ಗುಂಡ್ಲುಪೇಟೆ:- ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ಮಾರ್ಗದ ಮಧ್ಯದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿವೆ.
ಕೆಎಸ್ಆರ್ಟಿಸಿ ಬಸ್ ಮೂಲಕ ಪ್ರವಾಸಿಗರು ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ರಸ್ತೆ ತಿರುವಿನಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ರಸ್ತೆಯ ತಡೆಗೋಡೆ ಪಕ್ಕದಲ್ಲಿ ಹೋಗುತ್ತಿರುವ ದೃಶ್ಯವನ್ನು ಪ್ರವಾಸಿಗರೊಬ್ಬರು ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ.ಇನ್ನು ಜೋಡಿ ಚಿರತೆಗಳನ್ನು ಕಂಡು ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಇದೀಗ ಈ ಚಿರತೆಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಜಿಲ್ಲೆಯ ಪ್ರವಾಸಿ ತಾಣಗಳಲ್ಲೊಂದಾದ ಬಿಳಿಗಿರಿರಂಗನ ಬೆಟ್ಟ ಬಿಳಿಗಿರಿರಂಗನಾಥಸ್ವಾಮಿಯ ಮಹಿಮೆಯಿಂದ ಖ್ಯಾತಿಪಡೆದಿರುವುದರಲ್ಲದೆ, ಸುಂದರ ನಿಸರ್ಗ ರಮಣೀಯತೆಯನ್ನು ಹೊಂದಿ ಗಮನಸೆಳೆಯುವುದರೊಂದಿಗೆ ಇತ್ತೀಚೆಗಿನ ದಿನಗಳಲ್ಲಿ ಇಲ್ಲಿ ಹುಲಿ, ಕರಡಿಗಳು ಕಾಣಿಸಿಕೊಳ್ಳುತ್ತಿದ್ದು ವನ್ಯಪ್ರಾಣಿ ಪ್ರಿಯರು ಇತ್ತ ಧಾವಿಸುವಂತೆ ಮಾಡಿದೆ.
ಬಿಳಿಗಿರಿರಂಗನಬೆಟ್ಟದ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ಸಫಾರಿ ವ್ಯಾಪ್ತಿಯಲ್ಲಿ ಆಗಾಗ್ಗೆ ಹುಲಿಗಳು ಕಾಣಿಸಿದರೂ ತಾಯಿ ಮತ್ತು ಮರಿಗಳು ಕಾಣಿಸಿಕೊಳ್ಳುವುದು ಅಪರೂಪವಾಗಿದೆ. ಆದರೆ ಇದೀಗ ಸಫಾರಿಗೆ ಹೋದವರಿಗೆ ತಾಯಿ ತನ್ನ ಎರಡು ಮರಿಗಳೊಂದಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿವೆ.
ತಾಯಿಯೊಂದಿಗೆ ಗಂಭೀರ ನಡಿಗೆಯಲ್ಲಿ ಬಂದ ಹುಲಿ ಮರಿಗಳೆರಡು ರಸ್ತೆಯಲ್ಲಿ ಅತ್ತ ಇತ್ತ ನೋಡುತ್ತಾ ಮಂಡಿಯೂರಿ ಕೂತಿವೆ. ಮತ್ತೆ ಸ್ವಲ್ಪ ಹೊತ್ತು ಮಲಗಿವೆ. ಅದೇ ವೇಳೆಗೆ ತಾಯಿ ಹುಲಿ ರಸ್ತೆಯಿಂದ ಎದ್ದು ಅರಣ್ಯದತ್ತ ತೆರಳಿದ್ದು ಅದನ್ನು ಮರಿಗಳೆರಡು ಹಿಂಬಾಲಿಸಿವೆ. ಮುದ್ದು ಮುದ್ದಾದ ಹುಲಿ ಮರಿಗಳು ನೋಡುಗರ ಗಮನಸೆಳೆದಿದೆ. ಇಂತಹ ದೃಶ್ಯಗಳು ಸಿಗುವುದು ಅಪರೂಪ ಆದರೆ ಸಫಾರಿಗೆ ತೆರಳಿದ ವೇಳೆ ಕಂಡು ಬಂದ ದೃಶ್ಯವನ್ನು ವನ್ಯಜೀವಿ ಛಾಯಾಗ್ರಾಹಕ ರವಿಶಂಕರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಬಿಳಿಗಿರಿರಂಗನಬೆಟ್ಟದ ಬಗ್ಗೆ ಹೇಳ ಬೇಕೆಂದರೆ ಈ ತಾಣವು ಪ್ರಾಣಿ, ಪಕ್ಷಿ ಮತ್ತು ಸಸ್ಯ ಸಂಕುಲ, ಬೆಟ್ಟಗುಡ್ಡಗಳಿಂದ ಆವೃತವಾದ ನಿಸರ್ಗ ಸುಂದರವನ್ನು ಹೊಂದಿರುವ ಅರಣ್ಯಪ್ರದೇಶವಾಗಿದೆ. ಇಲ್ಲಿ ಶ್ರೀಗಂಧ, ಹೊನ್ನೆ, ಮತ್ತಿ, ಬೂರುಗ, ಬೀಟೆ, ಬನ್ನಿ, ಮೊದಲಾದ ಅಮೂಲ್ಯ ಮರಗಳಲ್ಲದೆ ಐತಿಹಾಸಿಕ ದೊಡ್ಡ ಮತ್ತು ಚಿಕ್ಕ ಸಂಪಿಗೆ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಬಿಳಿಗಿರಿರಂಗನ ಬೆಟ್ಟ ವ್ಯಾಪ್ತಿಗೆ ಸೇರುವ ಬೇಡಗುಳಿ, ಹೊನ್ನಮೇಟಿ, ಅತ್ತಿಖಾನಿ ಮೊದಲಾದ ಅರಣ್ಯ ಪ್ರದೇಶಗಳು ಸೇರುತ್ತವೆ.
ಮೈಸೂರಿನಿಂದ ಸುಮಾರು ತೊಂಬತ್ತು ಕಿ.ಮೀ. ಹಾಗೂ ಚಾಮರಾಜನಗರ ಜಿಲ್ಲೆಯ ಯಳಂದೂರಿನಿಂದ ಸುಮಾರು 15ಕಿಮೀ ದೂರದಲ್ಲಿದ್ದು, ಸಮುದ್ರಮಟ್ಟದಿಂದ ಸುಮಾರು 1552ಮೀಟರ್ ಎತ್ತರದಲ್ಲಿರುವ ಬಿಳಿಗಿರಿರಂಗನ ಬೆಟ್ಟವನ್ನು ಬಿಳಿಗಿರಿ ಬೆಟ್ಟ, ಬಿಳಿಕಲ್ಲ ಬೆಟ್ಟ, ಶ್ವೇತಾದ್ರಿ ಎಂದು ಕೂಡ ಕರೆಯುತ್ತಾರೆ.
ಪವಿತ್ರ ಕ್ಷೇತ್ರ ಮಾತ್ರವಲ್ಲದೆ, ಪ್ರವಾಸಿಗರ ಸೆಳೆಯುವ ಸುಂದರ ಪ್ರವಾಸಿ ತಾಣವೂ ಗಮನಸೆಳೆಯುತ್ತಿರುವುದರಿಂದ ಇಲ್ಲಿಗೆ ವರ್ಷಪೂರ್ತಿ ಪ್ರವಾಸಿಗರು ಬರುತ್ತಿರುತ್ತಾರೆ. ಕೆಲವರು ಚಾರಣಿಗರಾಗಿ ಬಂದರೆ ಇನ್ನು ಕೆಲವರು ಭಕ್ತರಾಗಿ ಮತ್ತೆ ಕೆಲವರು ಇಲ್ಲಿರುವ ಪ್ರಾಣಿಗಳನ್ನು ನೋಡಲೆಂದು ಆಗಮಿಸುವುದನ್ನು ಕಾಣಬಹುದಾಗಿದೆ.
ಬಿಳಿಗಿರಿರಂಗನಬೆಟ್ಟವು ಸುಮಾರು 540 ಚದರ ಕಿ.ಮೀ. ವಿಸ್ತಾರವನ್ನು ಹೊಂದಿದ್ದು, ಹಚ್ಚ ಹಸಿರಿನಿಂದ ಕೂಡಿದೆ. ಇದು ವನ್ಯಧಾಮವಾಗಿದ್ದು, ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕೊಂಡಿ ಎಂದರೆ ತಪ್ಪಾಗುವುದಿಲ್ಲ. ಏಷ್ಯಾದ ಆನೆಗಳು, ಬಿಳಿಪಟ್ಟೆಗಳ ಹುಲಿಗಳ ವಾಸಕ್ಕೆ ಯೋಗ್ಯವಾಗಿರುವ ಈ ತಾಣದಲ್ಲಿ ಸುಮಾರು 700ಕ್ಕೂ ಹೆಚ್ಚು ವೈವಿಧ್ಯಮಯ ಸಸ್ಯ ಪ್ರಭೇದಗಳಿವೆ. ಇಷ್ಟು ಮಾತ್ರವಲ್ಲದೆ ಚಿರತೆ, ಜಿಂಕೆ, ಸೀಳುನಾಯಿ ಮುಂತಾದ ಪ್ರಾಣಿಗಳು 200ಕ್ಕೂ ಅಧಿಕ ಪಕ್ಷಿ ಸಂಕುಲಗಳು ಇಲ್ಲಿವೆ ಎಂದು ಹೇಳಲಾಗಿದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಎರಡು ಚಿರತೆಗಳ ಪ್ರತ್ಯಕ್ಷ
