ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಗಸ್ಟ್ 1 ಮತ್ತು 2 ರಂದು ಜಿ 20 ಶೃಂಗಸಭೆಯಲ್ಲಿ ಭಾಗಿಯಾಗುವ ವಿದೇಶಿ ಗಣ್ಯರು ಮೈಸೂರು ಅರಮನೆಗೆ ಭೇಟಿ ನೀಡಲಿದ್ದಾರೆ. ಅಗತ್ಯ ಮುಂಜಾಗೃತ ಕ್ರಮವಾಗಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಅರಮನೆ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಉಪ ನಿರ್ದೇಶಕ ಟಿ. ಎಸ್. ಸುಬ್ರಮಣ್ಯ, ಆಗಸ್ಟ್ 1 ರ ಮಧ್ಯಾಹ್ನ 2.30 ರಿಂದ ಮೈಸೂರು ಅರಮನೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಆಗಸ್ಟ್ 2 ರಂದು ರಾತ್ರಿ 7 ರಿಂದ 8 ಗಂಟೆಯವರೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ವೀಕ್ಷಣೆಗೂ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಜಿ 20 ಶೃಂಗಸಭೆಗೆ ಚಾಲನೆ ನೀಡಲಾಗಿತ್ತು. ಕರ್ನಾಟಕದಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಮೂರು ಕಡೆಗಳಲ್ಲಿ ಶೃಂಗಸಭೆ ಆಯೋಜಿಸಲಾಗಿದೆ. ಈ ಪೈಕಿ ಬೆಂಗಳೂರು ಮತ್ತು ಹಂಪಿಯಲ್ಲಿ ಶೃಂಗಸಭೆ ನಡೆದಿದ್ದು, ಮೈಸೂರಿನಲ್ಲಿ ಆಗಸ್ಟ್ ಒಂದು ಮತ್ತು ಎರಡರಂದು ನಡೆಯಲಿದೆ. ಆಗಸ್ಟ್ 16ರಿಂದ 19ರ ವರೆಗೆ ಮತ್ತೆ ಬೆಂಗಳೂರಿನಲ್ಲಿ ಶೃಂಗಸಭೆ ನಡೆಯಲಿದೆ.