ಮೈಸೂರು: ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸುವಂತೆ ಆಗ್ರಹಿಸಿ ರಾಜ್ಯಾಧ್ಯಂತ ಅ.19ರಂದು ಒಂದು ದಿನದ ಸಾಂಕೇತಿಕ ಹೋರಾಟವನ್ನು ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ರೈತರನ್ನು ನೆಮ್ಮದಿಯಿಂದ ಇರಲು ಸರ್ಕಾರಗಳು ಬಿಡುತ್ತಿಲ್ಲ. ಬರ ಬರುತ್ತದೆ ಎಂದು ಮುನ್ಸೂಚನೆ ಮೊದಲೇ ನಾವು ಕೊಟ್ಟಿದ್ದೆವು. ಆಗ ವಿದ್ಯುತ್ ತೊಂದರೆ ಆಗುತ್ತದೆ ಎಂದು ಗೊತ್ತೇ ಇದೆ. ಸರ್ಕಾರದ ಬೇಜವಾಬ್ದಾರಿಯಿಂದ ರೈತರಿಗೆ ಸಮಸ್ಯೆ ಆಗಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಅಂತ ಬರೀ ಬಾಯಿಯಿಂದ ಹೇಳುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೇಜವಾಬ್ದಾರಿಯಿಂದ ರೈತರು ಸಾಯುತ್ತಿದ್ದಾರೆ. ಕಾರ್ಖಾನೆಗೆ ಬೇಕಿದ್ದರೆ ಅರ್ಧ ವಿದ್ಯುತ್ ನೀಡಿದರೂ ಪರವಾಗಿಲ್ಲ. ರೈತರ ಪಂಪಸೆಟ್ಗಳಿಗೆ ವಿದ್ಯುತ್ ಪೂರೈಕೆ ಮಾಡಲಿ ಎಂದು ಆಗ್ರಹಿಸಿದರು.
ಅಂದು ಬೆಳಿಗ್ಗೆ 7 ರಿಂದ ಮದ್ಯಾಹ್ನ 2ವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎಸ್ಕಾಮ್ ಕಚೇರಿಗಳ ಮುಂದೆ ರೈತರಿಗೆ ವಿದ್ಯುತ್ ತಾರತಮ್ಯ ವಿರೋಧಿಸಿ ಪ್ರತಿಭಟನೆ ಮಾಡುತ್ತೇವೆ. ಪಡಿತರ 10 ಕೆಜಿ ಅಕ್ಕಿಯಲ್ಲಿ ನ್ಯೂಟ್ರಿಷನ್ ಇಲ್ಲ. ಸರ್ಕಾರಕ್ಕೆ ನ್ಯೂಟ್ರಿಷನ್ ಫುಡ್ ಕೊಡಬೇಕು ಅಂತ ಮನವಿ ಕಳುಹಿಸಿದ್ದೇವೆ ಎಂದರು.