ಶ್ರೀರಂಗಪಟ್ಟಣ: ಕೆಆರ್ಎಸ್ ಅಣೆಕಟ್ಟೆಯಿಂದ ಕಾವೇರಿ ನದಿಗೆ 1,72,161 ಕ್ಯುಸೆಕ್ಸ್ ನೀರನ್ನು ನದಿಗೆ ಹರಿಸುತ್ತಿದ್ದು, ಜಲಾಶಯದ ತಗ್ಗಿನಲ್ಲಿರುವ ತೋಟ ತುಡಿಕೆ, ಸ್ಮಶಾನಗಳು ಮುಳುಗಡೆಯಾಗಿವೆ.ತಾಲ್ಲೂಕಿನ ಚಿಕ್ಕಪಾಳ್ಯ ಬಳಿ ಸಾರ್ವಜನಿಕ ಸ್ಮಶಾನ ಮುಳುಗಿದೆ.ಗಂಜಾಂನ ಕಾವೇರಿ ನದಿ ತೀರದ ಸ್ಮಶಾನ ಕೂಡ ಜಲಾವೃತವಾಗಿದೆ. ಗಂಜಾಂ ನಿಮಿಷಾಂಬ ದೇವಾಲಯದ ಮೆಟ್ಟಿಲುಗಳು ಸಂಪೂರ್ಣ ಮುಳುಗಿವೆ. ಹಂಗರಹಳ್ಳಿ ಗ್ರಾಮದ ಅಂಚಿನವರೆಗೂ ನದಿಯ ನೀರು ಚಾಚಿಕೊಂಡಿದೆ. ಶ್ರೀನಿವಾಸ ಅಗ್ರಹಾರದ ಬಳಿ ಕಬ್ಬು, ತೆಂಗು, ಬಾಳೆ ತೋಟಗಳು ಜಲಾವೃತವಾಗಿವೆ. ಕಾವೇರಿ ನದಿಯ ನೀರು ಲೋಕಪಾವನಿ ನದಿಗೆ ಹಿಮ್ಮುಖವಾಗಿ ಬರುತ್ತಿದ್ದು, ಬಾಬುರಾಯನಕೊಪ್ಪಲು ವರೆಗೂ ಜಮಾಯಿಸಿದೆ.ತಾಲ್ಲೂಕಿನ ದೊಡ್ಡಪಾಳ್ಯ ಸಮೀಪ ನದಿಯ ನೀರು ಹಳ್ಳಕ್ಕೆ ಹಿಮ್ಮುಖವಾಗಿ ಬರುತ್ತಿರುವುದರಿಂದ ಹಳ್ಳದ ಇಕ್ಕೆಲಗಳಲ್ಲಿರುವ ತೋಟ, ತುಡಿಕೆಗಳು ಜಲಾವೃತವಾಗಿವೆ. ಮರಳಾಗಾಲ, ಗಂಜಾಂ, ಮಹದೇವಪುರ, ಮೇಳಾಪುರ, ಚಂದಗಾಲು, ನಗುವನಹಳ್ಳಿ ಬಳಿ ನದಿ ಅಂಚಿನಲ್ಲಿರುವ ನೂರಾರು ಎಕರೆ ಕಬ್ಬಿನ ಬೆಳೆ ಜಲಾವೃತವಾಗಿದೆ.ಕಂದಕಕ್ಕೆ ನೀರು:ಪಟ್ಟಣದ ಅಂಬೇಡ್ಕರ್ ಭವನದ ಬಳಿ ಕಂದಕಕ್ಕೆ ಕಾವೇರಿ ನದಿಯ ನೀರು ನುಗ್ಗಿದ್ದು, ಮತ್ತೆ ನೀರು ನದಿಯೆಡೆಗೆ ಹರಿಯುತ್ತಿದೆ. ಬಿದ್ಕೋಟೆ ಗಣಪತಿ ದೇವಾಲಯ ನೀರಿನಲ್ಲಿ ಸಂಪೂರ್ಣ ಮುಳುಗಿದೆ. ಕಿರಂಗೂರು ವೃತ್ತದಿಂದ ವಿಸಿಆರ್ ಲೇಔಟ್ಗೆ ಇದ್ದ ಏಕೈಕ ಮಾರ್ಗದಲ್ಲಿ ನಾಲ್ಕು ಅಡಿಗಳಷ್ಟು ನೀರು ಹರಿಯುತ್ತಿದ್ದು, ಸಂಪರ್ಕ ಮತ್ತೆ ಕಡಿತಗೊಂಡಿದೆ. ಲೇಔಟ್ ನಿವಾಸಿಗಳು ಜಲ ದಿಗ್ಬಂಧನಕ್ಕೆ ಒಳಗಾಗಿದ್ದಾರೆ.ಪಟ್ಟಣದ ಸ್ನಾನಘಟ್ಟ, ಜೀಬಿ ಗೇಟ್, ಪಶ್ಚಿಮವಾಹಿನಿ ಬಳಿ ಕೂಡ ನೀರಿನ ಮಟ್ಟ ಹೆಚ್ಚಾಗಿದೆ. ಅತ್ತ ಯಾರೂ ಸುಳಿಯದಂತೆ ಬ್ಯಾರಿಕೇಡ್ ಅಳವಡಿಸಲಾಗಿದೆ.