ವರುಣಾದಲ್ಲಿ ಸಿದ್ದು ಸತತ ಪ್ರಚಾರಕ್ಕೆ ಪ್ರತಾಪ್ ಸಿಂಹ ವ್ಯಂಗ್ಯ
ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಸಚಿವ ವಿ ಸೋಮಣ್ಣ ಕಣಕ್ಕಿಳಿಯುತ್ತಲೇ ವರುಣಾ ವಿಧಾನಸಭಾ ಕ್ಷೇತ್ರ ರಣಕಣವಾಗಿ ಬದಲಾಗಿದೆ. ವರುಣಾದಲ್ಲಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಸಿದ್ದರಾಮಯ್ಯ ಈಗ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಗಳ ಪ್ರಚಾರಕ್ಕೆ ವ್ಯಂಗ್ಯವಾಡಿರುವ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯನವರೇ ಆ ಭಯ ಇರಬೇಕು ಎಂದು ಟಾಂಗ್ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ, ವರುಣಾ ಕ್ಷೇತ್ರದಲ್ಲೇ ಚುನಾವಣೆ ನಿಲ್ಲುತ್ತೇನೆ, ನಾಮಪತ್ರ ಸಲ್ಲಿಸಲಷ್ಟೇ ಬರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿಹೋಗಿದ್ದರು. ಆದರೆ, ಸೋಮಣ್ಣನವರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ನಾಮಪತ್ರ ಸಲ್ಲಿಸಲು ೨ ದಿನ ಮೊದಲೇ ವರುಣಕ್ಕೆ ಓಡಿ ಬಂದರು, ಇವತ್ತು ಮತ್ತೆ ಬಂದಿದ್ದಾರೆ, ಮುಂದಿನ ವಾರ ಇಲ್ಲೇ ಇರುತ್ತಾರಂತೆ ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಅವರ ಪ್ರವಾಸ ಕಾರ್ಯಕ್ರಮದ ವೇಳಾಪಟ್ಟಿಯನ್ನು ಹಂಚಿಕೊAಡಿರುವ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಅವರಿಗೆ ಭಯ ಕಾಡ್ತಿದೆ.. ಆ ಭಯ ಇರಬೇಕು ಸಿದ್ದರಾಮಯ್ಯನವರೇ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರ ವೇಳಾಪಟ್ಟಿಯಲ್ಲಿ ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಬೆಳಗ್ಗೆ ೧೦ ಗಂಟೆಗೆ ನಿರ್ಗಮಿಸಿ ಬೆಳಗ್ಗೆ ೧೦.೩೦ಕ್ಕೆ ಮೈಸೂರಿಗೆ ಬಂದು ದಿನವಿಡಿ ವರುಣಾದಲ್ಲಿ ಪ್ರಚಾರ ಕಾರ್ಯಕ್ರಮ ನಿಗದಿಯಾಗಿದೆ. ರಾತ್ರಿ ೮ ಗಂಟೆಗೆ ಬೆಂಗಳೂರಿಗೆ ವಾಪಸ್ ಹೋಗಲಿದ್ದಾರೆ ಎಂದು ತಿಳಿಸಲಾಗಿದೆ.
ವರುಣಾದಲ್ಲಿ ಟೈಟ್ ಫೈಟ್!
ಮಾಜಿ ಸಿಎಂ ಸಿದ್ದರಾಮಯ್ಯನವರು ವರುಣಾದಲ್ಲಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ, ಬಿಜೆಪಿ ಜಾತಿ ಲೆಕ್ಕಾಚಾರ ಹಾಕಿ ಸಚಿವ ವಿ ಸೋಮಣ್ಣ ಅವರನ್ನು ವರುಣಾದಲ್ಲಿ ಕಣಕ್ಕಿಳಿಸಿದೆ. ಇಲ್ಲಿ ಲಿಂಗಾಯತರ ಮತಗಳು ಹೆಚ್ಚಿರುವುದರಿಂದ ಲಿಂಗಾಯತ ಸಮುದಾಯಕ್ಕೆ ಸೇರಿರುವ ಸೋಮಣ್ಣ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಲಿಂಗಾಯತ ಸಮುದಾಯದ ಪ್ರಮುಖ ನಾಯಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವುದರಿಂದ ಸಿದ್ದರಾಮಯ್ಯ ಅವರಿಗೆ ಪೈಪೋಟಿ ಎದುರಾಗಿದೆ.