ಬೆಂಗಳೂರು: ನಾಡಹಬ್ಬ ದಸರಾ ಮಹೋತ್ಸವವನ್ನ ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಆಚರಿಸಬೇಕು ಹಾಗೂ ದಸರಾ ಜನರ ಉತ್ಸವವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಸಂಬಂಧಿತ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಕ್ಟೋಬರ್ 15ರ ಬೆಳಗ್ಗೆ 10:15 ರಿಂದ 10:30ಕ್ಕೆ ಸಲ್ಲುವ ಮುಹೂರ್ತದಲ್ಲಿ ದಸರಾ ಮಹೋತ್ಸವ ಉದ್ಘಾಟನೆ ನೆರವೇರಿಲಿದೆ. ಪಂಜಿನ ಕವಾಯತು ವಿಜಯದಶಮಿ ದಿನದಂದು ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತ ದಸರಾ, ಯುವ ದಸರಾ ಎಲ್ಲವನ್ನೂ ವ್ಯವಸ್ಥಿತವಾಗಿ ಆಚರಿಸಲು ತೀರ್ಮಾನಿಸಲಾಯಿತು.
ಹತ್ತು ಹಲವು ವಿಶೇಷತೆ:
ಜಂಬೂ ಸವಾರಿ, ದೀಪಾಲಂಕಾರ, ಪಂಜಿನ ಕವಾಯತು ಬಹಳ ಮುಖ್ಯವಾಗಿ ಆಚರಿಸಲ್ಪಡುತ್ತದೆ. ಈ ಬಾರಿ ದೀಪಾಲಂಕಾರ ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿಯುವವರೆಗೂ ಹಾಗೂ ದಸರಾ ಮುಗಿದ ನಂತರ ಒಂದು ವಾರದವವರೆಗೆ ಇರಬೇಕು ಎಂದು ಸಿಎಂ ಸೂಚಿಸಿದರು.
5 ಗ್ಯಾರಂಟಿ ಬಿಂಬಿಸುವ ಸ್ತಬ್ಧಚಿತ್ರ:
ಸ್ತಬ್ಧಚಿತ್ರಗಳ ಆಯ್ಕೆ ಮಾಡುವ ಸಂದರ್ಭದಲ್ಲಿ ರಾಜ್ಯದ ಪರಂಪರೆ, ಜಿಲ್ಲಾ ವೈಶಿಷ್ಟ್ಯತೆ ಗಳ ಜೊತೆಗೆ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳನ್ನೂ ಬಿಂಬಿಸಿ ಜನರಿಗೆ ಸಂದೇಶ ನೀಡುವಂತಿರಬೇಕು ಎಂದು ಸೂಚಿಸಿದರು. ಇದನ್ನೂ ಓದಿ: ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಓಅಅ ಕೆಡೆಟ್ಗಳಿಗೆ ರಾಜ್ಯಪಾಲ ಅಭಿನಂದನೆ
ವಸ್ತು ಪ್ರದರ್ಶನ & ಸ್ಥಳೀಯ ಕಲಾವಿದರಿಗೆ ಪ್ರಾಶಸ್ತ್ಯ:
ದಸರಾ ಉದ್ಘಾಟನಾ ದಿನದಂದೇ ವಸ್ತು ಪ್ರದರ್ಶನವೂ ಉದ್ಘಾಟನೆಯಾಗಲಿದೆ. ವಸ್ತು ಪ್ರದರ್ಶನದಲ್ಲಿ ಸರ್ಕಾರಿ ಇಲಾಖೆಗಳು ಮಳಿಗೆಗಳನ್ನ ತೆರೆಯಬೇಕು. ಜೊತೆಗೆ ಎಲ್ಲ ಮಳಿಗೆಗಳೂ ಭರ್ತಿಯಾಗಿರಬೇಕೆಂದು. ಜೊತೆಗೆ ಎಲ್ಲ ಪ್ರಕಾರಗಳಲ್ಲಿ ರಾಜ್ಯದ ಉತ್ತಮ ಕಲಾವಿದರಿದ್ದಾರೆ. ಅವರಿಗೆ ಹೆಚ್ಚಿನ ಒತ್ತು ನೀಡಬೇಕು. ಕಾಲೇಜು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಯುವ ದಸರಾದಲ್ಲಿ ವೇದಿಕೆ ಕಲ್ಪಿಸಬೇಕು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಅಂತಲೂ ಸಿಎಂ ಹೇಳಿದರು.
ಪ್ರವಾಸೋದ್ಯಮಕ್ಕೆ ಒತ್ತು:
ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ ನಾಡಹಬ್ಬ ದಸರಾ ನೋಡಲು ಆಗಮಿಸುವ ಪ್ರವಾಸಿಗರಿಗೆ ಅಗತ್ಯ ಮೂಲಸೌಕಾರ್ಯಗಳನ್ನ ಒದಗಿಸಬೇಕು. ಯಾವುದೇ ತೊಂದರೆಗಳಾಗದಂತೆ ಕ್ರಮ ವಹಿಸಬೇಕೆಂದ ಸಿಎಂ, ದಸರಾ ಸಂದರ್ಭದಲ್ಲಿ ಏರ್ ಶೋ ಹಮ್ಮಿಕೊಳ್ಳಲು ಉದ್ದೇಶಿಸಿದ್ದು, ಕೇಂದ್ರ ರಕ್ಷಣಾ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ, ಶಿವರಾಜ ತಂಗಡಗಿ, ಹೆಚ್.ಕೆ ಪಾಟೀಲ್, ಭೈರತಿ ಸುರೇಶ್, ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಜಿ.ಟಿ ದೇವೇಗೌಡ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಮೊದಲಾದವರು ಉಪಸ್ಥಿತರಿದ್ದರು.