ಮೈಸೂರು: ದಸರಾ ಗಜಪಡೆಯೊಂದಿಗೆ ಆಗಮಿಸಿರುವ ಮಾವುತರು ಮತ್ತು ಕಾವಾಡಿಗಳ ಮಕ್ಕಳಿಗಾಗಿ ಅರಮನೆ ಆವರಣದಲ್ಲಿ ತಾತ್ಕಾಲಿಕ ಶಾಲೆಯನ್ನು ಪ್ರಾಯೋಗಿಕವಾಗಿ ಶುರು ಮಾಡಲಾಗಿದ್ದು, ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಗರಿಗೆದರಲಿವೆ.ಈಗಾಗಲೇ ಅರಮನೆ ಆವರಣದಲ್ಲಿ ಅಂಬಾರಿ ಆನೆ ಅಭಿಮನ್ಯು ನೇತೃತ್ವದ 14 ಆನೆಗಳು ಬೀಡುಬಿಟ್ಟಿವೆ. ಪ್ರತಿ ಸಲವೂ ದಸರಾ ಆನೆಗಳ ಮಾವುತ, ಕಾವಾಡಿಗಳೊಂದಿಗೆ ಅರಮನೆಗೆ ಆಗಮಿಸಿ ಅಂದಾಜು ಒಂದೂವರೆ ತಿಂಗಳು ಅವರ ಮಕ್ಕಳು ಸಹ ಬೀಡುಬಿಡುತ್ತಾರೆ. ಕಾಡಿನ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಕಾರಣಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಈ ಉಪಕ್ರಮ ತೆಗೆದುಕೊಳ್ಳಲಾಗಿದೆ. ಸದ್ಯಕ್ಕೆ 12 ಮಕ್ಕಳು ಕಲಿಯುತ್ತಿದ್ದು, ಇವರಿಗೆ ಮೂವರು ಶಿಕ್ಷಕಿಯರು ಪಾಠ ಮಾಡುತ್ತಿದ್ದಾರೆ.ಕಳೆದ ಎರಡು ವರ್ಷದಂತೆ ಈ ಬಾರಿಯೂ ಅರಮನೆಯ ಜಯಮಾರ್ತಾಂಡ ದ್ವಾರದ ಪಕ್ಕವಿರುವ ಕಟ್ಟಡದಲ್ಲಿ ತಾತ್ಕಾಲಿಕ ಶಾಲೆ ಕಾರ್ಯಾರಂಭ ಮಾಡಿದೆ. ವಿವಿಧ ಹಾಡಿಗಳಲ್ಲಿ ನೆಲೆಸಿದ್ದ ಮಕ್ಕಳು ತಮ್ಮ ಊರಿನ ಸಮೀಪ ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದು, ದಸರಾ ಹಿನ್ನೆಲೆಯಲ್ಲಿ ಪಾಲಕರೊಂದಿಗೆ ಇಲ್ಲಿಗೆ ಆಗಮಿಸಿರುವ ಕಾರಣ ಶಿಕ್ಷಣ ಮುಂದುವರಿಕೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ.ಈ ಸಲವೂ ತಾತ್ಕಾಲಿಕ ಶಾಲೆ ತೆರೆದು ಮಕ್ಕಳಿಗೆ ಶಿಕ್ಷಣ ಕಲ್ಪಿಸಲು ಬೇಕಾದ ತಯಾರಿ ಮಾಡಿಕೊಳ್ಳಲಾಗಿದೆ. ಬಿಆರ್ಸಿ ಎಂ.ಡಿ.ಶ್ರೀಕಂಠಸ್ವಾಮಿ, ನೋಡಲ್ ಅಧಿಕಾರಿಯಾಗಿ ಎಸ್.ಕೆ.ಮಂಜುಳಾ ಕಾರ್ಯನಿರ್ವಹಿಸಲಿದ್ದಾರೆ. 1ರಿಂದ 10ನೇ ತರಗತಿಯ ಮಕ್ಕಳಿಗೆ ಪಾಠ ಮಾಡಲು ತಾತ್ಕಾಲಿಕ ಶಾಲೆಯಲ್ಲಿ ಕಾರ್ಯನಿರ್ವಹಿಸಲು ಶಿಕ್ಷಕರಾದ ನೂರ್ಫಾತಿಮಾ, ಮೌಸೀನ್ ತಾಜ್ ಹಾಗೂ ದಿವ್ಯಾ ಪ್ರಿಯದರ್ಶಿನಿ ಅವರನ್ನು ನಿಯೋಜಿಸಲಾಗಿದೆ. ನೂರ್ಫಾತಿಮಾ ಅವರು ಮಾವುತರು, ಕಾವಾಡಿಗಳ ಮಕ್ಕಳಿಗೆ ಬಹಳ ವರ್ಷಗಳಿಂದ ಪಾಠ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ, ಇವರೊಂದಿಗೆ ಈ ಮಕ್ಕಳು ಉತ್ತಮ ಒಡನಾಟ ಹೊಂದಿದ್ದಾರೆ.ಸೋಮವಾರ ಇನ್ನಷ್ಟು ಮಕ್ಕಳು ಅರಮನೆಗೆ ಆಗಮಿಸಲಿದ್ದು, ಈ ಬಾರಿ ತಾತ್ಕಾಲಿಕ ಶಾಲೆಯಲ್ಲಿ 30 ರಿಂದ 40 ಮಕ್ಕಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಕ್ಕಳಿಗೆ ಕಲಿಕಾ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ತಾತ್ಕಾಲಿಕ ಶಾಲೆಯಲ್ಲಿ ನಲಿ-ಕಲಿ ವಿಧಾನದಲ್ಲಿ ಪಾಠ ಮಾಡಲು ಬೇಕಾದ ಚಾಟ್ಗಳು, ಚಿತ್ರಣ, ಭೂಪಟಗಳು ಇನ್ನಿತರ ಭಿತ್ತಿಪತ್ರಗಳನ್ನು ತಂದಿಡಲಾಗಿದೆ.ಅವುಗಳನ್ನು ತಾತ್ಕಾಲಿಕ ಶಾಲೆಯಲ್ಲಿ ಅಳವಡಿಕೆ ಮಾಡಲಾಗುತ್ತದೆ. ಗೌರಿ-ಗಣೇಶ ಹಬ್ಬದ ನಂತರ ಸೋಮವಾರದಿಂದ ತಾತ್ಕಾಲಿಕ ಶಾಲೆಯಲ್ಲಿ ಪ್ರತಿದಿನ ಬೆಳಗ್ಗೆ 9.45ರಿಂದ ಮಧ್ಯಾಹ್ನ 3.30ರವರೆಗೆ ತರಗತಿಗಳು ನಡೆಯಲಿದೆ. ದಾಖಲಾಗುವ ಮಕ್ಕಳನ್ನು ತರಗತಿವಾರು ವಿಂಗಡಣೆ ಮಾಡಿ, ಮುಖ್ಯ ವಿಷಯಗಳನ್ನು ಬೋಧಿಸಲಾಗುತ್ತದೆ. ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮಕ್ಕಳನ್ನು ಸಕ್ರಿಯಗೊಳಿಸಲಾಗುತ್ತಿದೆ.ಮಧ್ಯಾಹ್ನ ಊಟದ ವ್ಯವಸ್ಥೆ:ಈ ಮಕ್ಕಳಿಗೆ ಇಸ್ಕಾನ್ನಿಂದ ಮಧ್ಯಾಹ್ನದ ಬಿಸಿಯೂಟ ಪೂರೈಕೆ ಮಾಡಲಾಗುತ್ತಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಊಟ ಸರಬರಾಜು ಮಾಡಲಾಗುತ್ತಿದೆ. 2ನೇ ತಂಡದ ಆನೆಗಳೊಂದಿಗೆ ಬಂದಿರುವ ಮಕ್ಕಳ ಸಂಖ್ಯೆ ನೋಡಿಕೊಂಡು ಊಟದ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ.