ವಿತರಣೆಯಾಗದ ಹೊಸ ಪಡಿತರ, ಅರ್ಜಿಯೂ ಅಪ್ಡೇಟ್ ಆಗದ ಸರ್ವರ್
ಮೈಸೂರು: ಮೈಸೂರಿನಿಂದಲೇ ಅನಭಾಗ್ಯಕ್ಕೆ ಜು.೧ರಿಂದ ಚಾಲನೆ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಆದರೆ, ಈಗಾಗಲೇ ಅರ್ಜಿ ಸಲ್ಲಿಸಿರುವ ಹಾಗೂ ಅರ್ಜಿ ಸಲ್ಲಿಸಲು ನಿತ್ಯ ಅಲೆದಾಡುತ್ತಿರುವ ಸಾವಿರಾರು ಮಂದಿ ಜಿಲ್ಲೆಯಲ್ಲೇ ಅನ್ನಭಾಗ್ಯದ ಯೋಜನೆಯಿಂದಲೇ ದೂರ ಉಳಿಯುವಂತಾಗಿದೆ.
ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರ ನೆಚ್ಚಿನ ಯೋಜನೆ ಎಂದರೆ ಅನ್ನಭಾಗ್ಯ ಯೋಜನೆಯಾಗಿದೆ. ರಾಜ್ಯದ ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಯೋಜನೆ ಜಾರಿಗೊಳಿಸುತ್ತಿರುವುದಾಗಿ ಅನೇಕ ಬಾರಿಯೂ ಹೇಳಿಕೊಂಡಿದ್ದಾರೆ. ಆದರೆ, ಜಿಲ್ಲೆಯಲ್ಲಿ ಅನೇಕರು ಅನ್ನಭಾಗ್ಯದಿಂದಲೇ ವಂಚಿತರಾಗಿದ್ದಾರೆ. ಇದಕ್ಕೆ ಚುನಾವಣಾ ಘೋಷಣೆ ಹಿನ್ನೆಲೆಯಲ್ಲಿ ಸ್ಥಗಿತವಾಗಿರುವ ನೂತನ ಪಡಿತರ ವಿತರಣೆ ಕಾರ್ಯ ಇಂದಿಗೂ ಮರುಚಾಲನೆಗೊಂಡಿಲ್ಲ. ಅಲ್ಲದೆ, ಹೊಸ ಪಡಿತರಕ್ಕೆ ಅರ್ಜಿ ಪ್ರಾರಂಭವಾಗಿದೆ ಎಂದು ಇಲಾಖಾಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಸರ್ವರ್ ಸಿಗದ ಹಿನ್ನೆಲೆಯಲ್ಲಿ ನೂತನ ಅರ್ಜಿ ಸಲ್ಲಿಕೆಗೂ ಅವಕಾಶ ಸಿಗುತ್ತಿಲ್ಲ ಎಂಬುದು ಫಲಾನುಭವಿಗಳ ಅಳಲು.
ಜಿಲ್ಲೆಯಲ್ಲಿ ಒಟ್ಟು ೬೬೦೮೭೫ ಆದ್ಯತಾ ಪಡಿತರ ಚೀಟಿಗಳಿದ್ದು, ೨೦೮೨೮೦೪ ಫಲಾನುಭವಿಗಳಿದ್ದಾರೆ. ೫೦೪೧೦ ಅಂತ್ಯೋದಯ ಪಡಿತರ ಚೀಟಿಗಳಿದ್ದು, ೨೧೭೧೫೨ ಅಂತ್ಯೋದಯ ಫಲಾನುಭವಿಗಳಿದ್ದಾರೆ. ೧೦೯೪೭೮ ಆದ್ಯತೇತರ(ಎಪಿಎಲ್) ಪಡಿತರ ಚೀಟಿಗಳಿದ್ದು, ೨೦೮೨೮೦೪ ಫಲಾನುಭವಿಗಳಿದ್ದಾರೆ. ಮಾತ್ರವಲ್ಲದೆ, ಜಿಲ್ಲೆಯಲ್ಲಿ 13,326 ಮಂದಿ ಹೊಸ ಪಡಿತರ ಚೀಟಿಗಾಗಿ ಅರ್ಜಿಸಲ್ಲಿಸಿದ್ದು, ಈ ಪೈಕಿ 711 ಮಂದಿ ತಮ್ಮ ಅರ್ಜಿಯನ್ನು ಹಿಂಪಡೆದಿದ್ದಾರೆ. ಇದರಲ್ಲಿ ಅಧಿಕಾರಿಗಳು ಅರ್ಜಿದಾರರ ಸ್ಥಳ ಪರಿಶೀಲನೆ ನಡೆಸಿ 7,178 ಹೊಸ ರೇಷನ್ ಕಾರ್ಡ್ಗಳಿಗೆ ಅನುಮೋದನೆ ನೀಡಿದ್ದು, ಬೇರೆ ಬೇರೆ ಕಾರಣಗಳಿಗಾಗಿ 5,437 ಅರ್ಜಿಗಳನ್ನು ತಿರಸ್ಕರಿಸಿದ್ದಾರೆ. 5,520 ಪಡಿತರ ಚೀಟಿಗಳನ್ನು ಮುದ್ರಣಕ್ಕೆ ಕಳುಹಿಸಿದ್ದು, ಇದರಲ್ಲಿ ಈವರೆಗೆ ಅರ್ಜಿದಾರರ ಕೈ ಸೇರಿರುವ ಹೊಸ ಪಡಿತರ ಚೀಟಿಗಳ ಸಂಖ್ಯೆ 51 ಮಾತ್ರವೇ ಆಗಿದೆ.
ಇನ್ನೂ ಚುನಾವಣೆ ದಿನಾಂಕ ಘೋಷಣೆಯ ವೇಳೆ ಪಡಿತರ ವಿತರಣೆ ಹಾಗೂ ಅರ್ಜಿ ಸಲ್ಲಿಕೆ ಕಾರ್ಯ ಸ್ಥಗಿತಗೊಂಡಿರುವುದು ಇದುವರೆವಿಗೂ ಮರಳಿ ಚಾಲನೆ ದೊರೆತಿಲ್ಲ. ಅನ್ನಭಾಗ್ಯ ವಿತರಣೆಗೆ ಎಲ್ಲೆಡೆ ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ಅನೇಕರು ಅನ್ನಭಾಗ್ಯದ ಸೌಲಭ್ಯ ಪಡೆಯಲು ಸಾಮಾನ್ಯ ಸೇವಾಕೇಂದ್ರ, ಕರ್ನಾಟಕ ಒನ್ ಸೇರಿ ಅನೇಕ ಕಡೆಗಳಿಗೆ ಅಲೆದಾಡುತ್ತಿದ್ದಾರೆ. ಆದರೆ, ಇದುವರೆವಿಗೂ ಅರ್ಜಿ ಸಲ್ಲಿಕೆಯ ಸರ್ವರ್ ಓಪನ್ ಆಗಿಲ್ಲ. ಹೀಗಾಗಿ ಹೊಸ ಅರ್ಜಿ ಸಲ್ಲಿಕೆಯೂ ಆಗಿಲ್ಲ. ಮಾತ್ರವಲ್ಲದೆ, ಈಗಾಗಲೇ ಅರ್ಜಿ ಸಲ್ಲಿಸಿರುವ ಹೊಸ ಕಾರ್ಡ್ಗಳು ಮುದ್ರಿತವಾಗಿ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಇಂದಿಗೂ ಅನ್ನಭಾಗ್ಯಕ್ಕೆ ಹೊಸಬರು ಅಲೆದಾಡುವ ಪರಿಸ್ಥಿತಿ ತಪ್ಪಿಲ್ಲ.
ಸಿಎಂ ಸಭೆಯಲ್ಲೂ ಸಿಗದ ಸ್ಪಂದನೆ
ಇನ್ನೂ ಮೊನ್ನೆ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ ಅವರು ಇಂದಿಗೂ ಪಡಿತರಕ್ಕಾಗಿ ಜನರು ಅಲೆದಾಡುತ್ತಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಸಭೆಗೆ ಮಾಹಿತಿ ನೀಡಿದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕಿ ೨೦೧೧ರ ಜನಗಣತಿ ಪ್ರಕಾರ ೭ಲಕ್ಷ ಕುಟುಂಬಗಳಿಗೆ ಪಡಿತರ ವಿತರಿಸಿದ್ದು, ಶೇ.೧೦೧ರಷ್ಟು ಆಧಾರ್ ನೊಂದಣಿ ಕಾರ್ಯ ಆಗಿರುವುದಾಗಿ ಮಾಹಿತಿ ನೀಡಿದರು. ಅಂತೆಯೇ ಹೊಸ ಅರ್ಜಿಯನ್ನು ಹಾಕಲು ಅವಕಾಶ ನೀಡಿರುವುದಾಗಿ ಹೇಳಿದರು. ಆದರೆ, ಮುದ್ರಣಕ್ಕೆ ಹೋಗಿರುವ ಪಡಿತರ ಚೀಟಿ, ಹೊಸ ಪಡಿತರಕ್ಕೆ ಸಲ್ಲಿಸಬೇಕಾದ ಅರ್ಜಿ ವೆಬ್ಸೈಟ್ ಮುಚ್ಚಿರುವ ಬಗ್ಗೆ ಯಾವುದೇ ಚರ್ಚೆಯೂ ಆಗಲಿಲ್ಲ.