ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕವಾಗಿ 12 ರೀಫಿಲ್ಗಳಿಗೆ ಪ್ರತಿ ಸಿಲಿಂಡರ್ಗೆ ರೂ 200 ಸಬ್ಸಿಡಿ ನೀಡಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
ಹೌದು.. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) ಫಲಾನುಭವಿಗಳಿಗೆ ಕೇಂದ್ರ ಸಚಿವ ಸಂಪುಟವು ಶುಕ್ರವಾರ 14.2 ಕೆಜಿ ಸಿಲಿಂಡರ್ಗೆ ವರ್ಷಕ್ಕೆ 12 ರೀಫಿಲ್ಗಳಿಗೆ ತಲಾ 200 ರೂ ಸಬ್ಸಿಡಿ ನೀಡಿಕೆಗೆ ಅನುಮೋದನೆ ನೀಡಿದೆ. ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಸಿಸಿಇಎ ಸಭೆ ನಡೆಯಿತು.
ಮಾರ್ಚ್ 1, 2023 ರವರೆಗೆ ಈ ಯೋಜನೆಯ 9.59 ಕೋಟಿ ಫಲಾನುಭವಿಗಳಿದ್ದಾರೆ. 2022-23ರ ಹಣಕಾಸು ವರ್ಷದಲ್ಲಿ ಒಟ್ಟು ವೆಚ್ಚ 6,100 ಕೋಟಿ ರೂ. ಮತ್ತು 2023-24ಕ್ಕೆ 7,680 ಕೋಟಿ ರೂ ವೆಚ್ಚವಾಗಿದೆ. ಸಹಾಯಧನವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.
ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಈಗಾಗಲೇ ಮೇ 22, 2022 ರಿಂದ ಜಾರಿಗೆ ಬರುವಂತೆ ಈ ಸಬ್ಸಿಡಿಯನ್ನು ಒದಗಿಸುತ್ತಿವೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ವಿವಿಧ ಭೌಗೋಳಿಕ-ರಾಜಕೀಯ ಕಾರಣಗಳಿಂದಾಗಿ ಎಲ್ಪಿಜಿಯ ಅಂತಾರಾಷ್ಟ್ರೀಯ ಬೆಲೆಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ ಮತ್ತು ಹೆಚ್ಚಿನ ಎಲ್ಪಿಜಿ ಬೆಲೆಗಳಿಂದ ಪಿಎಂಯುವೈ ಫಲಾನುಭವಿಗಳನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ. LPG ಯ ನಿರಂತರ ಬಳಕೆಗಾಗಿ ಉತ್ತೇಜಿಸಲು PMUY ಗ್ರಾಹಕರಿಗೆ ಉದ್ದೇಶಿತ ಬೆಂಬಲವಾಗಿದೆ. PMUY ಗ್ರಾಹಕರ ಸರಾಸರಿ LPG ಬಳಕೆಯು 2019-20 ರಲ್ಲಿ 3.01 ರೀಫಿಲ್ಗಳಿಂದ 2021-22 ರಲ್ಲಿ 3.68 ಕ್ಕೆ ಅಂದರೆ ಶೇ. 20 ರಷ್ಟು ಹೆಚ್ಚಾಗಿದೆ. ಎಲ್ಲಾ PMUY ಫಲಾನುಭವಿಗಳು ಈ ಉದ್ದೇಶಿತ ಸಬ್ಸಿಡಿಗೆ ಅರ್ಹರಾಗಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.