ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನವೇ ಚೆನ್ನೈ ಸೂಪರ ಕಿಂಗ್ಸ್ ತಂಡಕ್ಕೆ ಮತ್ತಷ್ಟು ಬಲ ಬಂದಿದೆ. ಪ್ರಮುಖ ಸ್ಪಿನ್ನರ್ ಮಹೀಶ್ ತೀಕ್ಷಣ ಮತ್ತು ಮಥೀಶ ಪತಿರಾನಾ ತಂಡವನ್ನು ಸೇರಿಕೊಂಡಿದ್ದಾರೆ. ದೀಪಕ್ ಚಹಾರ್ ಮತ್ತು ಬೆನ್ ಸ್ಟೋಕ್ಸ್ ಅನುಪಸ್ಥಿಯಲ್ಲಿ ತಂಡದ ಬೌಲಿಂಗ್ ದುರ್ಬಲವಾಗಿತ್ತು, ತೀಕ್ಷಣ ಆಗಮನ ತಂಡದ ಬೌಲಿಂಗ್ಗೆ ಮತ್ತಷ್ಟು ಶಕ್ತಿ ತಂದಿದೆ.
ನ್ಯೂಜಿಲೆಂಡ್ ವಿರುದ್ಧ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಯಲ್ಲಿ ಆಡಿದ ಕಾರಣ ಶ್ರೀಲಂಕಾದ ಇಬ್ಬರೂ ಬೌಲರ್ ಗಳು ಐಪಿಎಲ್ನಲ್ಲಿ ಆರಂಭದ ಮೂರು ಪಂದ್ಯಗಳನ್ನು ಕಳೆದುಕೊಂಡರು. ಏಪ್ರಿಲ್ 9ರಂದು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯ ಮುಕ್ತಾಯದ ಬಳಿಕ, ಇಬ್ಬರೂ ಆಟಗಾರರು ನೇರವಾಗಿ ಚೆನ್ನೈಗೆ ಬಂದಿಳಿದಿದ್ದಾರೆ. ಚಾಹರ್ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ ಮತ್ತು ಸ್ಟೋಕ್ಸ್ ಕಾಲ್ಬೆರಳು ಗಾಯದಿಂದ ಬಳಲುತ್ತಿದ್ದು, ತಂಡದ ಬೌಲಿಂಗ್ಗೆ ಹಿನ್ನಡೆಯಾಗಿತ್ತು.
ಪತಿರಾನ ಅವಕಾಶ ಪಡೆಯುವುದು ಕಷ್ಟವಾದರೂ ತೀಕ್ಷಣ ಮಾತ್ರ ಆಡುವ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ. ಏಪ್ರಿಲ್ 13ರಂದು ಬುಧವಾರ ಸಿಎಸ್ಕೆ ತಂಡ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಸೆಣೆಸಲಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುವುದರಿಂದ ಸ್ಪಿನ್ನರ್ ಗಳಿಗೆ ಹೆಚ್ಚಿನ ನೆರವು ಸಿಗಲಿದೆ. ಈ ಅಂಗಳದಲ್ಲಿ ಆಡಿದ ಕೊನೆಯ ಪಂದ್ಯದಲ್ಲಿ ಸಿಎಸ್ಕೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಿತ್ತು.
2022ರ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ತೀಕ್ಷಣ
ಕಳೆದ ಆವೃತ್ತಿಯಲ್ಲಿ ಮಹೀಶ್ ತೀಕ್ಷಣ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 9 ಪಂದ್ಯಗಳನ್ನು ಆಡಿದ್ದ ಅವರು 21.75 ಸರಾಸರಿಯಲ್ಲಿ 12 ವಿಕೆಟ್ ಪಡೆದುಕೊಂಡಿದ್ದರು. ಅವರ ಎಕಾನಮಿ ಕೂಡ 7.46 ಆಗಿತ್ತು. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕೂಡ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅದರಲ್ಲೂ ಚೆಪಾಕ್ ಅಂಗಳದಲ್ಲಿ ತೀಕ್ಷಣ ಮತ್ತಷ್ಟು ಮಾರಕವಾಗುವ ಸಾಧ್ಯತೆ ಇದೆ.
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಗೆಲುವು ಕಂಡಿದೆ. ಮೊದಲನೇ ಪಂದ್ಯವನ್ನು ಸೋತ ಬಳಿಕ, ನಂತರದ ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಜಯ ಸಾಧಿಸುವ ಮೂಲಕ 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
ಬುಧವಾರ ಬಲಿಷ್ಠ ರಾಜಸ್ಥಾನ ತಂಡದ ವಿರುದ್ಧ ಸೆಣೆಸಲಿದೆ. ರಾಜಸ್ಥಾನ ರಾಯಲ್ಸ್ ಕೂಡ 3 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದಿದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ಶಿಮ್ರಾನ್ ಹೆಟ್ಮೇರ್ ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಯುಜುವೇಂದ್ರ ಚಹಾಲ್, ಟ್ರೆಂಟ್ ಬೌಲ್ಟ್ ಉತ್ತಮ ಬೌಲಿಂಗ್ ಮಾಡುತ್ತಿದ್ದು, ಚೆಪಾಕ್ನಲ್ಲಿ ಚೆನ್ನೈ ತಂಡವನ್ನು ಸೋಲಿಸುವ ವಿಶ್ವಾಸದಲ್ಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ: ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ), ಶಿವಂ ದುಬೆ, ಡ್ವೈನ್ ಪ್ರಿಟೋರಿಯಸ್, ದೀಪಕ್ ಚಾಹರ್, ಮಿಚೆಲ್ ಸ್ಯಾಂಟ್ನರ್, ಸಿಸಂದಾ ಮಗಾಲ, ತುಷಾರ್ ದೇಶಪಾಂಡೆ, ಅಂಬಟಿ ರಾಯುಡು, ಆಕಾಶ್ ಸಿಂಗ್, ಶಕರ್ಆರ್ಎಸ್, ಸುಬ್ರನ್ಸ್ ಹಂಗರ್ಎಸ್. , ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ನಿಶಾಂತ್ ಸಿಂಧು, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಭಗತ್ ವರ್ಮಾ, ಮಹೀಶ್ ತೀಕ್ಷಣ, ಮಥೀಶ ಪತಿರಾನಾ.
ಸೂಪರ ಕಿಂಗ್ಸ್ ತಂಡ ಸೇರಿಕೊಂಡ ಮಾರಕ ಬೌಲರ್
