ಕಾಬೂಲ್ (ಅಫ್ಘಾನಿಸ್ತಾನ): ವಿಶ್ವ ಸಂಸ್ಥೆಯ ಆಹಾರ ಹಾಗೂ ಕೃಷಿ ಸಂಸ್ಥೆ ಮತ್ತು ವಿಶ್ವ ಆಹಾರ ಯೋಜನೆ ಸಂಘಟನೆಗಳು ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ದೇಶಗಳಿಗೆ ಸ್ಪಷ್ಟ ಎಚ್ಚರಿಕೆ ಸಂದೇಶ ರವಾನಿಸಿವೆ. ಎರಡೂ ದೇಶಗಳಲ್ಲಿ ಆಹಾರ ಪದಾರ್ಥಗಳ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ಎಚ್ಚರಿಸಿದೆ. ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ದೇಶಗಳಲ್ಲಿ ಈಗಾಗಲೇ ಆಹಾರ ಸಮಸ್ಯೆ ತಾಂಡವವಾಡುತ್ತಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ ಎಂದು ಎರಡೂ ಸಂಸ್ಥೆಗಳು ಹೇಳಿವೆ. ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನಗಳು ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ವಿಶ್ವಸಂಸ್ಥೆಯ ಎರಡು ಪ್ರಮುಖ ಸಂಘಟನೆಗಳು ಹೇಳಿರೋದಾಗಿ ಅಫ್ಘಾನಿಸ್ತಾನದ ಖಾಮಾ ಪ್ರೆಸ್ ವರದಿ ಮಾಡಿದೆ.
ವಿಶ್ವ ಸಂಸ್ಥೆಯ ಆಹಾರ ಭದ್ರತೆ ಕುರಿತಾದ ಎರಡೂ ಸಂಸ್ಥೆಗಳು ಜಂಟಿಯಾಗಿ ತಮ್ಮ ವರದಿ ಬಿಡುಗಡೆ ಮಾಡಿವೆ. ಜೂನ್ನಿಂದ ನವೆಂಬರ್ವರೆಗೆ ಆಹಾರ ಪದಾರ್ಥಗಳ ಕೊರತೆ ಎದುರಾಗಬಹುದು ಎಂದು ಹೇಳಿರೋದಾಗಿ ಖಾಮಾ ಪ್ರೆಸ್ಗೆ ಪತ್ರಕರ್ತರಾದ ನೋಮನ್ ಹುಸೇನ್ ತಿಳಿಸಿದ್ಧಾರೆ.
ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಮಾತ್ರವಲ್ಲ, ಕೇಂದ್ರ ಆಫ್ರಿಕಾ ದೇಶಗಳು, ಇಥಿಯೋಪಿಯಾ, ಕೀನ್ಯಾ, ಕಾಂಗೋ, ಸಿರಿಯಾ ದೇಶಗಳೂ ಕೂಡಾ ಆಹಾರ ಸಮಸ್ಯೆಯನ್ನು ಎದುರಿಸಲಿವೆ. ಈ ಪಟ್ಟಿಯಲ್ಲಿ ಮಯನ್ಮಾರ್ ದೇಶ ಕೂಡಾ ಸ್ಥಾನ ಪಡೆದಿದೆ.
ಈ ಎಲ್ಲಾ ದೇಶಗಳು ಆಹಾರ ಕೊರತೆಯ ಹಾಟ್ ಸ್ಪಾಟ್ ಆಗಿದ್ದು, ಈ ದೇಶಗಳಲ್ಲಿ ಜನಸಂಖ್ಯೆ ಕೂಡಾ ಜಾಸ್ತಿ ಇದೆ. ಈ ಭಾಗದ ಜನರು ಆಹಾರ ಸಮಸ್ಯೆ ಎದುರಿಸುವ ಜೊತೆಗೆ ಇಲ್ಲಿ ಮುಂದಿನ ಕೆಲವು ತಿಂಗಳುಗಳಲ್ಲಿ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.
ರಾಜಕೀಯವಾಗಿ ಅಸ್ಥಿರವಾಗಿರುವ ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟ ಕೂಡಾ ಇದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಕೂಡಾ ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡಲು ಹಿಂದೇಟು ಹಾಕುತ್ತಿದೆ. ಕಳೆದ ಹಲವು ತಿಂಗಳುಗಳಿಂದ ಪಾಕಿಸ್ತಾನಕ್ಕೆ ನೀಡಬೇಕಾದ ಆರ್ಥಿಕ ನೆರವು ನೆನೆಗುದಿಗೆ ಬಿದದಿದೆ. ಈ ನಡುವೆ, ಮುಂದಿನ ಮೂರು ವರ್ಷಗಳಲ್ಲಿ ಪಾಕಿಸ್ತಾನ ದೇಶವು 77.5 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಸಾಲವನ್ನು ತೀರಿಸಬೇಕಿದೆ. ಪಾಕಿಸ್ತಾನದ ಜಿಡಿಪಿ ಕೂಡಾ ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ಸಾಲ ತೀರಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗದ ಪರಿಸ್ಥಿತಿ ಇದೆ.