಅರಣ್ಯ ಇಲಾಖೆ ಚಿರತೆ ಹಿಡಿಯುವ ಕಾರ್ಯಾಚರಣೆ ಮಾಡುತ್ತಿದೆ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಗಂಗಾಧರ್.
ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ
