ಹಾಸನ: ಹಾಸನದ ಅಧಿದೇವತೆ ಹಾಸನಾಂಬೆ ತಾಯಿ ಜಾತ್ರಾ ಮಹೋತ್ಸವ ಅಕ್ಟೋಬರ್ 24 ರಿಂದ 11 ದಿನಗಳ ಕಾಲ 2024ರ ಘೋಷಣೆಯಾಗಿದೆ.
ವರ್ಷಕ್ಕೊಮ್ಮೆ ತಾಯಿ ದರ್ಶನ ಭಾಗ್ಯ ಕರುಣಿಸುತ್ತಾಳೆ. ಈ ಸಮಯದಲ್ಲಿ ದೇವಿಯ ದರ್ಶನ ಪಡೆಯಲು ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಹಾಸನಕ್ಕೆ ಆಗಮಿಸುತ್ತಾರೆ. ಜಾತ್ರೆ ಬಳಿಕ ಮತ್ತೆ ದೇವಾಲಯ ಬಾಗಿಲು ತೆರೆಯುವುದು ಮುಂದಿನ ವರ್ಷ.
ಹಾಸನ ಸಂಸದ ಶ್ರೇಯಸ್ ಪಟೇಲ್ ನೇತೃತ್ವದಲ್ಲಿ ಮಂಗಳವಾರ ಹಾಸನ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹಾಸನಾಂಬೆ ಜಾತ್ರೆ-2024ರ ಪೂರ್ವಭಾವಿ ಸಭೆ ನಡೆಯಿತು. ಜಾತ್ರೆಯ ದಿನಾಂಕದ ಕುರಿತು ಚರ್ಚಿಸಲಾಯಿತು ಮತ್ತು ಜಾತ್ರಾ ಮಹೋತ್ಸವದ ತಯಾರಿಯ ಕುರಿತು ಅಧಿಕಾರಿಗಳ ಜೊತೆ ವಿವರವಾಗಿ ಸಂಸದರು ಚರ್ಚಿಸಿದರು.
ಹಾಸನಾಂಬೆ ಜಾತ್ರೆ ಹಾಗೂ ದರ್ಶನ ಮಹೋತ್ಸವ ಅಕ್ಟೋಬರ್ 24 ರಿಂದ 11 ದಿನಗಳ ಕಾಲ ನಡೆಯಲಿದೆ. ಈ ಬಾರಿ ತಾಯಿಯ ದರ್ಶನಕ್ಕೆ ಸುಮಾರು 13 ರಿಂದ 15 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದ್ದು, ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಸಭೆಯಲ್ಲಿ ಸಂಸದರು ಸೂಚನೆ ನೀಡಿದರು.
ಸಭೆಯಲ್ಲಿ ಹಾಸನ ಜಿಲ್ಲಾಧಿಕಾರಿ ಸತ್ಯಭಾಮ, ಹಾಸನ ಶಾಸಕ ಸ್ವರೂಪ ಪ್ರಕಾಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ದೇವಸ್ಥಾನದ ಆಡಳಿತ ಅಧಿಕಾರಿ ಹಾಗೂ ಉಪ ವಿಭಾಗ ಅಧಿಕಾರಿ ಮಾರುತಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.