ಮೈಸೂರು:- ನಾಡಹಬ್ಬ ಮೈಸೂರು ದಸರಾ 2023 ಕುರಿತು ಹೈಪವರ್ ಕಮಿಟಿ ಸಭೆ 31ರಂದು ನಡೆಯಲಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ತಿಳಿಸಿದ್ದಾರೆ.
ಮೈಸೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಡಳಿತ ಸುಧಾರಣೆ, ಪ್ರಜಾಪ್ರಭುತ್ವ, ಭಾರತೀಯ ಸಂವಿಧಾನ, ನಾಲ್ವಡಿ ಕೃಷ್ಣರಾಜ ಒಡೆಯರ್, ವಿಜಯನಗರ ಸಾಮ್ರಾಜ್ಯ ಸೇರಿದಂತೆ ವಾಡಿಯ ಅರಸರ ಕೊಡುಗೆ, ಸಾಹಿತ್ಯದ ಪ್ರದರ್ಶನ ಮತ್ತು ಸಂಗೀತ, ಕಲೆ ಮತ್ತು ಸಂಸ್ಕೃತಿ ಸಂಭ್ರಮಾಚರಣೆಯ ಜೊತೆಗೆ ಅಂತರ್ಗತ ದಸರಾ ಆಯೋಜಿಸಲು ಯೋಜಿಸಲಾಗಿದೆ ಎಂದರು.
ಕೋವಿಡ್ ಮಹಾಮಾರಿಯಿಂದಾಗಿ ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆ, ಪ್ರವಾಸೋದ್ಯಮ, ಸಾಮಾಜಿಕ ಸಭೆ ಸಮಾರಂಭಗಳು ಬಹುತೇಕ ಸ್ಥಗಿತಗೊಂಡಿದ್ದವು. ಆದ್ದರಿಂದ ಈ ಬಾರಿಯ ದಸರಾವನ್ನು ಸಾಕಷ್ಟು ಜನರ ಸಹಭಾಗಿತ್ವ ಹಾಗೂ ಸದುಪಯೋಗವಾಗುವಂತೆ ನೋಡಿಕೊಳ್ಳುತ್ತೇವೆ. ಈ ಬಾರಿಯ ದಸರಾದಲ್ಲಿ ಯುವಕರು ಆನಂದಿಸಲು ಅವಕಾಶವಿದೆ ಎಂದು ಅವರು ಹೇಳಿದರು.
ಕಬಿನಿ ಅಣೆಕಟ್ಟು ಭರ್ತಿಯಾಗಿ ಕೆಆರ್ಎಸ್ ಬಹುತೇಕ ಭರ್ತಿಯಾಗಿರುವುದರಿಂದ ಕಪಿಲಾ ಮತ್ತು ಕಾವೇರಿ ನದಿಗೆ ಬಾಗಿನ ನೀಡುವ ಯೋಜನೆ ಕುರಿತು ಕೇಳಿದಾಗ, ‘ಪ್ರಕೃತಿ’ಗೆ ಧನ್ಯವಾದ ಅರ್ಪಿಸಲು ಶೀಘ್ರದಲ್ಲೇ ಬಾಗಿನ ಅರ್ಪಿಸುತ್ತೇವೆ. ಕಬಿನಿ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಿಂದ ನೀರಾವರಿಗೆ ನೀರು ಬಿಡುವ ಕುರಿತು ಸದ್ಯದಲ್ಲಿಯೇ ನೀರಾವರಿ ಸಮಾಲೋಚನಾ ಸಮಿತಿ ಸಭೆ ನಡೆಸಿ ತೀರ್ಮಾನಿಸುತ್ತೇವೆ ಎಂದು ಮಹದೇವಪ್ಪ ತಿಳಿಸಿದರು.
ಇತ್ತೀಚೆಗೆ ದಸರಾ ಮಹೋತ್ಸವದ ಕಾರ್ಯಸೂಚಿಯನ್ನು ಅರಮನೆ ಮಂಡಳಿ ಕಚೇರಿಯಲ್ಲಿ ಜುಲೈ 6ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿ ಬಿಡುಗಡೆ ಮಾಡಲಾಗಿತ್ತು. ಈ ಬಾರಿ 2023ರ ದಸರಾ ಉತ್ಸವವನ್ನು ಅಕ್ಟೋಬರ್ 15ರಿಂದ 24ರವರೆಗೆ ಅದ್ಧೂರಿಯಾಗಿ ಆಚರಿಸಲಾಗುತ್ತದೆ ಎಂದು ಈ ವೇಳೆ ಮಾಹಿತಿ ನೀಡಲಾಗಿತ್ತು.
ಅಕ್ಟೋಬರ್ 15ರಿಂದ ದಸರಾ ಆರಂಭವಾಗಲಿದ್ದು, ಅಕ್ಟೋಬರ್ 23ರಂದು ಆಯುಧ ಪೂಜೆ & ಅಕ್ಟೋಬರ್ 24ರಂದು ವಿಜಯದಶಮಿ ಆಚರಣೆಗಳು ನಡೆಯಲಿವೆ. ದಸರಾ ಆನೆಗಳ ಆರೋಗ್ಯದ ಮೇಲೆ ವಿಶೇಷ ಕಾಳಜಿವಹಿಸುವ ಉದ್ದೇಶದಿಂದ ಈ ಬಾರಿ ಹೆಣ್ಣಾನೆಗಳಿಗೆ ‘ಪ್ರೆಗ್ನೆನ್ಸಿ ಟೆಸ್ಟ್’ ನಡೆಸಲು ಅರಣ್ಯ ಇಲಾಖೆ ತೀರ್ಮಾನಿಸಿದೆ.