ಚಾಮರಾಜನಗರ: ‘ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ನವರು ಮನೆ ಮನೆಗೆ ದುಡ್ಡು ಹಂಚಿದ್ದಾರೆ. ಇದು ಚುನಾವಣೆ ಅಲ್ಲ, ವ್ಯಾಪಾರ. ಇದನ್ನು ವಿರೋಧಿಸಿ ಈ ಚುನಾವಣೆಯನ್ನು ನಾನು ಬಹಿಷ್ಕರಿಸುತ್ತೇನೆ’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗಡ ಮಾತನಾಡಿದ ಅವರು, ‘ಮಂಗಳವಾರ ಬೆಳಗಿನ ಜಾವ ಮೂರು ಗಂಟೆಯವರೆಗೆ ಎರಡೂ ಪಕ್ಷದವರು ಊರು ಊರುಗಳಲ್ಲಿ ದುಡ್ಡು ಹಂಚಿದ್ದಾರೆ. ಚುನಾವಣಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ಮಾಡಿಲ್ಲ. ಬೇಕಾದಲ್ಲಿಗೆಲ್ಲ ದುಡ್ಡು ಸಾಗಿಸಿದ್ದಾರೆ’ ಎಂದು ಆರೋಪಿಸಿದರು.
‘ಇದನ್ನು ಚುನಾವಣೆ ಎಂದು ಹೇಳುತ್ತಾರಾ? ಚಾಮರಾಜನಗರ ಕ್ಷೇತ್ರದಲ್ಲಿ ವ್ಯಾಪಾರ ಮಾಡಿ ಶಾಸನ ಸಭೆಯಲ್ಲಿ ಸ್ಥಾನ ಪಡೆಯಬೇಕು ಎಂದು ಹೊರಟಿದ್ದಾರೆ. ಈ ಚುನಾವಣಾ ಫಲಿತಾಂಶವನ್ನು ನಾನು ಒಪ್ಪುವುದಿಲ್ಲ’ ಎಂದು ಹೇಳಿದರು.
‘ನಾನು ಯಾರಿಗೂ ದುಡ್ಡು ಹಂಚಿಲ್ಲ. ಚುನಾವಣೆಯಲ್ಲಿ ಏಜೆಂಟರನ್ನು ನೇಮಿಸಿಲ್ಲ. ಯಾವ ಮತಗಟ್ಟೆಗೂ ಭೇಟಿ ನೀಡಿಲ್ಲ. ಮತಗಟ್ಟೆಗಳಿಗೆ ಬೆಂಬಲಿಗರನ್ನೂ ಕಳುಹಿಸಿಲ್ಲ. ಭ್ರಷ್ಟ ವ್ಯವಸ್ಥೆಯಲ್ಲಿ ನಡೆದಿರುವ ಈ ಚುನಾವಣೆಯನ್ನು ನಾನು ಬಹಿಷ್ಕರಿಸಿದ್ದೇನೆ’ ಎಂದು ವಾಟಾಳ್ ನಾಗರಾಜ್ ಹೇಳಿದರು.
ಕೊನೆಯ ಭೇಟಿ: ‘ಇದು ಚಾಮರಾಜನಗರಕ್ಕೆ ನನ್ನ ಕೊನೆಯ ಭೇಟಿ. ಇನ್ನು ಮುಂದೆ ನಾನು ಇಲ್ಲಿಗೆ ಬರಲಾರೆ. ಇವತ್ತು ಕೂಡ ನಾನು ನಗರಕ್ಕೆ ಹೋಗಿಲ್ಲ. ಹೊರಗಡೆಯೇ ಮಾತನಾಡುತ್ತಿದ್ದೇನೆ’ ಎಂದು ಅವರು ಹೇಳಿದರು.