ಮೈಸೂರು: ದಸರಾ ಅಂಗವಾಗಿ ಆಯೋಜಿಸಿರುವ ದಸರಾ ಸಿಎಂ ಕಪ್ ಅತಂತ್ಯ ಯಶಸ್ವಿಯಾಗಿ ನಡೆಯುತ್ತಿದ್ದು, 21 ರಂದು ಸಿಎಂ ಕಪ್ ಕ್ರೀಡಾಕೂಟದ ಸಮಾರೋಪ ಸಮಾರಂಭ ಆಯೋಜಿಸಿದ್ದು ಅಂದು ಮುಖ್ಯಮಂತ್ರಿಗಳು ಕ್ರೀಡಾಪಟುಗಳಿಗೆ ಪದಕ, ಕಪ್ ಗಳನ್ನು ವಿತರಿಸಲಿದ್ದಾರೆ ಎಂದು ದಸರಾ ಕ್ರೀಡಾ ಉಪಸಮಿತಿ ಅಧ್ಯಕ್ಷರಾದ ಕಾಂಗ್ರೆಸ್ ನಗರ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಅ.11 ರಿಂದ 14 ರವರೆಗೆ ಕ್ರೀಡಾ ಕೂಟದಲ್ಲಿ 28 ಕ್ರೀಡೆಗಳಲ್ಲಿ ಒಟ್ಟು 3509 ಕ್ರೀಡಾಪಟುಗಳು ಭಾಗವಹಿಸಿದ್ದರು. 540 ಮಂದಿ ತಾಂತ್ರಿಕ ಸಿಬ್ಬಂದಿ ಕಾರ್ಯಕ್ರಮ ಯಶಸ್ಸಿಗೆ ದುಡಿದಿದ್ದಾರೆ. ಬೆಂಗಳೂರು ನಗರ, ಗ್ರಾಮಾಂತರ, ಕಲ್ಬುರ್ಗಿ, ಮೈಸೂರು ಹಾಗೂ ಬೆಳಗಾವಿ ಜಿಲ್ಲೆಯ ಕ್ರೀಡಾ ಪಟುಗಳು ಪಾಲ್ಗೊಂಡು ಚಿನ್ನ, ಬೆಳ್ಳಿ, ಕಂಚು ಸೇರಿ ಒಟ್ಟು 696 ಪದಕಗಳನ್ನು ಪಡೆದಿದ್ದಾರೆ ಎಂದರು.
ಹೀಗೆ ಮೊದಲ ಹಂತದ ಪ್ರತಿಭಾನ್ವೇಷಣ ರಾಜ್ಯ ಮಟ್ಟದ ಸಿಎಂ ಕಪ್ ಕ್ರೀಡಾಕೂಟ ಯಶಸ್ವಿಯಾಗಿ ನಡೆದಿದೆ.
ಎರಡನೇ ಹಂತದ ಸಿಎಂ ಕಪ್ ಕ್ರೀಡಾಕೂಟ ಅ.15 ರಿಂದ 21ರವರೆಗೆ ನಡೆಯಲಿದ್ದು, ಒಟ್ಟು 25 ಕ್ರೀಡೆಗಳು 4076 ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ಊಟ, ವಸತಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ನೀಡಲಾಗಿದೆ. ಕ್ರೀಡೆಯಲ್ಲಿ ವಿಜೇತರಾದವರಿಗೆ ವೈಯುಕ್ತಿಕ ಕ್ರೀಡೆ ವಿಭಾಗದಲ್ಲಿ ಗೆಲುವು ಕಂಡ ಕ್ರೀಡಾಪಟುಗಳಿಗೆ ನೇರ ನಗದು ಮೂಲಕ ನೀಡಲಾಗುತ್ತಿದೆ.
21 ರಂದು ಸಿಎಂ ಕಪ್ ಕ್ರೀಡಾಕೂಟದ ಸಮಾರೋಪ ಸಮಾರಂಭ ಆಯೋಜಿಸಿದ್ದು ಅಂದು ಮುಖ್ಯಮಂತ್ರಿಗಳು ಕ್ರೀಡಾಪಟುಗಳಿಗೆ ಪದಕ, ಕಪ್ ಗಳನ್ನು ವಿತರಿಸಲಿದ್ದಾರೆ. ಕ್ರೀಡಾ ಸಚಿವ ನಾಗೇಂದ್ರ, ಶಾಸಕ ತನ್ವೀರ್ ಸೇಠ್ ಸೇರಿ ಹಲವರು ಭಾಗವಹಿಸುವರು. ಪ್ರತಿಭಾನ್ವೇಷಣೆ ದಸರಾ ಸಿಎಂ ಕಪ್, ಒಲಿಂಪಿಕ್ ಮಾದರಿಯ ದಸರಾ ಸಿಎಂ ಕಪ್ ನಲ್ಲಿ ಪಾಲ್ಗೊಂಡಿದ್ದ 2 ಸಾವಿರಕ್ಕೂ ಹೆಚ್ಚು ಮಂದಿಗೆ ಪಾರಿತೋಷಕ ನೀಡಲಿದೆ ಎಂದರು.
ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ದಸರಾ ಕ್ರೀಡಾ ಉಪಸಮಿತಿ ಉಪಾಧ್ಯಕ್ಷರಾದ ಕಾಂತರಾಜು, ಪರಶಿವಮೂರ್ತಿ, ಸದಸ್ಯ ಹಿನಕಲ್ ವೆಂಕಟೇಶ್, ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಕಿರಣ್ ಉಪಸ್ಥಿತರಿದ್ದರು.