ಬೆಂಗಳೂರು: ಚಂದ್ರಯಾನ-3 ಸಕ್ಸಸ್ ಆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ, ಚಂದ್ರಯಾನ-3 ಯಶಸ್ಸಿಗೆ ಕಾರಣರಾದ ಇಸ್ರೋ ವಿಜ್ಞಾನಿಗಳ ತಂಡವನ್ನು ಅಭಿನಂದಿಸಿದರು.
ಇಸ್ರೋ ಅಧ್ಯಕ್ಷ ಸೋಮನಾಥ ಸೇರಿದಂತೆ ವಿಜ್ಞಾನಿಗಳು, ಸಿಬ್ಬಂದಿ ವರ್ಗದವರನ್ನು ಸಿಎಂ ಸಿದ್ದರಾಮಯ್ಯ ಸನ್ಮಾನಿಸಿದರು. ಇಸ್ರೋ ವಿಜ್ಞಾನಿಗಳಿಗೆ ಸಿಹಿ ತಿನಿಸಿ ಸಂತಸ ವ್ಯಕ್ತಪಡಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಇಸ್ರೋ ಅಧ್ಯಕ್ಷರು ಹಾಗೂ ವಿಜ್ಞಾನಿಗಳನ್ನು ಸರ್ಕಾರದ ವತಿಯಿಂದ ಗೌರವಿಸಲಾಗುತ್ತದೆ. ಸರ್ಕಾರದ ವತಿಯಿಂದ ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ಕಾರ್ಯಕ್ರಮ ಆಯೋಜಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ನಮಗೆಲ್ಲ ಹೆಮ್ಮೆ ತರುವಂತಹ ವಿಚಾರ ಇದು. ನಾನು ಕೂಡ ನಿನ್ನೆ ವಿಕ್ರಮ್ ಲ್ಯಾಂಡರ್ ಲ್ಯಾಂಡಿAಗ್ ವೀಕ್ಷಣೆ ಮಾಡಿದ್ದೇನೆ. ಖುಷಿ ಆಯ್ತು, ಬಹಳ ಹೆಮ್ಮೆ ಎನಿಸಿತು. ಇದೊಂದು ದೊಡ್ಡ ಸಾಧನೆ. ಹಲವು ವರ್ಷಗಳಿಂದ ವಿಜ್ಞಾನಿಗಳು ಶ್ರಮ ಪಟ್ಟಿದ್ದಾರೆ. ನೂರಾರು ವಿಜ್ಞಾನಿಗಳ ಪರಿಶ್ರಮದ ಫಲ ಇದು ಎಂದು ಶ್ಲಾಘಿಸಿದರು.
ಇಸ್ರೋ ತಂಡವನ್ನು ಸನ್ಮಾನಿಸಲು ನಾವು ವಿಶೇಷ ಸಮಾರಂಭ ಮಾಡುತ್ತೇವೆ. ನಾವೆಲ್ಲ ಹೆಮ್ಮೆ ಪಡುವ ಸಾಧನೆ ಇದು. ಬಹಳ ಖುಷಿ ಕೊಡುವ ವಿಚಾರ. ವೈಯಕ್ತಿಕವಾಗಿ ನನಗೆ ಬಹಳ ಸಂತೋಷ ತಂದಿದೆ. ಇದು ಬಹಳ ದೊಡ್ಡ ಸಾಧನೆ. ಈ ಸಾಧನೆಯಲ್ಲಿ ಕರ್ನಾಟಕದ ವಿಜ್ಞಾನಿಗಳೂ ಸೇರಿದ್ದಾರೆ. ಭಾರತದಾದ್ಯಂತ ಸಾವಿರ ವಿಜ್ಞಾನಿಗಳು ಈ ಸಾಧನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.