ಪಿರಿಯಾಪಟ್ಟಣ: ಪರವಾನಗಿ ಪಡೆಯದೆ ಅನಧಿಕೃತವಾಗಿ ಬಿತ್ತನೆ ಬೀಜಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಾಸ್ತಾನಿನಲ್ಲಿರಿಸಿದ್ದ ಬಿತ್ತನೆ ಬೀಜವನ್ನು ವಶ ಪಡಿಸಿಕೊಂಡಿರುವ ಘಟನೆ ನಡೆದಿದೆ.
ತಾಲ್ಲೂಕಿನ ಹಾರನಹಳ್ಳಿ ಹೋಬಳಿಯ ಕೊಪ್ಪ ಗ್ರಾಮದ ಶ್ರೀ ನಂಜುಂಡೇಶ್ವರ ಫರ್ಟಿಲೈಜರ್ ಮಳಿಗೆಯ ಮಾಲೀಕ ಅಜಿತ್ ಬಿನ್ ಗುರುಸ್ವಾಮಿ ಎಂಬುವವರಿಗೆ ಸೇರಿದ ಮಳಿಗೆಯಲ್ಲಿ ಪರವಾನಗಿ ಪಡೆಯದೆ ಮೆಕ್ಕೆಜೋಳ ಹಾಗೂ ಭತ್ತದ ಬಿತ್ತನೆ ಬೀಜಗಳನ್ನು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಡಾ.ವೈ.ಪ್ರಸಾದ್ ರವರ ನೇತೃತ್ವದಲ್ಲಿ ಅನಿರೀಕ್ಷಿತ ದಾಳಿ ನಡೆಸಿ ಬೀಜಗಳ (ನಿಯಂತ್ರಣ) ಆದೇಶ 1983 ರ ಕ್ಲಾಸ್ 3 ನ್ನು ಉಲ್ಲಂಘನೆ ಮಾಡಿದ್ದ ಹಿನ್ನಲೆಯಲ್ಲಿ ಸದರಿ ಮಳಿಗೆಯಲ್ಲಿ ಶೇಖರಿಸಿಟ್ಟಿದ್ದ ಒಟ್ಟು 1398 ಕೆ.ಜಿ ಪ್ರಮಾಣದ ಬಿತ್ತನೆ ಬೀಜಗಳನ್ನು ಮಹಜರ್ ನಡೆಸಿ ಜಪ್ತಿ ಮಾಡಲಾಗಿದೆ. ಇದರ ಅಂದಾಜು ಮೌಲ್ಯ ಸುಮಾರು ರೂ 2.5 ಲಕ್ಷ ಆಗಿರುತ್ತದೆ. ಅಲ್ಲದೆ ಅಗತ್ಯ ವಸ್ತುಗಳ ಅಧಿನಿಯಮ 1955 ರ ಕಲಂ(6)ಎ, 6ಬಿ, 6ಸಿ, 6ಡಿ, ಮತ್ತು 6ಇ ನಂತೆ ಸೂಕ್ತ ಕಾನೂನು ಕ್ರಮ ಜರುಗಿಸಿಲು ಅನುಕೂಲವಾಗುವಂತೆ ಜಪ್ತಿ ಮಾಡಲಾದ ಬಿತ್ತನೆ ಬೀಜದ ದಾಸ್ತಾನಿನಿಂದ ನಿಯಾಮಾನುಸಾರ ಗುಣ ಮಟ್ಟದ ಪರೀಕ್ಷೆಗಾಗಿ ಮಾದರಿಗಳನ್ನು ಬೀಜ ಪರೀಕ್ಷಾ ಪ್ರಯೋಗಾಲಯ, ಹೆಬ್ಬಾಳ ಬೆಂಗಳೂರು ರವರಿಗೆ ಕಳುಹಿ ಸಲಾಗಿದೆ. ಜಪ್ತಿ ಮಾಡಲಾದ ಬಿತ್ತನೆ ಬೀಜದ ದಾಸ್ತಾನನ್ನು ಸಹಾಯಕ ಕೃಷಿ ನಿರ್ದೇಶಕರು, ಪಿರಿಯಾಪಟ್ಟಣ ಇವರ ವಶಕ್ಕೆ ಪಡೆದು ಗುಣಮಟ್ಟ ವಿಶ್ಲೇಷಣಾ ವರದಿ ಬರುವವರೆಗೂ ದಾಸ್ತಾನೀಕರಿಸ ಲಾಗಿದೆ ಹಾಗೂ ಮಳಿಗೆ ಮಾಲೀಕರ ಮೇಲೆ ಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿ ಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ವೈ.ಪ್ರಸಾದ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಹಿತೇಶ್ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.