ಅಂಬರೀಶ್ ಮತ್ತು ಸುಮಲತಾ ಅವರ ಏಕೈಕ ಪುತ್ರ ಅಭಿಷೇಕ್ ಅವರ ವಿವಾಹ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ಜೂನ್ 5ನೇ ತಾರೀಖು ನಡೆಯಲಿದೆ. ಜೂನ್ 5ರಂದು ಅಭಿಷೇಕ್ ಮತ್ತು ಅವಿವಾ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜೂನ್ 7 ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಜೂನ್ 17ಕ್ಕೆ ಮಂಡ್ಯದಲ್ಲಿ ಬೀಗರ ಊಟವನ್ನು ಏರ್ಪಡಿಸಿದ್ದಾರೆ.
ಮದುವೆ, ಆರತಕ್ಷತೆ ಸಮಾರಂಭದಲ್ಲಿ ಸುಮಾರು 10 ಸಾವಿರ ಅತಿಥಿಗಳು ಭಾಗಿಯಾಗುವ ಸಾಧ್ಯತೆ ಇದೆ. ಏಪ್ರಿಲ್ 5ರಂದು ಅಭಿಷೇಕ್ ಮತ್ತು ಸುಮಲತಾ ಅಂಬರೀಷ್ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಗೆ ಮದುವೆ ಆಮಂತ್ರಣ ಪತ್ರ ನೀಡಿದ್ದಾರೆ. ಅಲ್ಲದೇ ಅನೇಕ ಗಣ್ಯರಿಗೂ ಆಹ್ವಾನ ನೀಡಿದ್ದಾರೆ.
ಅಭಿಷೇಕ್ ಮದುವೆಗೆ ಕೇಂದ್ರದ ಪ್ರಮುಖ ರಾಜಕಾರಣಿಗಳ ಜೊತೆಗೆ, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಇನ್ನೂ ಹಲವು ರಾಜಕಾರಣಿಗಳು ಭಾಗಿಯಾಗಲಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ನಿಂದ ಶತ್ರುಘ್ನ ಸಿನ್ಹಾ ಇನ್ನೂ ಹಲವು ಪ್ರಮುಖ ತಾರೆಯರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ ಎನ್ನಲಾಗುತ್ತಿದೆ.
ಮದುವೆಗೆ ಆಭರಣ, ವಸ್ತ್ರಗಳ ಖರೀದಿ ಜೋರಾಗಿ ನಡೆದಿದ್ದು, ಸ್ವತಃ ವಸ್ತ್ರ ವಿನ್ಯಾಸಕಿ ಆಗಿರುವ ಅವಿವಾ ಬಿದ್ದಪ್ಪ ಅವರೇ ತಮ್ಮ ಹಾಗೂ ಅಭಿಷೇಕ್ ತೊಡಲಿರುವ ಉಡುಗೆಯನ್ನು ಡಿಸೈನ್ ಮಾಡುತ್ತಿರುವುದು ವಿಶೇಷ. ಫ್ಯಾಷನ್ ಈವೆಂಟ್ವೊಂದರಲ್ಲಿ ಅಭಿಷೇಕ್-ಅವಿವಾ ಭೇಟಿ, 3-4 ವರ್ಷಗಳ ಡೇಟಿಂಗ್ ನಂತರ ಇತ್ತೀಚಿಗೆ ಈ ಜೋಡಿ ಎಂಗೇಜ್ಮೆಂಟ್ ಮಾಡಿಕೊಂಡಿತ್ತು. ಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಮಗಳು ಅವಿವಾ ಜೊತೆ ಇದೀಗ ಹಸೆಮಣೆ ಏರಲು ಅಂಬಿ ಪುತ್ರ ಸಜ್ಜಾಗಿದ್ದಾರೆ.