ಮೈಸೂರು: 30 ವರ್ಷದ ರಾಜಕೀಯದಲ್ಲಿ ಇಂತವುಗಳನ್ನ ಬಹಳ ನೋಡಿದ್ದೇನೆ. ನಾನು ಯಾವುದಕ್ಕೂ, ಯಾವತ್ತೂ ಎಂದೆಗುಂದುವುದಿಲ್ಲ. ಎಲ್ಲಾದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದು ಮೈಸೂರಿನಲ್ಲಿ ಶಾಸಕ ಹೆಚ್.ಡಿ. ರೇವಣ್ಣ ಹೇಳಿದರು.
ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ಹೆಚ್.ಡಿ.ರೇವಣ್ಣ ಬಳಿಕ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗಳ ಜೊತೆ ಅನೌಪಚಾರಿಕವಾಗಿ ಅವರು ಮಾತನಾಡಿದರು. ನಮಗೆ ಸದ್ಯಕ್ಕೆ ದೇವರು ಬಿಟ್ಟರೇ ಇನ್ಯಾರು ಎಂದು ಮಾತು ಆರಂಭಿಸಿ, ”ನಾನು ಸದ್ಯಕ್ಕೆ ಜೈಲಿನಲ್ಲಿರುವ ಪ್ರಜ್ವಲ್ ಅವರ ಭೇಟಿಗೆ ಹೋಗುವುದಿಲ್ಲ. ನಾನು ಪ್ರಜ್ವಲ್ ಭೇಟಿಗೆ ಹೋದರೆ ಏನಾದರೂ ಹೇಳಿಬಿಟ್ಟಾರು ಅಂತ, ನಾನು ಪ್ರಜ್ವಲ್ ಭೇಟಿಗೆ ಸದ್ಯಕ್ಕೆ ಹೋಗುವುದಿಲ್ಲ. ನಿನ್ನೆ ನನ್ನ ಪತ್ನಿ ಹೋಗಿದ್ದಳು, ಮಗ ಅನ್ನೋ ಮಮತೆಯಿಂದ ತಾಯಿ ಹೋಗಿದ್ದರು. ತಾಯಿ- ಮಗ ಏನು ಮಾತನಾಡಿದರೋ ನನಗೆ ಗೊತ್ತಿಲ್ಲ. ಅದನ್ನ ಕೇಳಲು ಸಹ ಹೋಗಿಲ್ಲ ಎಂದರು.
ಸೂರಜ್ ರೇವಣ್ಣ ಮಹಾನ್ ದೈವ ಭಕ್ತ, ಅವನು ಬೇಗ ಹೊರ ಬರುತ್ತಾನೆ ಎಂಬ ನಂಬಿಕೆ ಇದೆ. ಉಳಿದ ಯಾವುದೇ ವಿಚಾರಗಳನ್ನ ನಾನು ಮಾತನಾಡುವುದಿಲ್ಲ. ಎಲ್ಲವೂ ನ್ಯಾಯಾಲಯದ ಮುಂದೆ ಇದೆ. ಎಲ್ಲವೂ ಮುಗಿಯಲಿ ಆಮೇಲೆ ಎಲ್ಲಾವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ. ಎಂತಹವರಿಗೂ ಕಷ್ಟ ಬರುತ್ತದೆ. ಅದರಲ್ಲಿ ನಮ್ಮದೇನು” ಎಂದು ಬೇಸರ ಹೊರ ಹಾಕಿದರು.