ಮೈಸೂರು: ಈ ಬಾರಿ ಕಾಂಗ್ರೆಸ್ ಪಕ್ಷ ಏನೇ ಆದರೂ ಕೂಡ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ. 120ರಿಂದ 130 ಸೀಟು ಗೆಲ್ಲುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿನ್ನೆ ನಂಜನಗೂಡಿಗೆ ಹೋಗಿದ್ದೆ. ಇವತ್ತು ವರುಣಾಕ್ಕೆ ಹೋಗುತ್ತಿದ್ದೇನೆ. ಅದು ಖಾಸಗಿ ಕಾರ್ಯಕ್ರಮ. ನಮ್ಮ ಎದುರಾಳಿ ಯಾರು ಅಂತ ಯಾವತ್ತೂ ಯೋಚಿಸಿಲ್ಲ. ಜನರು ಆಶೀರ್ವಾದ ಮಾಡುತ್ತಾರೆ. ವರುಣಾ ನನ್ನ ಹುಟ್ಟಿದೂರು, ಅಲ್ಲಿಂದಲೇ ರಾಜಕೀಯ ಪ್ರಾರಂಭಿಸಿದ್ದು, 78 ರಲ್ಲಿ ತಾಲೂಕಾಬೋರ್ಡ್ ಗೆ ನಿಂತಿದ್ದು ಅಲ್ಲಿಂದಲೇ , ಹಾಗಾಗಿ 2008ರಲ್ಲಿ, 2013ರಲ್ಲಿ ನಿಂತಿದ್ದೆ. ಈ ಬಾರಿ ಕೊನೆಯ ಚುನಾವಣೆಯನ್ನು ನಾನು ನಮ್ಮ ಹುಟ್ಟೂರು ಎಲ್ಲಿದೆ ಅಲ್ಲಿ ಸ್ಪರ್ಧೆ ಮಾಡುತ್ತೇನೆ. ಜನರು ಆಶೀರ್ವಾದ ಮಾಡ್ತಾರೆ ಅಂತ ನಂಬಿಕೆ ಇದೆ. ನಂತರ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ತಿಳಿಸಿದರು. ಕೋಲಾರದಲ್ಲಿಯೂ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಕೋಲಾರದವರು ಕರೆಯುತ್ತಿದ್ದಾರೆ ಹೈಕಮಾಂಡ್ ಒಪ್ಪಿದರೆ ನಿಲ್ಲುತ್ತೇನೆ ಎಂದರು.
ಚುನಾವಣಾ ಆಯೋಗ ಇಂದು ಚುನಾವಣಾ ದಿನಾಂಕ ಘೋಷಿಸಬಹುದು, ಕಾಂಗ್ರೆಸ್ ಪಕ್ಷ ಚುನಾವಣೆಗೆ ಸಿದ್ಧವಾಗಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಚುನಾವಣೆ ಇನ್ನೂ ಘೋಷಣೆ ಆಗಿಲ್ಲ, ಘೋಷಣೆಯಾಗಬಹುದು, ಇವತ್ತು ಚುನಾವಣಾ ಆಯೋಗದವರು ಸಭೆ ಕರೆದಿದ್ದಾರೆ ಅಂತ ಗೊತ್ತಾಯಿತು. ಬಹುಶಃ ಚುನಾವಣೆ ಘೋಷಿಸಬಹುದು, ನಿನ್ನೆ, ಇವತ್ತು ಮಾಡಬಹುದು ಅಂತ ಲೆಕ್ಕಾಚಾರ ಇತ್ತು, ಮಾಡಬಹುದು, ನಾವು ಚುನಾವಣೆಗೆ ಸಿದ್ಧರಿದ್ದೇವೆ. ಕಾಂಗ್ರೆಸ್ ಪಕ್ಷ ಯಾವತ್ತೂ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಲ್ಲ. ಚುನಾವಣಾ ಆಯೋಗ ಏನು ಹೇಳುತ್ತದೆ ಅದನ್ನು ನಾವು ಅನುಸರಿಸುತ್ತೇವೆ. ನಾವು ಯಾವತ್ತೂ ನ್ಯಾಯಯುತ ಮತ್ತು ಮುಕ್ತ ಚುನಾವಣೆ ಬಯಸುವುದು ಎಂದರು.
ಚುನಾವಣೆ ಘೋಚಣೆಗೂ ಮುನ್ನ ಹಣ, ಕೆಲವು ವಸ್ತುಗಳು ಸಿಗುತ್ತಿವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಪೀಪಲ್ ರೆಪ್ರೆಸೆಂಟೇಶನ್ ಆಯಕ್ಟ್ (ಜನರ ಪ್ರಾತಿನಿಧ್ಯ ಕಾಯ್ದೆ)ನಲ್ಲಿ ಏನು ಹೇಳುತ್ತಾರೆ. ಅದನ್ನು ಚಾಚೂ ತಪ್ಪದೆ ಚುನಾವಣಾ ಆಯೋಗ ಜಾರಿಯಲ್ಲಿ ತರಬೇಕು. ಚುನಾವಣಾ ಅಕ್ರಮಗಳನ್ನು ತಡೆಯುವ ಕೆಲಸ ಮಾಡಬೇಕು. ಸಂಪೂರ್ಣವಾಗಿ ತಡೆಯುವ ಕೆಲಸ ಮಾಡಬಹುದು. ಅದು ಯಾವುದೇ ಪಕ್ಷ ಇರಲಿ, ಆಡಳಿತದಲ್ಲಿರುವ ಪಕ್ಷಗಳು ಹೆಚ್ಚು ಅಕ್ರಮಗಳನ್ನು ಮಾಡುತ್ತವೆ. ದುಡ್ಡನ್ನು ಹಂಚುವುದು ಬೇರೆ ಬೇರೆ ಆಮಿಷಗಳನ್ನು ಒಡ್ಡುವುದನ್ನು ಆಡಳಿತ ಪಕ್ಷಗಳು ಮಾಡುತ್ತವೆ. ಅವರ ಮೇಲೆ ಕಡಿವಾಣ ಹಾಕುವ ನಿಗಾ ಇಡುವ ಕೆಲಸ ಮಾಡಬೇಕು ಎಂದರು.
ರಾಜ್ಯ ಪ್ರವಾಸ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಹೆಲಿಕಾಪ್ಟರ್ ನಲ್ಲಿ ಪ್ರವಾಸ ಮಾಡುತ್ತೇನೆ. ಒಂದು ದಿನಕ್ಕೆ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರವಾಸ ನಡೆಸುತ್ತೇನೆ. ಮೂವತ್ತು ದಿನದಲ್ಲಿ 120 ವಿಧಾನಸಭಾ ಕ್ಷೇತ್ರಗಳ ಪ್ರವಾಸ ಪೂರೈಸಬಹುದು. ಪ್ರಜಾಧ್ವನಿಯಲ್ಲಿ 60ವಿಧಾನಸಭಾ ಕ್ಷೇತ್ರಗಳಿಗೆ ಪ್ರವಾಸ ನಡೆಸಿದ್ದೇನೆ. ಇನ್ನೂ 120 ವಿಧಾನಸಭಾ ಕ್ಷೇತ್ರಗಳಿಗೆ ಪ್ರವಾಸ ಮಾಡುತ್ತೇನೆ. ಡಿ.ಕೆ.ಶಿವಕುಮಾರ್ ಕೂಡ ಕೆಲವು ವಿಧಾನ ಸಭಾ ಕ್ಷೇತ್ರಗಳಿಗೆ ಪ್ರವಾಸ ಮಾಡಿದ್ದಾರೆ. ನಿನ್ನೆನೂ ಕೂಡ ಅವರು ಶ್ರೀರಂಗಪಟ್ಟಣಕ್ಕೆ ಹೋಗಿದ್ದರು ಎಂದು ತಿಳಿಸಿದರು. ರಾಜ್ಯದಲ್ಲಿ ನಿಷ್ಪಕ್ಷಪಾತ ಚುನಾವಣೆ ನಡೆಯಲಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಅದನ್ನು ಚುನಾವಣಾ ಆಯೋಗ ಹೇಗೆ ತೀರ್ಮಾನಗಳನ್ನು ಮಾಡುತ್ತದೆ, ಹೇಗೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಅದರ ಮೇಲೆ ಫೇರ್ &ಪ್ರಿ ಎಲೆಕ್ಷನ್ ಗಳಾಗುತ್ತವೆ ಎಂದರು. ಎರಡನೇ ಪಟ್ಟಿ ಯಾವಾಗ ಬಿಡುಗಡೆಯಾಗುತ್ತದೆ ಎಂದು ಪ್ರಶ್ನಿಸಿದಾಗ ನಾಳೆ ಸ್ಕಿçÃನಿಂಗ್ ಕಮಿಟಿ ಮೀಟಿಂಗ್ ಇದೆ, ಅದು ಮುಗಿದ ಮೇಲೆ ಸೆಂಟ್ರಲ್ ಎಲೆಕ್ಷನ್ ಕಮಿಟಿ ಮೀಟಿಂಗ್ ಇದೆ ಅದಾದ ಮೇಲೆ ಬಿಡುಗಡೆ ಮಾಡುತ್ತೇವೆ ಎಂದರು. ಒಂದೊAದು ಕ್ಷೇತ್ರದಲ್ಲಿ ಇಬ್ಬಿಬ್ಬರು ಮೂರು ಮಂದಿ ಆಕಾಂಕ್ಷಿಗಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಗಾಳಿ ಬೀಸಲು ಆರಂಭವಾಗಿದೆ. ಹಾಗಾಗಿ ಆಕಾಂಕ್ಷಿಗಳು ಜಾಸ್ತಿ ಆಗಿದ್ದಾರೆ. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.
ಬಿಜೆಪಿ ಜೆಡಿಎಸ್ ಒಳೊಪ್ಪಂದಗಳಿರಬಹುದಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಬಿಜೆಪಿ-ಜೆಡಿಎಸ್ ಮ್ಯಾಚ್ ಫಿಕ್ಸಿಂಗ್ ಆದರೂ ಆಗಬಹುದು, ಹಳೆ-ಮೈಸೂರೋ, ಹೊಸ ಮೈಸೂರೋ ಹೋದ ಸಲ ಅಂತೂ ಆಗಿತ್ತು. ಈ ಸಲ ಏನಾಗುತ್ತದೆ ಎಂದು ಕಾದು ನೋಡಬೇಕು. ನನಗೆ ಆಂತರಿಕ ಒಪ್ಪಂದ ಮಾಡಿಕೊಳ್ಳುತ್ತಾರೆಂಬ ಸೂಚನೆ ಇದೆ. ಈ ಸಾರಿ ಕಾಂಗ್ರೆಸ್ ಪಕ್ಷ ಏನೇ ಆದರೂ ಕೂಡ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ. 120ರಿಂದ 130 ಸೀಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.