ಮೈಸೂರು: ನಗರ ಪ್ರವೇಶಿಸುವಾಗ ಸಿಗುವ ಪ್ರಮುಖ ವೃತ್ತಗಳಲ್ಲೊಂದಾದ ಹಾರ್ಡಿಂಜ್ (ಜಯ ಚಾಮರಾಜೇಂದ್ರ ಒಡೆಯರ್ ವೃತ್ತ) ವೃತ್ತದ ಸುತ್ತಲಿನ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿರುವುದರಿಂದ ವಾಹನ ಸವಾರರು ದಿನನಿತ್ಯ ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿದ್ದಾರೆ.
ಒಟ್ಟು ಆರು ಪ್ರಮುಖ ರಸ್ತೆಗಳು ಸಂಧಿಸುತ್ತವೆ. ಅರಮನೆ ಮತ್ತು ನಗರ ಬಸ್ ನಿಲ್ದಾಣಕ್ಕೆ ತೆರಳಲು ಆಲ್ಬರ್ಟ್ ವಿಕ್ಟರ್ ರಸ್ತೆ ಇದೆ. ಬೆಂಗಳೂರು ನೀಲಗಿರಿ ರಸ್ತೆ, ನೀಲಗಿರಿ ರಸ್ತೆ, ನಜರ್ಬಾದ್ ಕಡೆಗಿನ ಮಿರ್ಜಾ ರಸ್ತೆ ಇದೆ.
ಆರೂ ರಸ್ತೆಗಳಲ್ಲಿ ಸದಾ ಕಾಲ ವಾಹನಗಳ ಸಂಚಾರವಿರುತ್ತದೆ. ವೃತ್ತದ ಪ್ರತಿಮೆ ಸುತ್ತಲೂ ರಸ್ತೆಯ ಜಾಗದಲ್ಲೇ ಬ್ಯಾರಿಕೇಡ್ ಅಳವಡಿಸಿರುವುದರಿಂದ ವಾಹನಗಳು ಸರಾಗವಾಗಿ ಓಡಾಡಲು ಸಾಧ್ಯವಾಗದೆ ಜನಸಂದಣಿಯ ವೇಳೆ ಟ್ರಾಫಿಕ್ ಜಾಮ್ ಆಗುತ್ತಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ವೃತ್ತದ ಸುತ್ತಲೂ ವಿಶಾಲವಾದ ರಸ್ತೆ ಇದೆ. ಆದರೆ ಇಲ್ಲಿ ವಾಹನ ಸವಾರರು ವೇಗವಾಗಿ ಬಂದು, ಅಪಘಾತಗಳು ಹೆಚ್ಚುತ್ತವೆ ಎಂಬ ಕಾರಣದಿಂದ ವೇಗ ನಿಯಂತ್ರಣಕ್ಕಾಗಿ ರಸ್ತೆಯ ವಿಸ್ತೀರ್ಣ ಕಡಿಮೆ ಮಾಡಲು ಸುತ್ತಲೂ ಕೆಂಪು ಹಾಗೂ ಹಳದಿ ಬಣ್ಣದ ಬ್ಯಾರಿಕೇಡ್ ಅಳವಡಿಸಲಾಗಿದೆ. ಅಪಘಾತದ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಇದೀಗ ಟ್ರಾಫಿಕ್ ಸಮಸ್ಯೆ ಉದ್ಭವಿಸಿದೆ.