ಮೈಸೂರು: ಸಹಜವಾಗಿ ಅರಣ್ಯ ಇಲಾಖೆಯಲ್ಲಿ ಮಾವುತ ಹಾಗೂ ಕಾವಾಡಿಗಳು ಮಾದ್ಯಮಗಳ ಎದುರು ಮಾತನಾಡುವುದೇ ವಿರಳ. ಹೀಗಿರುವಾಗ ಕಳೆದ 12 ತಾಸಿನಿಂದ ದೃಶ್ಯಮಾದ್ಯಮಗಳ ಎದುರು ಅರ್ಜುನನ ಸಾವಿನ ಕೊನೆಯ ಕ್ಷಣಗಳು ಹಾಗೂ ಅದಕ್ಕೆ ಕಾರಣಗಳೆನೆಂಬುದರ ಕುರಿತು ಸ್ಪಷ್ಟ ಹೇಳಿಕೆ ಭಿತ್ತರಗೊಳ್ಳುತ್ತಿರುವಂತೆ ಸಾಕಷ್ಟು ಪ್ರಶ್ನೆಗಳು ಉದ್ಬವಿಸಿದ್ದು, ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅರಣ್ಯಾಧಿಕಾರಿಗಳ ಮೌನ ಸಾಕಷ್ಟು ಚರ್ಚೆಗೂ ಶುರು ಮಾಡಿವೆ.
ಕಾಡಾನೆ ಜೊತೆಗಿನ ಕಾಳಗದಲ್ಲಿ ದುರಂತ ಸಾವಿಗೀಡಾದ ಅರ್ಜುನನನ್ನು ನಿನ್ನೆ ವಿಧಿ-ವಿಧಾನ ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ಸಕಲೇಶಪುರದ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅರ್ಜುನನ ಸಾವಿನ ಬಗ್ಗೆ ಸ್ವತಃ ಮಾವುತ ವಿನೂ ಅರ್ಜುನನ ದೇಹಕ್ಕೆ ಗುಂಡೇಟು ತಗುಲಿದೆ ಎಂದು ಹೇಳಿದ್ದಾನೆ. ಹೀಗಿದ್ದರೂ ಸಹ ಸೂಕ್ತ ಮರಣೋತ್ತರ ಪರೀಕ್ಷೆ ನಡೆದಿಲ್ಲ. ಕೇವಲ ಬಾಹ್ಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕನಿಷ್ಠ ಅರ್ಜುನನ ಮೃತದೇಹದ ಮತ್ತೊಂದು ಭಾಗವನ್ನು ನೋಡದೆಯೂ ಅಂತ್ಯಕ್ರಿಯೆ ಮಾಡಿದ್ದಾರೆ ಎಂದು ನೆಟ್ಟಿಗರು ಆಕ್ರೋಶ
ವ್ಯಕ್ತಪಡಿಸಿದ್ದಾರೆ. ಅರ್ಜುನ ಮೃತಪಟ್ಟು ಬಿದ್ದ ಸ್ಥಿತಿಯಲ್ಲಿಯೇ ಅಧಿಕಾರಿಗಳು ಗುಂಡಿಗಿಳಿಸಿ, ಮೃತದೇಹದ ಮತ್ತೊಂದು ಮಗ್ಗುಲು ಹೊರಳಿಸಿ ನೋಡುವ ಬಗ್ಗೆಯೂ ಅಧಿಕಾರಿಗಳು ಕ್ರಮವಹಿಸಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ಈ ನಡೆಯೇ ಹಲವು ಅನುಮಾನ ಮೂಡಿದ್ದು, ಕೇವಲ ದಂತ ತೆಗೆದು, ದೇಹದ ಒಂದು ಭಾಗದ ಬಾಹ್ಯ ಪರೀಕ್ಷೆ ನಡೆಸಿ ಇದೇ ಮರಣೋತ್ತರ ಪರೀಕ್ಷೆ ಎನ್ನುತ್ತಿದ್ದಾರೆ.
ಇನ್ನೂ ಸರ್ಕಾರದ ಜನಪ್ರತಿನಿಧಿಗಳಾದಿಯಾಗಿ ಹಿರಿಯ ಅರಣ್ಯ ಅಧಿಕಾರಿಗಳು ಸಹ ಮೊನ್ನೆ ಅರ್ಜುನನಿಗೆ ಗುಂಡು ತಗುಲಿಲ್ಲ ಎಂದಿದ್ದಾರೆ. ಆದರೆ, ಮಾವುತ ಗುಂಡು ತಗಲಿದೆ ಎನ್ನುತ್ತಿದ್ದಾರೆ. ಹೀಗಾಗಿ ಅರ್ಜುನ ಸಾವು ನಿಗೂಢ ಆಗಲಿದೆಯೇ? ಎಂಬ ಪ್ರಶ್ನೆ ಮೂಡಿದೆ. ಮಾತ್ರವಲ್ಲದೆ, ಅರ್ಜುನನಿಗೆ ಗುಂಡು ತಗುಲಿದ್ದರಿಂದಲೇ ಆತ ಎದುರಾಳಿಯನ್ನು ಎದುರಿಸಲಾಗದೇ ಹತ್ಯೆಗೀಡಾದನೇ ಎಂಬ ಪ್ರಶ್ನೆಗೆ ಕೇವಲ ಮೌಖಿಕ ಉತ್ತರಕ್ಕಿಂದ ವೈದ್ಯಕೀಯ ಉತ್ತರವೂ ಸಹ ಬೇಕೆಂದು ಕೆಲವು ನೆಟ್ಟಿಗರು ಆಗ್ರಹಿಸಿದ್ದಾರೆ. ಇದುವರೆವಿಗೂ ಸಿಎಂ ಆದಿಯಾಗಿ ಅರಣ್ಯ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ಆದರೆ, ತನಿಖೆ ಯಾರು ನಡೆಸುತ್ತಾರೆ. ಹಿರಿಯ ಅರಣ್ಯಾಧಿಕಾರಿಗಳು ನಡೆಸುವುದರಿಂದ ತಮ್ಮ ಇಲಾಖಾಧಿಕಾರಿಗಳ ಬಗ್ಗೆ ಎಂತಹ ವರದಿ ಕೊಡಬಹುದೆಂಬ ಪ್ರಶ್ನೆಯೂ ಉದ್ಭವಿಸಿದೆ. ಹೀಗಾಗಿ ಬೇರೊಬ್ಬರ ಮೂಲಕ ತನಿಖೆ ನಡೆಸಿ ಸಂಪೂರ್ಣ ಇಲಾಖಾಧಿಕಾರಿಗಳನ್ನು ವಜಾಗೊಳಿಸಿ ವಿಚಾರಣೆಗೆ ಒಳಪಡಿಸಿ ಎಂಬುದು ಬಿಜೆಪಿ ನಾಯಕರ ಒತ್ತಾಯವಾಗಿದೆ.
ವಿನೂ ಹೇಳಿಯ ಆಧಾರದ ಮೇಲೆ ಅರಣ್ಯಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೌನ ಮುರಿದು ಗಂಭೀರವಾದ ತನಿಖೆ ನಡೆಸಿ ನಿಜಕ್ಕೂ ಅರ್ಜುನನ ಕಾಲಿಗೆ ಗುಂಡು ತಗುಲಿತ್ತೇ ಇಲ್ಲವೇ ಎಂಬ ಸತ್ಯ ಹೊರತೆಗೆಯುವ ಪ್ರಯತ್ನ ನಡೆಯುತ್ತದೇ ಇಲ್ಲವೋ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.