ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ಕಡೆ ಗದ್ದೆಗಳಲ್ಲಿ ಹಾಗೂ ಜಮೀನುಗಳಲ್ಲಿ ನೀರು ನಿಂತು ಬೆಳೆಗಳು ಕೊಳೆತು ಹೋಗುವ ಭೀತಿ ರೈತರಲ್ಲಿ ಎದುರಾಗಿದೆ. ಕೆಲವು ಜಿಲ್ಲೆಗಳಲ್ಲಿ ಇನ್ನೂ ಮಳೆಯಾಗದೆ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಮತ್ತು ಕೆಲವೇಡೆ ತೀರ ಮಳೆಯಿಂದಾಗಿ ಬೆಳೆಗಳು ಕೊಳೆತು ಹೋಗುವ ಹಂತದಲ್ಲಿದೆ.
ರಾಜ್ಯದ ಕರಾವಳಿ, ಮಲೆನಾಡು ಮಾತ್ರವಲ್ಲದೇ ಬರದ ಛಾಯೆ ಆವರಿಸಿದ್ದ ಜಿಲ್ಲೆಗಳಲ್ಲೂ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ಈಗ ಅಡ್ಡ ಪರಿಣಾಮ ಬೀರಲಾರಂಭಿಸಿದೆ. ತಡವಾಗಿ ರಾಜ್ಯ ಪ್ರವೇಶಿಸಿದ ಮುಂಗಾರು ಮಳೆ ಈ ವರ್ಷ ಬರದ ಆತಂಕವನ್ನು ದೂರ ಮಾಡಿದೆಯಾದರೂ ನಿರಂತರ ಮಳೆಯ ಪರಿಣಾಮ ಪ್ರಮುಖ ಬೆಳೆಗಳಿಗೆ ಕೊಳೆ ರೋಗದ ಆತಂಕ ಎದುರಾಗಿದೆ.
ಮಳೆ ಇನ್ನೆರಡು ದಿನಗಳ ಕಾಲ ಮುಂದುವರಿದರೆ ಹಲವಾರು ಬೆಳೆಗಳು ನೀರಿನಲ್ಲಿ ಕೊಳೆತು ಹೋಗಲಿವೆ ಎಂದು ರೈತರು ಆತಂಕಗೊಂಡಿದ್ದಾರೆ. ಪ್ರಮುಖವಾಗಿ ಈರುಳ್ಳಿ, ಹೆಸರು, ಮೆಕ್ಕೆಜೋಳದಂತಹ ಬೆಳೆಗಳಿಗೆ ಅತಿಯಾದ ಮಳೆ ಕೊಳೆರೋಗ ತರುತ್ತದೆಯಲ್ಲದೇ ಭತ್ತದ ಗದ್ದೆಗಳಿಗೂ ನೀರು ನುಗ್ಗಿ ಅನೇಕ ಕಡೆಗಳಲ್ಲಿ ಭಾರಿ ನಷ್ಟ ಉಂಟಾಗಿದೆ. ರಾಜ್ಯದ ಚಿತ್ರದುರ್ಗ, ದಾವಣಗೆರೆ, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಸಿಬರದ ಆತಂಕ ಸೃಷ್ಟಿಯಾಗಿದೆ.
ಎಡೆ ಬಿಡದ ಮಳೆಯಿಂದ ಶೀತದ ಪ್ರಮಾಣ ಹೆಚ್ಚಳವಾಗುತ್ತಿರುವುದು ಈರುಳ್ಳಿ ಬೆಳೆಗೆ ಮಾರಕವಾಗಿ ಪರಿಣಮಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಈರುಳ್ಳಿ (Onion) ಬೆಳೆಯಿಂದ ನಷ್ಟ ಅನುಭವಿಸುತ್ತಿರುವ ರೈತರು, ಈಗ ಮತ್ತೊಂದು ನಷ್ಟದ ಸುಳಿಗೆ ಸಿಲುಕುವ ಆತಂಕದಲ್ಲಿದ್ದಾರೆ.
ಈ ಬಾರಿ ಮುಂಗಾರು ತಡವಾಗಿ ಆಗಮಿಸಿದ್ದರಿಂದ ಜೂನ್ ಎರಡು, ಮೂರನೇ ವಾರದಲ್ಲಿ ರೈತರು ಈರುಳ್ಳಿ ಬಿತ್ತನೆ ಮಾಡಿದ್ದರು. ಈಗ ಕಳೆ ನಿರ್ವಹಣೆ ಮಾಡಲು ಔಷಧ ಸಿಂಪಡಣೆ ಮಾಡಿ, ಬೆಳೆಗೆ ಹದ ಮಾಡಲು ಸಜ್ಜಾಗುವ ಹೊತ್ತಿಗೆ ನಿರಂತರವಾಗಿ ಸುರಿಯುತ್ತಿರುವ ಮಳೆ ಈರುಳ್ಳಿಗೆ ಗಂಡಾಂತರ ತಂದಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಮುಂಗಾರು ಗುರಿ 25,147 ಹೆಕ್ಟೇರ್ಗೆ 14,894 ಹೆಕ್ಟೇರ್ ಬಿತ್ತನೆಯಾಗಿತ್ತು. ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳಲ್ಲಿ ಮೇ ತಿಂಗಳಲ್ಲೇ ಬಿತ್ತನೆ ಮಾಡಿದ್ದರಿಂದ ಒಂದಷ್ಟು ಪ್ರಮಾಣ ಈಗಾಗಲೇ ಕೆಲವು ಕಡೆ ಗೆಡ್ಡೆ ಕಟ್ಟಿದ್ದು, ಇನ್ನು ಕೆಲವು ಕಡೆ ಗೆಡ್ಡೆ ಕಟ್ಟುವ ಹಂತದಲ್ಲಿದೆ. ಈ ಮಳೆ ಮೊದಲೇ ಬಿತ್ತನೆಯಾಗಿರುವ, ನಂತರದ ದಿನಗಳಲ್ಲಿ ಬಿತ್ತನೆಯಾಗಿರುವ ಎರಡೂ ಹಂತದ ಈರುಳ್ಳಿ ಬೆಳೆಗೂ ಮಾರಕವಾಗಿ ಪರಿಣಮಿಸಿದೆ.ವಿಶೇಷವಾಗಿ ಜೂನ್ ತಿಂಗಳ ಕೊನೆ ಎರಡು ವಾರಗಳಲ್ಲಿ ಬಿತ್ತನೆ ಮಾಡಿದ ಈರುಳ್ಳಿ ಬೇರು ಎಳೆಯದಾಗಿದ್ದು, ನಿರಂತರ ಮಳೆಯಿಂದಾಗಿ ಶೀತಕ್ಕೆ ಕೊಳೆಯುವ ಆತಂಕ ಹುಟ್ಟಿಸಿದೆ. ಈಗಾಗಲೇ ಬಂದಿರುವ ಈರುಳ್ಳಿ (Onion) ಗೆಡ್ಡೆಗೆ ಕೊಳೆರೋಗ ಹಬ್ಬುವ ಸಾಧ್ಯತೆ ಇದೆ. ಆದ್ದರಿಂದ ರೈತರ ಆತಂಕ ಇಮ್ಮಡಿಯಾಗಿದೆ.
ಬೆಲೆ ಏರಿಕೆ ಎಚ್ಚರಿಕೆ:
ರಾಜ್ಯದ ವಿಜಯಪುರ, ಗದಗ, ದಾವಣಗೆರೆ ಮತ್ತು ಬೆಳಗಾವಿ ಜಿಲ್ಲೆಗಳು ಈರುಳ್ಳಿ ಬೆಳೆಯುವ ಪ್ರಮುಖ ಜಿಲ್ಲೆಗಳಾಗಿದ್ದು, ಹವಾಮಾನ ವೈಪರೀತ್ಯದ ಪರಿಣಾಮ ಎಲ್ಲ ಜಿಲ್ಲೆಗಳಲ್ಲೂ ಇರುವುದರಿಂದ ಬಿತ್ತನೆ ಮಾಡಿರುವ ಈರುಳ್ಳಿಯ ಶೇ.25ರಷ್ಟು ಬೆಳೆ ಕೈಗೆ ಸಿಗುವುದು ಕಷ್ಟ. ಹಾಗಾಗಿ, ಟೊಮೆಟೋ ಬೆಲೆ ಏರಿಕೆಯ ದಾರಿಯಲ್ಲೇ ಈರುಳ್ಳಿ ಕೂಡಾ ಸಾಗಲಿದ್ದು, ಗ್ರಾಹಕರಿಗೆ ಹೊರೆಯಾಗಲಿದೆ ಎಂದು ಹೇಳಲಾಗುತ್ತಿದೆ.
”ಪ್ರಸ್ತುತ ಮಹಾರಾಷ್ಟ್ರ, ಮಧ್ಯ ಪ್ರದೇಶ, ಗುಜರಾತ್, ರಾಜ್ಯದ ವಿಜಯಪುರದಿಂದ ದಾಸ್ತಾನು ಮಾಡಿರುವ ಈರುಳ್ಳಿ ಮಾರುಕಟ್ಟೆಗೆ ರವಾನೆಯಾಗುತ್ತಿದೆ. ಇನ್ನು ಮೂರ್ನಾಲ್ಕು ತಿಂಗಳು ದಾಸ್ತಾನು ಇರುವ ಈರುಳ್ಳಿ ಪೂರೈಕೆಯಾಗಲಿದೆ. ಆದರೆ, ಹವಾಮಾನ ವೈಪರೀತ್ಯ ದಾಸ್ತಾನು ಮಾಡಲಾಗಿರುವ ಈರುಳ್ಳಿಗೂ ಅಪಾಯ ತಂದೊಡ್ಡಲಿದೆ. ತೇವಾಂಶ ಹೆಚ್ಚಳದಿಂದ ಈರುಳ್ಳಿ ಮೊಳಕೆ ಬರುವುದು, ಕಪ್ಪಾಗುವುದು ಸಾಮಾನ್ಯ. ಮಳೆ ಹೀಗೆ ಮುಂದುವರಿದಲ್ಲಿ ದಾಸ್ತಾನು ಇರುವ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರಲಿದೆ” ಎನ್ನುತ್ತಾರೆ ಸಗಟು ವ್ಯಾಪಾರಿಗಳು.